Asianet Suvarna News Asianet Suvarna News

ಸಂವಿಧಾನ ವಿರೋಧಿ ಶಾಸಕರೇ ಛೀ.. ಥೂ..

ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು ತಮ್ಮನ್ನು ತಾವು ಮಾರಿಕೊಳ್ಳುತ್ತಿರುವ ಶಾಸಕರಿಗೆದುರಾಗಿ ಶಿವಮೊಗ್ಗ ರೈತಸಂಘದ ಕಾರ್ಯಕರ್ತರು ಉಗಿಯುವ ಚಳವಳಿ ನಡೆಸಿದರು. ಸಾಗರದಲ್ಲೂ ಪ್ರತಿಭಟನೆ ನಡೆಯಿತು. ಸಾರ್ವಜನಿಕರೂ ಚಳವಳಿಯಲ್ಲಿ ಭಾಗವಹಿಸಿ, ಬೆಂಬಲ ನೀಡಿದರು.

Protest against Rebel lawmakers at Shivamogga
Author
Bangalore, First Published Jul 16, 2019, 8:46 AM IST

ಶಿವಮೊಗ್ಗ (ಜು.16) : ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಶಾಸಕರ ಪ್ರತಿಕೃತಿಗಳಿಗೆ ಉಗಿಯುವ ಮೂಲಕ ರೈತ ಸಂಘದ ಕಾರ್ಯಕರ್ತರು ಈ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುತ್ತಾ, ಜನರನ್ನು ಮರೆತು ಐಷಾರಾಮಿ ರೆಸಾರ್ಟ್‌ಗಳಲ್ಲಿ ಇರುವ ರಾಜೀನಾಮೆ ನೀಡಿರುವ ಶಾಸಕರ ವರ್ತನೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ.

ಶಾಸಕರಿಗೆ ಉಗಿಯುವ ಚಳವಳಿಯಲ್ಲಿ ಭಾಗಿಯಾದ ನೂರಾರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶಾಸಕರ ಪ್ರತಿಕೃತಿಗೆ ಛೀ.. ಥೂ.. ಎಂದು ಉಗಿದು ಪ್ರತಿಭಟನೆ ನಡೆಸಿದರು.

ಶಿವಪ್ಪ ನಾಯಕ ವೃತ್ತದಲ್ಲಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಶಾಸಕರ ಪ್ರತಿಕೃತಿಗಳನ್ನು ಇಟ್ಟುಕೊಂಡು ಅದಕ್ಕೆ ಛೀ.. ಥೂ ಎಂದು ಉಗಿಯುವ ಮೂಲಕ ಪ್ರತಿಭಟನೆ ನಡೆಸಿದರು. ನಾಗರಿಕರು ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ತಾವು ಸಹ ಉಗಿದು ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿರುವ, ರಾಜೀನಾಮೆ ನೀಡಿರುವ ಶಾಸಕರಿಗೆ ಛೀಮಾರಿ ಹಾಕಿದರು.

ಶಾಸಕರೆಂದರೆ ಮಾರಾಟದ ವಸ್ತುವಾಗಿ ಬಿಟ್ಟಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಇವರು ರೆಸಾರ್ಟ್‌ಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಾ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಇವು ಕೂಡ ಅನೈತಿಕ ಚಟುವಟಿಕೆ ಎಂದು ಟೀಕಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಲಿ:

ರಾಜ್ಯದ ಮೂರೂ ಪಕ್ಷಗಳು ಕೂಡ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿವೆ. ಇಂತಹ ರಾಜಕಾರಣಿಗಳಿಗೆ ಮತದಾರರೇ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುತ್ತಾರೆ. ಶಾಸಕರ ಇಂತಹ ವರ್ತನೆ ತಡೆಯಬೇಕು. ಕಾನೂನಿನ ಅಡಿಯಲ್ಲಿ ನುಸಿಯುವ, ಕಾನೂನಿಗೆ ಯಾವುದೇ ಬೆಲೆ ಇಲ್ಲದಂತೆ ಮಾಡುವ, ಕಾನೂನನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಇವರಿಂದ ಪ್ರಜಾತಂತ್ರವೇ ತಲೆ ತಗ್ಗಿಸಬೇಕಾಗಿದೆ. ಇದೆಲ್ಲ ಸರಿಯಾಗಬೇಕಾದರೆ ಪಕ್ಷಾಂತರ ನಿಷೇಧ ಮಸೂದೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಮತ್ತು ಸ್ವಾರ್ಥಕ್ಕಾಗಿ, ಹಣಕ್ಕಾಗಿ ಪಕ್ಷಾಂತರ ಮಾಡಿದ ಶಾಸಕರು ಮತ್ತೆಂದೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ಜಾರಿಯಾಗಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಶಾಸಕರಿಗೆ ಉಗಿಯುವ ವಿಶೇಷ ಚಳವಳಿ

ಉಗಿಯುವ ಚಳವಳಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ಪ್ರಮುಖರಾದ ಕೆ. ರಾಘವೇಂದ್ರ, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಬಿ.ಎಂ. ಚಿಕ್ಕಸ್ವಾಮಿ, ಎಸ್‌. ಶಿವಮೂರ್ತಿ, ಅರೆಬಿಳಚಿ ಶಿವಣ್ಣ, ರಾಮಚಂದ್ರಪ್ಪ, ಇ.ಬಿ. ಜಗದೀಶ್‌ ಇದ್ದರು.

ಸಾಗರದಲ್ಲೂ ಚಳವಳಿಗೆ ಬೆಂಬಲ:

ಪ್ರಜಾಪ್ರಭುತ್ವ ಮೌಲ್ಯವನ್ನು ಮೂಲೆಗುಂಪು ಮಾಡಿ ರೆಸಾರ್ಟ್‌ನಲ್ಲಿ ಕುಳಿತು ರಾಜ್ಯದ ಹಿತ ಮರೆತಿರುವ ಶಾಸಕರ ವರ್ತನೆಯನ್ನು ಖಂಡಿಸಿ ಸೋಮವಾರ ರೈತ ಸಂಘದ ತಾಲೂಕು ಶಾಖೆ ಹಾಗೂ ಹಸಿರುಸೇನೆ ವತಿಯಿಂದ ಸಾಗರದಲ್ಲಿ ಛೀ...ಥೂ... ಚಳವಳಿ ನಡೆಸಲಾಯಿತು. ರೇಲ್ವೆ ಸ್ಟೇಷನ್‌ ವೃತ್ತದಿಂದ ಹೊರಟ ಮೆರವಣಿಗೆ ಸಂದರ್ಭದಲ್ಲಿ ರೆಸಾರ್ಟ್‌ನಲ್ಲಿರುವ ಶಾಸಕರ ಭಾವಚಿತ್ರಕ್ಕೆ ರೈತ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಗಿಯುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಲಾಯಿತು.

Follow Us:
Download App:
  • android
  • ios