ಶಾಸಕರಿಗೆ ಉಗಿಯುವ ವಿಶೇಷ ಚಳವಳಿ
ಶಿವಮೊಗ್ಗದ ಶಿವಪ್ಪನಾಯಕ ಸರ್ಕಲ್‌ನಲ್ಲಿ ಜು.15ರಂದು ಶಾಸಕರಿಗೆ ಉಗಿಯುವ ವಿಶೇಷ ಚಳವಳಿ ನಡೆಯಲಿದೆ. ರೈತ ಸಂಘ ಈ ಚಳವಳಿಯನ್ನು ಹಮ್ಮಿಕೊಂಡಿದ್ದು, ಬೆಳಗ್ಗೆ 10 ಗಂಟೆಯಿಂದ ಚಳವಳಿ ನಡೆಯಲಿದೆ.
ಶಿವಮೊಗ್ಗ (ಜು.13): ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿರುವ ಶಾಸಕರಿಗೆ ಉಗಿಯುವ ವಿಶೇಷ ಚಳವಳಿಯನ್ನು ರೈತ ಸಂಘ ಜು.15ರಂದು ಬೆಳಗ್ಗೆ 10 ಗಂಟೆಗೆ ಶಿವಪ್ಪನಾಯಕ ಸರ್ಕಲ್‌ನಲ್ಲಿ ಹಮ್ಮಿಕೊಂಡಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯದ ರಾಜಕಾರಣ ದಿಕ್ಕು ತಪ್ಪಿದೆ. ನಮ್ಮ ಶಾಸಕರಿಗೆ, ಮಂತ್ರಿಗಳಿಗೆ ಹಣ ಮಾಡುವುದೇ ಉದ್ದೇಶವಾಗಿದೆ. ರಾಜೀನಾಮೆ ಎಂಬುದು ಒಂದು ಹೇಯಕೃತ್ಯ. ಇದನ್ನು ಖಂಡಿಸಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ' ಎಂದರು.
21ರಂದು ಸಮಾವೇಶ:
ನರಗುಂದ ನವಿಲುಗುಂದ 39ನೇ ವರ್ಷದ ಹುತಾತ್ಮರ ದಿನಾಚರಣೆ ಅಂಗವಾಗಿ ಭೀಕರ ಬರಗಾಲವನ್ನು ಸಮರ್ಥವಾಗಿ ನಿಭಾಯಿಸದ, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡದ, ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ನೀಡದ, ನೀರಾವರಿ ಯೋಜನೆ ಜಾರಿ ಮಾಡದ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ತೀರ್ಮಾನಗಳನ್ನು ನಿರ್ಣಯಿಸಲು ಜು.21 ರಂದು ಬೆಳಗ್ಗೆ 11 ಗಂಟೆಗೆ ದಾರವಾಡದ ಕಲಾಭವನದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ನಬಾರ್ಡ್‌ನಿಂದ ಮೊದಲಿನಂತೆ ಶೇ.75ರಷ್ಟುಸಾಲ ಕೊಡಿಸಬೇಕು. ರಾಜ್ಯ ಸರ್ಕಾರ ಘೋಷಣೆ ಮಾಡಿದ ಸಾಲ ಮನ್ನಾ ಹಣ ಪೂರ್ತಿಯಾಗಿ ಬಿಡುಗಡೆ ಮಾಡಬೇಕು, ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಹಾಲಿನ ದರ ಹೆಚ್ಚಿಸಬೇಕು, ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಘವೇಂದ್ರ ಕೆ., ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಬಿ.ಎಂ. ಚಿಕ್ಕಸ್ವಾಮಿ ಇದ್ದರು.