ದಾವಣಗೆರೆ(ಜು.16): ಮತದಾರರು ಹಾಗೂ ಕ್ಷೇತ್ರಗಳನ್ನು ಕಡೆಗಣಿಸಿ ಸ್ವಾರ್ಥಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಡಕೆ -ಎಲೆ ಜಗಿದು ಆ ಭಾವಚಿತ್ರಗಳ ಮೇಲೆ ಉಗುಳುವ ಮೂಲಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಛೀ.. ಥೂ... ಚಳವಳಿ ನಡೆಸಲಾಯಿತು.

ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಬಳಿ ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಮುಖಂಡರು ಮಾತನಾಡಿ, ಸದುದ್ದೇಶದಿಂದ ವಿಧಾನಸಭೆಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ಸರ್ಕಾರದ ಮಟ್ಟದಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ, ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲಾಗದ ಶಾಸಕರು ಕುಂಟು ನೆಪ ಹೇಳಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಖಂಡನೀಯ ಎಂದರು.
ಸಂವಿಧಾನ ವಿರೋಧಿ ಶಾಸಕರೇ ಛೀ.. ಥೂ..

ಕ್ಷೇತ್ರ, ಜನರ ಕೆಲಸ ಮಾಡುವುದನ್ನು ಬಿಟ್ಟು, ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೈತ್ರಿ ಪಕ್ಷಗಳ 15 ಶಾಸಕರ ಭಾವಚಿತ್ರಕ್ಕೂ ಚಪ್ಪಲಿ ಹಾರ ಹಾಕಿ, ಅಡಿಕೆ-ಎಲೆ ಹಾಕಿಕೊಂಡು ಛೀ.. ಥೂ... ಅಂತಾ ಉಗಿಯುತ್ತಿದ್ದೇವೆ. ಕನಿಷ್ಟಮಾನ, ಮರ್ಯಾದೆ, ಆತ್ಮಗೌರವ, ಆತ್ಮಸಾಕ್ಷಿ ಏನಾದರೂ ಈ ಶಾಸಕರುಗಳಿಗೆ ಇದ್ದರೆ ತಮ್ಮ ಜವಾಬ್ಧಾರಿ ಅರಿತು ವರ್ತಿಸಲಿ ಎಂದು ಅವರು ತಾಕೀತು ಮಾಡಿದರು.

ಕಠಿಣ ಕ್ರಮಕ್ಕೆ ಒತ್ತಾಯ:

ರಾಜೀನಾಮೆ ಕೊಟ್ಟಿರುವ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ, ರೈತರ ಸಂಕಷ್ಟಗಳ ಪರಿಹಾರಕ್ಕಾಗಲೀ, ಕ್ಷೇತ್ರದ ಅಭಿವೃದ್ಧಿಗಾಗಿ ಒತ್ತಾಯಿಸಿ ಏನೂ ರಾಜೀನಾಮೆ ನೀಡಿಲ್ಲ. ಕೇವಲ ಸ್ವಾರ್ಥ ಸಾಧನೆಗಾಗಿ ರಾಜೀನಾಮೆ ನೀಡಿದ್ದಾರೆ. ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಂಡ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಧ್ಯಂತರ ಚುನಾವಣೆ ಘೋಷಿಸಲು ಆಗ್ರಹ

ಮತದಾರರ ಆಶಯಗಳನ್ನು 15 ಶಾಸಕರು, ಮೂರೂ ರಾಜಕೀಯ ಪಕ್ಷಗಳೂ ಸಂಪೂರ್ಣವಾಗಿ ಧಿಕ್ಕರಿಸಿ ವರ್ತಿಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ 15 ಶಾಸಕರ ರಾಜೀನಾಮೆ ಹಿನ್ನೆಲೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಘೋಷಿಸಬೇಕು. ಇನ್ನಾದರೂ ಚುನಾವಣೆಯಲ್ಲಿ ರೈತರ ಪರ ಕೆಲಸ ಮಾಡುವ ಪ್ರಾಮಾಣಿಕ ಬದ್ಧತೆ, ಕಾಳಜಿ ಇರುವಂತಹ ಯೋಗ್ಯರನ್ನು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡುವತ್ತ ರಾಜ್ಯದ ಜನತೆ ಗಮನ ಹರಿಸಬೇಕಾಗಿದೆ ಎಂದು ಸಂಘಟನೆ ಮುಖಂಡರು ಮನವಿ ಮಾಡಿದರು.

ಮುಖಂಡ ದೊಡ್ಡೇರಿ ಬಸವರಾಜಪ್ಪ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ, ಕಲೀಂವುಲ್ಲಾ, ಕಾಳೇಶ, ಗೋಶಾಲೆ ಬಸವರಾಜ, ಅಣ್ಣಪ್ಪ, ಚಂದ್ರಪ್ಪ, ರೇವಣಸಿದ್ದಪ್ಪ, ಮಂಜುನಾಥ, ಹನುಮೇಶ ಇದ್ದರು.