ಬೆಂಗಳೂರು [ಜ.11]:  ಅನೇಕ ವರ್ಷಗಳಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸದೆ ಕೋಟ್ಯಂತರ ರುಪಾಯಿ ಬಾಕಿ ಉಳಿಸಿಕೊಂಡು ಬಂದಿದ್ದ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಹಲವು ಕಂಪನಿ, ಕೈಗಾರಿಕೆಗಳಿಗೆ ದಿಢೀರ್‌ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ಪೀಠೋಪಕರಣಗಳನ್ನು ಜಪ್ತಿ ಮಾಡಿ ಬೀಗ ಜಡಿಸಿದ್ದಾರೆ.

ಜೆಡಿಎಸ್‌ ಶಾಸಕ ಡಿ.ಸಿ.ತಮ್ಮಣ್ಣ ಅವರ ಪತ್ನಿ ಜಿ.ಕೆ.ಪ್ರಮೀಳಾ ಒಡೆತನದ ಪೀಣ್ಯದ ಶಕ್ತಿ ಇಂಡಸ್ಟ್ರೀಸ್‌ ಸೇರಿದಂತೆ ವಿವಿಧ ಗಾಮೆಂಟ್ಸ್‌ ಕಂಪನಿ, ಆಸ್ಪತ್ರೆ, ಹೋಟೆಲ್‌ ಸೇರಿದಂತೆ ಎಂಟು ವಾಣಿಜ್ಯ ಉದ್ಯಮಗಳ ಮೇಲೆ ದಾಳಿ ನಡೆದಿದೆ. ದಾಳಿ ಬಳಿಕ ಕೆಲವು ಕಂಪನಿಗಳು ಸ್ಥಳದಲ್ಲೇ ಭಾಗಶಃ ತೆರಿಗೆ ಬಾಕಿ ಪಾವತಿಸಿದ್ದಾರೆ. ಬಾಕಿ ಪಾವತಿಸದ ಕಂಪನಿಗಳ ಪೀಠೋಪಕರಣ ಜಪ್ತಿ ಮಾಡಿದ ಅಧಿಕಾರಿಗಳು ಬೀಗ ಹಾಕಿದ್ದಾರೆ. ಅಲ್ಲದೆ, ಆ ಸಂಸ್ಥೆಗಳ ಗೋಡೆಗಳ ಮೇಲೆ ‘ಬಿಬಿಎಂಪಿಗೆ ಸೇರಿ ಆಸ್ತಿ’ ಎಂದು ನೋಟಿಸ್‌ ಅಂಟಿಸಿದ್ದಾರೆ.

ಬಿಬಿಎಂಪಿ ವಲಯ ಉಪ ಆಯುಕ್ತ ಕೆ.ಶಿವೇಗೌಡ, ಕಂದಾಯ ಅಧಿಕಾರಿಗಳಾದ ಸಂತೋಷ್‌ ಕುಮಾರ್‌, ಜಿ.ಹನುಮಂತಪ್ಪ, ಬಸವೇಗೌಡ, ಶ್ರೀನಿವಾಸ್‌ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಮೈಸೂರು ರಸ್ತೆ, ಜ್ಞಾನಭಾರತಿ ಬಡಾವಣೆ, ಪೀಣ್ಯ, ಮೈಲಸಂದ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ.

ನಗರದಲ್ಲಿ ಎಷ್ಟಿದ್ದಾರೆ ಸೂರಿಲ್ಲದ ನಿರ್ಗತಿಕರು!...

5.72 ಕೋಟಿ ರು. ವಸೂಲಿ: ಪಾಲಿಕೆ ಅಧಿಕಾರಿಗಳು ಬರೋಬ್ಬರಿ 13.79 ಕೋಟಿ ರು. ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮೈಲಸಂದ್ರದ ಟ್ಯಾಂಗ್ಲಿನ್‌ ಡೆವಲಪ್‌ಮೆಂಟ್ಸ್‌ ಪ್ರೈ.ಲಿ. ಮೇಲೆ ದಾಳಿ ನಡೆಸಿ ಬೀಗ ಹಾಕಲು ಮುಂದಾದಾಗ ತಕ್ಷಣ 5.72 ಕೋಟಿ ರು. ಕಂಪನಿಯವರು ಚೆಕ್‌ ಮೂಲಕ ಪಾವತಿಸಿದ್ದಾರೆ. ಇದರಿಂದ ಅಧಿಕಾರಿಗಳು ಕಂಪನಿಗೆ ಬೀಗ ಹಾಕುವುದನ್ನು ನಿಲ್ಲಿಸಿ ಬಾಕಿ ತೆರಿಗೆ ಮೊತ್ತ ಪಾವತಿಸಲು ಗಡುವು ನೀಡಿ ಬಂದಿದ್ದಾರೆ. ಅಲ್ಲದೆ, 1.52 ಕೋಟಿ ರು. ಬಾಕಿ ಉಳಿಸಿಕೊಂಡಿರುವ ಮೈಸೂರು ರಸ್ತೆಯ ಲೀಲ ಸ್ಕಾಟಿಸ್‌ ಪ್ರೈ.ಲಿ., 32 ಲಕ್ಷ ರು. ಬಾಕಿ ಉಳಿಸಿಕೊಂಡಿರುವ ಜ್ಞಾನಭಾರತಿ ಬಡಾವಣೆಯ ಮೆಡ್‌ಸಾಲ್‌ ಆಸ್ಪತ್ರೆ, ಜೈನ್‌ ಚಾರಿಟಬಲ್‌ ಟ್ರಸ್ಟ್‌ ಮೇಲೆ ದಾಳಿ ನಡೆಸಿ ಬೀಗ ಜಡಿಸಿದ್ದಾರೆ.

ಶಾಸಕರ ಪತ್ನಿ ಒಡೆತನದ ಕಂಪನಿ ಮೇಲೆ ದಾಳಿ:

ಶಾಸಕ ಡಿ.ಸಿ.ತಮ್ಮಣ್ಣ ಅವರ ಪತ್ನಿ ಕೆ.ಜಿ.ಪ್ರಮೀಳಾ ಅವರ ಒಡೆತನದ ಪೀಣ್ಯಾದ ಶಕ್ತಿ ಇಂಡಸ್ಟ್ರೀಸ್‌ ಪಾಲಿಕೆಗೆ 32 ಲಕ್ಷ ರು. ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಕಂಪನಿ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದಾರೆ. ಅದೇ ರೀತಿ ಮುರಳೀಧರ ಡಿಸ್ಪಿಲರೀಸ್‌ನಿಂದ 32 ಲಕ್ಷ ರು., ಶಿವಬೋಜ್‌ ಹೋಟೆಲ್‌ 32 ಲಕ್ಷ ರು., ಶರಣವ ಐರನ್‌ ಅಲಯನ್ಸ್‌ 32 ಲಕ್ಷ ರು. ತೆರಿಗೆ ಬಾಕಿ ಇದ್ದು, ತೆರಿಗೆ ಪಾವತಿಸಲು ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಅನಧಿಕೃತ ಪಬ್, ಬಾರ್ ಗಳೇ ಹೆಚ್ಚು !...

ಹಲವು ವರ್ಷಗಳಿಂದ ಪಾಲಿಕೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಿವಿಧ ಕಂಪನಿಗಳಿಗೆ ಭೇಟಿ ನೀಡಿ ತಕ್ಷಣ ತೆರಿಗೆ ಪಾವತಿಸಲು ಸೂಚಿಸಲಾಗಿದೆ. ಕೆಲ ಕಂಪನಿಗಳ ಪೀಠೋಪಕರಣ ಜಪ್ತಿ ಮಾಡಿ ಬೀಗ ಹಾಕಲಾಗಿದೆ. ಮೊದಲ ಹಂತದಲ್ಲಿ ಇದು ಪಾಲಿಕೆ ಆಸ್ತಿ ಎಂಬ ನೋಟಿಸನ್ನು ಕಂಪನಿಗಳ ಗೋಡೆಗಳಿಗೆ ಅಂಟಿಸಿ ಎಚ್ಚರಿಕೆ ನೀಡಲಾಗಿದೆ. ತಕ್ಷಣ ಆ ಸಂಸ್ಥೆಯವರು ತೆರಿಗೆ ಪಾವತಿಸಿದ್ದರೆ ಮುಂದಿನ ಹಂತದಲ್ಲಿ ಪೀಠೋಪಕರಣ ಜಪ್ತಿ ಮಾಡಿ ಬೀಗಮುದ್ರೆ ಹಾಕಲಾಗುತ್ತದೆ.

-ಕೆ.ಶಿವೇಗೌಡ, ಉಪ ಆಯುಕ್ತ, ಆರ್‌.ಆರ್‌.ನಗರ ವಲಯ.