Asianet Suvarna News Asianet Suvarna News

ಬೆಂಗಳೂರಿನಲ್ಲಿ ಅನಧಿಕೃತ ಪಬ್, ಬಾರ್ ಗಳೇ ಹೆಚ್ಚು !

ಬೆಂಗಳೂರಿನಲ್ಲಿ ಅಧಿಕೃತಕ್ಕಿಂತ ಅನಧಿಕೃತ ಉದ್ದಿಮೆಗಳ ಸಂಖ್ಯೆಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಇದೆ. ಪಾಲಿಕೆ ಈ ನಿಟ್ಟಿನಲ್ಲಿ ನಡೆಸಿದ ಸರ್ವೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 

BBMP Conduct Survey On Illegal Bars And Pubs
Author
Bengaluru, First Published Jan 3, 2020, 8:22 AM IST
  • Facebook
  • Twitter
  • Whatsapp

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು [ಜ.03]:  ನಗರದಲ್ಲಿ ಅಧಿಕೃತವಾಗಿ ಬಿಬಿಎಂಪಿಯಿಂದ ಪರವಾನಗಿ ಪಡೆದು ವ್ಯಾಪಾರ, ವಹಿವಾಟು ನಡೆಸುತ್ತಿರುವ ಉದ್ದಿಮೆಗಳಿಂತ ಅನಧಿಕೃತವಾಗಿ ನಡೆಯುತ್ತಿರುವ ಉದ್ದಿಮೆಗಳ ಸಂಖ್ಯೆಯೇ ಹೆಚ್ಚು ಎಂಬ ಅಂಶ ಪಾಲಿಕೆ ಅಧಿಕಾರಿಗಳೇ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ನಗರದ 198 ವಾರ್ಡ್‌ಗಳಲ್ಲಿ ಬಿಬಿಎಂಪಿ ಆರೋಗ್ಯಇಲಾಖೆಯಿಂದ ಅಧಿಕೃತವಾಗಿ ಪರವಾನಗಿ ಪಡೆದು 50,383 ಉದ್ದಿಮೆಗಳು ವ್ಯಾಪಾರ ನಡೆಸುತ್ತಿವೆ. ಆದರೆ, ಅನಧಿಕೃತವಾಗಿ ನಡೆಯುತ್ತಿರುವ ಉದ್ದಿಮೆಗಳ ಸಂಖ್ಯೆ 59,130. ಇದು ಅಧಿಕೃತ ಪರವಾನಗಿ ಉದ್ದಿಮೆಗಳಿಗಿಂತ ಹೆಚ್ಚೆಂಬುದು ಗಮನಿಸಬೇಕಾದ ಅಂಶವಾಗಿದೆ.

ಅಷ್ಟೇ ಅಲ್ಲದೇ ನಗರದಲ್ಲಿರುವ ಅಧಿಕೃತ ಮತ್ತು ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌, ರೂಫ್‌ ಟಾಪ್‌ ಟ್ರೇಡರ್ಸ್‌ಗಳನ್ನು ಪ್ರತ್ಯೇಕವಾಗಿ ಸಮೀಕ್ಷೆ ಮಾಡಿದೆ. ಆ ಪ್ರಕಾರ 877 ಅಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಅನಧಿಕೃತವಾಗಿ 169 ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ 129ಕ್ಕೆ ಈಗಾಗಲೇ ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಈ ಕುರಿತ ಅಂಕಿ ಅಂಶ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ನಗರದ ವಸತಿ ಪ್ರದೇಶದಲ್ಲಿರುವ ಅನಧಿಕೃತ ವಾಣಿಜ್ಯಉದ್ದಿಮೆಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಉದ್ದಿಮೆಗಳ ವಿರುದ್ಧ ಬಿಬಿಎಂಪಿಗೆ ದೂರು ನೀಡುವ ಆಂದೋಲನವನ್ನು ಕಳೆದ ಸೆಪ್ಟಂಬರ್‌ನಲ್ಲಿ ರಾಜ್ಯಸಭಾ ಸದಸ್ಯರಾಜೀವ್‌ ಚಂದ್ರಶೇಖರ್‌ ಆರಂಭಿಸಿದ್ದರು. ನಂತರ ನ.5ರಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರನ್ನು ಭೇಟಿ ಮಾಡಿದ್ದ ರಾಜೀವ್‌ ಚಂದ್ರಶೇಖರ್‌, ವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಅನಧಿಕೃತ ಉದ್ದಿಮೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ನಗರ 198 ವಾರ್ಡ್‌ಗಳಲ್ಲಿ ‘ವಾರ್ಡ್‌ವಾರು’ ಅನಧಿಕೃತ ಪಬ್‌, ಬಾರ್‌, ರೆಸ್ಟೋರೆಂಟ್‌ ಸೇರಿದಂತೆ ವಾಣಿಜ್ಯ ಉದ್ದಿಮೆಗಳ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಅದರಂತೆ ಡಿ.5ರಿಂದ ಬಿಬಿಎಂಪಿ 198 ವಾರ್ಡ್‌ಗಳ ಹಿರಿಯ ಆರೋಗ್ಯ ಪರಿವೀಕ್ಷಕರು ಅಧಿಕೃತ ಮತ್ತು ಅನಧಿಕೃತ ಉದ್ದಿಮೆಗಳ ಅಂಕಿ ಅಂಶಗಳನ್ನು ಕಲೆಹಾಕಿ ಆಯುಕ್ತರಿಗೆ ವರದಿ ನೀಡಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ನಿರೀಕ್ಷೆಯಷ್ಟುಅನಧಿಕೃತ ಉದ್ದಿಮೆಗಳು ಪತ್ತೆಯಾಗದಿರುವುದಕ್ಕೆ ಸಮೀಕ್ಷೆಯಲ್ಲಿ ಯಾವ ವಾರ್ಡ್‌ಗಳಲ್ಲಿ ಯಾವುದೇ ಅನಧಿಕೃತ ಉದ್ದಿಮೆಗಳಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಂತಹ ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡು ಬೇರೆ ವಾರ್ಡ್‌ನ ಅಧಿಕಾರಿಗಳಿಂದ ಮರು ಸಮೀಕ್ಷೆ ನಡೆಸುವುದಕ್ಕೆ ಬಿಬಿಎಂಪಿ ಆರೋಗ್ಯಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಮುಂದಿನ ಕ್ರಮ?

ನಗರದಲ್ಲಿ ಅಪಾರ ಸಂಖ್ಯೆಯ ಉದ್ದಿಮೆಗಳಿದ್ದರೂ ಬಿಬಿಎಂಪಿಯಿಂದ ಅಧಿಕೃತವಾಗಿ ಉದ್ದಿಮೆ ಪರವಾನಗಿ ಪಡೆದು ಉದ್ದಿಮೆ ನಡೆಸುತ್ತಿರುವವರ ಸಂಖ್ಯೆ ಕೇವಲ 50 ಸಾವಿರ. ಆದರೆ, ಬೆಸ್ಕಾಂನಲ್ಲಿ ಸುಮಾರು ಐದು ಲಕ್ಷಕ್ಕೂ ಅಧಿಕ ಗ್ರಾಹಕರು ವಾಣಿಜ್ಯಬಳಕೆಗೆ ಸಂಪರ್ಕ ಪಡೆದುಕೊಂಡಿದ್ದಾರೆ. ಎರಡೂ ಅಂಕಿ ಅಂಶಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬಿಬಿಎಂಪಿಗೆ ವಂಚಿಸಿ ಉದ್ದಿಮೆ ನಡೆಸುವವರ ವಿರುದ್ಧ ಸಮೀಕ್ಷೆ ನಂತರ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ವಲಯ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ

ವಸತಿ ಪ್ರದೇಶದಲ್ಲಿ ಉದ್ದಿಮೆ ಪರವಾನಗಿ ನೀಡುವುದಕ್ಕೆ ಅವಕಾಶವಿಲ್ಲ. ಆದರೂ, ನಗರದ ಹಲವು ವಸತಿ ಪ್ರದೇಶದಲ್ಲಿ ಹೋಟಲ್‌, ಔಷಧಿ ಅಂಗಡಿ, ತರಕಾರಿ ವ್ಯಾಪಾರ ನಡೆಯುತ್ತಿದೆ. ಇದರಿಂದ ಬಿಬಿಎಂಪಿಗೆ ಆದಾಯ ನಷ್ಟಉಂಟಾಗುತ್ತಿದೆ. ಅದನ್ನು ತಡೆಗಟ್ಟುವುದರ ಜತೆಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಅವಶ್ಯವಾದ ಉದ್ದಿಮೆಗಳಿಗೆ ಮಾತ್ರ ವಸತಿ ಪ್ರದೇಶದಲ್ಲಿ ಅವಕಾಶ ನೀಡುವ ಸಂಬಂಧಿಸಿದಂತೆ ‘ವಲಯ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ಮಾಡಿರುವ ಬಿಬಿಎಂಪಿ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಕಡತವಿದ್ದು, ಶೀಘ್ರದ ಅನುಮೋದನೆ ಪಡೆಯುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

300 ಕೋಟಿ ರು. ಆದಾಯ

ಅನಧಿಕೃತವಾದ ಉದ್ದಿಮೆಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವುದರಿಂದ ಬಿಬಿಎಂಪಿಗೆ ಸುಮಾರು 200 ರಿಂದ 300 ಕೋಟಿ ರು. ಆದಾಯ ಬರಲಿದೆ. ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುತ್ತೇವೆ.

- ಬಿ.ಎಚ್‌. ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತರು

ವಲಯವಾರು ಉದ್ದಿಮೆಗಳ ವಿವರ

ವಲಯ ಅಧಿಕೃತ ಅನಧಿಕೃತ

ದಕ್ಷಿಣ 11,691 23,380

ಪೂರ್ವ 7785 10,508

ಪಶ್ಚಿಮ 12,700 15,739

ಯಲಹಂಕ 2,554 1,345

ಮಹದೇವಪುರ 5,046 2,962

ಬೊಮ್ಮನಹಳ್ಳಿ 3,047 1,832

ದಾಸರಹಳ್ಳಿ 2,631 984

ಆರ್‌ಆರ್‌ನಗರ 4,929 2,380

ಒಟ್ಟು 50,383 59,130

ವಲಯವಾರು ಪಬ್ಸ್‌-ಬಾರ್‌ ವಿವರ

ವಲಯ ಅಧಿಕೃತ ಅನಧಿಕೃತ ನೋಟಿಸ್‌

ದಕ್ಷಿಣ 217 10 10

ಪೂರ್ವ 255 45 28

ಪಶ್ಚಿಮ 137 21 21

ಯಲಹಂಕ 61 07 07

ಮಹದೇವಪುರ 81 16 16

ಬೊಮ್ಮನಹಳ್ಳಿ 53 20 8

ದಾಸರಹಳ್ಳಿ 24 12 12

ಆರ್‌ಆರ್‌ನಗರ 49 38 27

ಒಟ್ಟು 877 169 129

ಸಮೀಕ್ಷೆ ಹೇಗೆ?

ಬಿಬಿಎಂಪಿಯ ಪ್ರತಿ ವಾರ್ಡ್‌ಗೆ ನೇಮಿಸಲಾಗಿರುವ ಆರೋಗ್ಯ ವಿಭಾಗ ಹಿರಿಯ ಪರಿವೀಕ್ಷಕರಿಗೆ ಸಮೀಕ್ಷೆಗೆ ಸೂಚಿಸಲಾಗಿದೆ. ಅವರು ತಮ್ಮ ವಾರ್ಡ್‌ನ ಪ್ರತಿ ಬೀದಿಯಲ್ಲಿರುವ ವಾಣಿಜ್ಯ ಮಳಿಗೆಗೆ ಭೇಟಿ ನೀಡಿ ಯಾವ ಉದ್ದಿಮೆ ನಡೆಸಲಾಗುತ್ತಿದೆ. ಅದರ ವಿಳಾಸ, ಉದ್ದಿಮೆದಾರರ ಹೆಸರು, ಬಿಬಿಎಂಪಿಯಿಂದ ಪರವಾನಗಿ ಪಡೆಯಲಾಗಿದೆಯೇ ಅಥವಾ ಇಲ್ಲವೇ? ಪರಿಶೀಲಿಸಿದ್ದಾರೆ. ಈ ವೇಳೆ ಪರವಾನಗಿ ಪಡೆದಿರುವ ಉದ್ದೇಶ, ಅದರಂತೆಯೇ ಉದ್ದಿಮೆ ನಡೆಸಲಾಗಿದೆಯೇ? ಕಾಲಕಾಲಕ್ಕೆ ಪರವಾನಗಿ ನವೀಕರಿಸಲಾಗಿದೆಯೇ? ಅಥವಾ ಇಲ್ಲವೇ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಅದರೊಂದಿಗೆ ಯಾವ ರಸ್ತೆಯಲ್ಲಿ ಎಷ್ಟುವಾಣಿಜ್ಯ ಮಳಿಗೆಗಳಿವೆ? ಅದರಲ್ಲಿ ಎಷ್ಟುಅಧಿಕೃತ, ಎಷ್ಟುಅನಧಿಕೃತ ಎಂಬ ಮಾಹಿತಿಯನ್ನು ಪರಾಮರ್ಶಿಸಿ ವರದಿ ಸಲ್ಲಿಕೆ ಮಾಡಿದ್ದಾರೆ.

Follow Us:
Download App:
  • android
  • ios