ಹುಬ್ಬಳ್ಳಿ(ಏ.29): ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಕಂಪನಿ ಹಾಗೂ ಸಂಸ್ಥೆಗಳು ತನ್ನ ಸಿಬ್ಬಂದಿ ಸಂಬಳ ಕಡಿತಗೊಳಿಸಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಷ್ಟ ನಿರ್ದೇಶನ ನೀಡಿವೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಕೆಲವು ಖಾಸಗಿ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರಿಗೆ 3 ತಿಂಗಳಿನಿಂದ ಆಡಳಿತ ಮಂಡಳಿಗಳು ಸಂಬಳ ನೀಡಿಲ್ಲ. ಇದರಿಂದಾಗಿ ಸಾವಿರಾರು ಶಿಕ್ಷಕರು ಸಂಬಳ ಇಲ್ಲದೇ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಎಂಎಲ್‌ಸಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾಕಾರಿಗೆ ಪತ್ರ ಬರೆದಿರುವ ಅವರು, 350ಕ್ಕೂ ಹೆಚ್ಚು ಖಾಸಗಿ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳು ಇವೆ. 3500 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಶಿಕ್ಷಕೇತರರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 3 ತಿಂಗಳಿನಿಂದ ಇವರಿಗೆ ಸಂಬಳ ನೀಡಿಲ್ಲ. 20 ರಿಂದ 25 ವರ್ಷ ಸೇವಾವಧಿ ಸಲ್ಲಿಸಿದರೂ ಕೇವಲ 25 ಸಾವಿರ ವೇತನ ಪಡೆಯುತ್ತಿದ್ದಾರೆ. ಇಂತಹ ಗಂಭೀರ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಸಂಸಾರ ನಡೆಸಲು ಕಷ್ಟ ಪಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಅಜ್ಜಿ ಮನೆಗೆ ಬಂದು ಕೊರೋನಾ ಸೋಂಕು ಅಂಟಿಸಿಕೊಂಡ ಬಾಲಕಿ

ಈ ವಿಷಯವಾಗಿ ಕೆಲವರು ನನ್ನೆದುರಿಗೆ ಕಣ್ಣೀರು ಹಾಕಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಬಳ ಕಡಿತ ಮಾಡಬಾರದು ಎಂದು ಆದೇಶ ಹೊರಡಿಸಿದರೂ, ಕೆಲವು ಆಡಳಿತ ಮಂಡಳಿಗಳು ಪಾಲಿಸುತ್ತಿಲ್ಲ. ಸಂಬಳ ನೀಡಲು ಹಣವಿದ್ದರೂ ಸಂಬಳ ಪಾವತಿಸದೇ ಇರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಈಗಾಗಲೇ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಹಾಗೂ ಡಿಡಿಪಿಐ ಜತೆಗೆ ಮಾತನಾಡಿದ್ದೇನೆ. ಈ ವಿಷಯವಾಗಿ ಅನುದಾನರಹಿತ ಆಂಗ್ಲ ಮಾಧ್ಯಮ ನೌಕರರ ಸಂಘದವರು ಈಗಾಗಲೇ ತಮಗೆ ಹಾಗೂ ಇಲಾಖೆಗೆ ಮನವಿ ಸಲ್ಲಿಸಿದ್ದು ವೇತನ ಬಿಡುಗಡೆ ಮಾಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.