ಜ.19ಕ್ಕೆ ಕಲಬುರಗಿಗೆ ಪ್ರಧಾನಿ, ಎಐಸಿಸಿ ಅಧ್ಯಕ್ಷ ಖರ್ಗೆ ತವರಲ್ಲಿ ಮೋದಿ ಮೋಡಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 19 ರಂದು ಆಗಮಿಸಲಿದ್ದಾರೆ. ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಲಬುರಗಿ (ಜ.10): ಪ್ರಧಾನಿ ನರೇಂದ್ರ ಮೋದಿ ಅವರು ಇದೇ 19 ರಂದು ಕಲಬುರಗಿಗೆ ಆಗಮಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಮೋದಿ ಮೋಡಿ ಮಾಡಲು ಆಗಮಿಸುತ್ತಿರುವುದು ಸಂಚಲನ ಮೂಡಿಸಿದೆ. ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಜನವರಿ 19ಕ್ಕೆ ಕಲಬುರಗಿಗೆ ಆಗಮಿಸುತ್ತಿದ್ದಾರೆ. ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ಡಿಸಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಪೂರ್ವಭಾವಿಯಾಗಿ ಸಭೆ ನಡೆಸಿದರು.
ಸೇಡಂ ತಾಲೂಕಿನ ಮಳಖೇಡ ಬಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 60 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಧಾನಮಂತ್ರಿಗಳು ಅಂದು ಕಲಬುರಗಿ ಸೇರಿದಂತೆ ಯಾದಗಿರಿ, ಬೀದರ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ಜಿಲ್ಲೆಯ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡುವರು ಎಂದು ಡಿಸಿ ಯಶವಂತ ಗುರುಕರ್ ತಿಳಿಸಿದ್ದಾರೆ.
ಕಾರ್ಯಕ್ರಮ ಸುಗಮ ನಿರ್ವಹಣೆ ಮತ್ತು ಯಶಸ್ಸಿಗೆ ವಿವಿಧ 10 ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಅಧಿಕಾರಿಗಳಿಗೆ ನೀಡಲಾಗುವ ಜವಾಬ್ದಾರಿಯನ್ನು ಚಾಚುತಪ್ಪದೆ ಸಮರ್ಪಕವಾಗಿ ನಿರ್ವಹಿಸಬೇಕು. ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ, ಸುಗಮ ಸಂಚಾರ, ಸಾರ್ವಜನಿಕರ ಮತ್ತು ಗಣ್ಯರ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಭದ್ರತೆ ಹೀಗೆ ಎಲ್ಲವು ಅಚ್ಚುಕಟ್ಟಾಗಿರಬೇಕು. ಮುನ್ನಚ್ಚರಿಕೆಯಾಗಿ ಕಾರ್ಯಕ್ರಮ ಸ್ಥಳದಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ವಾಹನ ರೆಡಿ ಇರಬೇಕು. ಬೇರೆ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಯಾವುದೇ ಲೋಪಕ್ಕೆ ಇಲ್ಲಿ ಅವಕಾಶವಿಲ್ಲ. ಸಣ್ಣ-ಪುಟ್ಟ ಏನೇ ಸಮಸ್ಯೆ ಇದ್ದರು ತಮ್ಮ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ಯಶವಂತ ವಿ. ಗುರುಕರ್ ಖಡಕ್ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ಸ್ಥಳಗಳಿಂದ ಫಲಾನುಭವಿಗಳನ್ನು ಕರೆತರಲು 2,500 ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಕೆ.ಕೆ.ಅರ್.ಟಿ.ಸಿ. ಸಂಸ್ಥೆಯ ಎಂ.ಡಿ. ರಾಚಪ್ಪ ಅವರಿಗೆ ತಿಳಿಸಿದರು. ಇನ್ನು ಮಳಖೇಡ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುಂಜಾಗ್ರತವಾಗಿ ಸಿ.ಎಚ್.ಸಿ. ಕೇಂದ್ರಕ್ಕೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಡಿ.ಎಚ್.ಓ ಡಾ.ರಾಜಶೇಖರ ಮಾಲಿ ಅವರಿಗೆ ಡಿ.ಸಿ. ನಿರ್ದೇಶನ ನೀಡಿದರು.
Hubli: ರಾಷ್ಟ್ರೀಯ ಯುವ ಜನೋತ್ಸವದಲ್ಲಿ 5 ದಿನ ಸಿರಿಧಾನ್ಯ ವೈಭವ
ಅಧಿಕಾರಿಗಳು ಕೇಂದ್ರಸ್ಥಾನ ಬಿಡುವಂತಿಲ್ಲ:
ಪ್ರಧಾನಮಂತ್ರಿಗಳ ಪ್ರವಾಸ ಹಿನ್ನೆಲೆಯಲ್ಲಿ ಜನವರಿ 20ರ ವರೆಗೆ ಜಿಲ್ಲೆಯ ಯಾವುದೇ ಅಧಿಕಾರಿ-ಸಿಬ್ಬಂದಿ ಕೇಂದ್ರಸ್ಥಾನ ಬಿಡುವಂತಿಲ್ಲ. ಅಲ್ಲದೇ ಪ್ರತಿ ಕಚೇರಿಯಲ್ಲಿ ಶೇ.100ರ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಬೇಕು. ಕೇಂದ್ರಸ್ಥಾನ ಬಿಡಬೇಕಾದಲ್ಲಿ ತಮ್ಮ ಅನುಮತಿ ಅಗತ್ಯ. ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ಡಿ.ಸಿ. ಯಶವಂತ ವಿ. ಗುರುಕರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
8 ದಿನದಲ್ಲಿ 2 ಬಾರಿ ಕರ್ನಾಟಕಕ್ಕೆ ಬರಲಿದ್ದಾರೆ ಪ್ರಧಾನಿ ಮೋದಿ
ಸಭೆಯಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕೆ.ಕೆ.ಆರ್.ಟಿ.ಸಿ. ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಅಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತರಾದ ಮಮತಾ ಕುಮಾರಿ, ಕಾರ್ತಿಕ್ ಸೇರಿದಂತೆ ಎಸ್.ಪಿ.ಜಿ. ಭದ್ರತಾ ತಂಡದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ತಹಶೀಲ್ದಾರರು ಭಾಗವಹಿಸಿದ್ದರು.