ಪ್ರವಾಸಿಗರಿಗೆ ಹೊರೆಯಾದ ನಂದಿ ಗಿರಿಧಾಮ : ಭಾರೀ ದುಬಾರಿ

  • ವಿಶ್ವ ವಿಖ್ಯಾತ ಅದರಲ್ಲೂ ಬಡವರ ಊಟಿಯೆಂದು ಖ್ಯಾತಿ ಪಡೆದಿರುವ ನಂದಿಗಿರಿಧಾಮದಲ್ಲಿನ ದುಬಾರಿ ದುನಿಯಾ
  • ಜಿಲ್ಲೆಯ ಬಡವರ, ಮಧ್ಯಮ ವರ್ಗದ ಪಾಲಿಗೆ ನಂದಿಗಿರಿಧಾಮ ಹತ್ತಿರ ಇದ್ದರೂ ಇನ್ನಷ್ಟುದೂರ
Price Hike Effects On Nandi Hill Tourists snr

ವರದಿ :  ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಜು.08):  ಇಡ್ಲಿ, ವಡೆ 1ಪ್ಲೇಟ್‌ಗೆ 80 ರು., ಟೀ, ಕಾಫಿ 40 ರು., ಒಂದು ಪ್ಲೇಟ್‌ ರೈಸ್‌ಬಾತ್‌, ಪೂರಿ ದರ 60 ರು. ಇನ್ನು ಒಂದು ರಾತ್ರಿ ವಾಸಕ್ಕೆ ಸಾಮಾನ್ಯ ಅತಿಥಿ ಗೃಹದ ಬಾಡಿಗೆ 2000, ವಿಪಿಐ ಕೊಠಡಿ ಬೇಕಾದರೆ 3,000 ರಿಂದ 3,500 ರು. ಪಾವತಿಸಬೇಕು.

ಇದು ಯಾವುದೋ ಐಷಾರಾಮಿ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಹಾಕುವ ಬಿಲ್‌ ಮೊತ್ತವಲ್ಲ. ಜಿಲ್ಲೆಯಲ್ಲಿರುವ ವಿಶ್ವ ವಿಖ್ಯಾತ ಅದರಲ್ಲೂ ಬಡವರ ಊಟಿಯೆಂದು ಖ್ಯಾತಿ ಪಡೆದಿರುವ ನಂದಿಗಿರಿಧಾಮದಲ್ಲಿನ ದುಬಾರಿ ದುನಿಯಾದ ಪರಿ ಇದು. ಈಗ ಜಿಲ್ಲೆಯ ಬಡವರ, ಮಧ್ಯಮ ವರ್ಗದ ಪಾಲಿಗೆ ನಂದಿಗಿರಿಧಾಮ ಹತ್ತಿರ ಇದ್ದರೂ ಇನ್ನಷ್ಟುದೂರವಾಗಲಿದೆ.

ನಂದಿಬೆಟ್ಟಕ್ಕೆ ಹೋದೋರು ಈ ಜಾಗ ಮಿಸ್ ಮಾಡದಿರಿ! ಅಚ್ಚರಿ ಪಡೋದು ಖಚಿತ

ವಾರಾಂತ್ಯದಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳ ಸಾವಿರಾರು ಪ್ರವಾಸಿಗರನ್ನ ಹಾಗೂ ಪರಿಸರ ಪ್ರೇಮಿಗಳನ್ನು ಅದರಲ್ಲೂ ಯುವಕ, ಯುವತಿಯನ್ನು ತನ್ನತ್ತ ಸೆಳೆಯುವ ನಂದಿ ಗಿರಿಧಾಮ ಹೇಳಿ ಕೇಳಿ ಜಿಲ್ಲೆಯ ಪಾಲಿಗೆ ಮಲೆನಾಡು. ಅಲ್ಲಿನ ಹಚ್ಚ ಹಸಿರಿನ ಕಾನನ ಮಧ್ಯೆ ಕಾಲ ಕಳೆಯುವುದೇ ಒಂದು ರೀತಿ ರೋಮಾಂಚನ. ಅಲ್ಲಿನ ಪ್ರಾಕೃತಿಕ ಸೊಬಗು, ಮುಂಗಾರು ಹಂಗಾಮಿನಲ್ಲಿ ತುಂತರು ಮಳೆಯ ಹನಿಗಳ ಮಧ್ಯೆ ಬೀಸುವ ತಂಗಾಳಿಯನ್ನು ಆಸ್ವಾಧಿಸುತ್ತಾ ವಿರಮಿಸಿಸುವುದೇ ಒಂದು ರೀತಿ ಸ್ವರ್ಗದ ಅನುಭವ. ಆದರೆ ಇಂತಹ ಅನುಭವ ಬಡವರ ಪಾಲಿಗೆ ಇನ್ನುಂದೆ ಹುಳಿದ್ರಾಕ್ಷಿ ಆಗಲಿದೆ.

ಅತಿಥಿಗೃಹ ಬಾಡಿಗೆ ದುಬಾರಿ

ಇನ್ನು ಮುಂದೆ ನಂದಿ ಗಿರಿಧಾಮದಲ್ಲಿ ಜನ ಸಾಮಾನ್ಯರು, ಮಧ್ಯಮ ವರ್ಗದ ಜನತೆಗೆ ನಂದಿಗಿರಿಧಾಮದಲ್ಲಿ ವಾಸ್ತವ್ಯ ಹೂಡುವ ಕನಸು ದುಬಾರಿ ಬಾಡಿಗೆಯಿಂದ ನುಚ್ಚು ನೂರಾಗಲಿದೆ. ವಿಪರ್ಯಾಸದ ಸಂಗತಿಯೆಂದರೆ ಅಲ್ಲಿನ ಪ್ರವಾಸೋದ್ಯಮ ಇಲಾಖೆಯಡಿ ಕಾರ್ಯನಿರ್ವಹಿಸುವ ಹೋಟೆಲ್‌ಗಳಲ್ಲಿ ಜನ ಸಾಮಾನ್ಯರು ಕಾಫಿ ಕುಡಿಯಲೂ ಯೋಚಿಸಬೇಕಾದ ಸ್ಥಿತಿ ಇದೆ.

ಸಾಮಾನ್ಯವಾಗಿ 10 ರು. ಗೆ ಸಿಗುವ ಟೀ, ಕಾಫಿ ಇಲ್ಲಿ 50 ರು., ಕೊಡಲೇಬೇಕು. ಇನ್ನೂ ಊಟ ಮಾಡಬೇಕಾದರೆ ಜೇಬಲ್ಲಿ ಕನಿಷ್ಠ 100 ರಿಂದ 150 ರು,ಇರಲೇಬೇಕು. ಕುಟುಂಬಸ್ಥರು ಹೋಟೆಲ್‌ಗೆ ತೆರಳಿದರೆ ಕನಿಷ್ಠ 1,000 ರಿಂದ 1,500 ರು, ತೆರಬೇಕು.

ಇಲಾಖೆಯಿಂದ ಹಗಲು ದರೋಡೆ

ಹೀಗೆ ನಂದಿ ಗಿರಿಧಾಮದಲ್ಲಿ ಪ್ರವಾಸೋದ್ಯಮ ಇಲಾಖೆ ಮನಸ್ಸಿಗೆ ಬಂದಂತೆ ಪ್ರವಾಸಿಗರಿಂದ ದುಪ್ಪಟ್ಟು ದರ ನಿಗದಿಪಡಿಸಿ ಹಗಲು ದರೋಡಗೆ ಇಳಿದರೂ ಈ ಬಗ್ಗೆ ಕನಿಷ್ಠ ಚಕಾರ ಎತ್ತುವರು ಇಲ್ಲವಾಗಿದೆ. ಪ್ರವಾಸಿಗರು ಕೂಡ ಅನಿರ್ವಾಯವಾಗಿ ಗಿರಿಧಾಮದಲ್ಲಿ ಪ್ರತಿಷ್ಠೆಗೆ ಬಿದ್ದು ದುಬಾರಿ ಬೆಲೆ ತೆತ್ತು ಜೇಬು ಖಾಲಿ ಮಾಡಿಕೊಂಡು ಬರುವ ದುಸ್ಥಿತಿ ನಿರ್ಮಾಣವಾಗಿದೆ.

ಸಿಬ್ಬಂದಿ ಕೊರತೆಗೆ ಸೊರಗಿದ ನಂದಿ ಗಿರಿಧಾಮ : ಖಾಲಿ ಇರುವ ಅನೇಕ ಹುದ್ದೆಗಳು

ಗಿರಿ ಧಾಮಕ್ಕೆ ಬಂದರೆ ಜೇಬು ಖಾಲಿ

ರಾಜ್ಯ ಸರ್ಕಾರ ಇತ್ತೀಚೆಗೆ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿದ್ದ ನಂದಿಗಿರಿಧಾಮದ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಿದ್ದೆ ತಡ, ಅಲ್ಲಿ ಸುಲಭವಾಗಿ ಕೈಗೆಟ್ಟುತ್ತಿದ್ದ ಹೋಟೆಲ್‌, ಅತಿಥಿ ಗೃಹ, ಪಾರ್ಕಿಂಗ್‌ ಶುಲ್ಕಗಳು ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವಂತಾಗಿವೆ.

ದಿಢೀರನೆ ಹೋಟೆಲ್‌ಗಳಲ್ಲಿ ತಿಂಡಿ, ಊಟದ ದರ ಏರಿಕೆ ಮಾಡುವುದರ ಜೊತೆಗೆ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿದ್ದ ಬರೊಬ್ಬರಿ 19 ಕ್ಕೂ ಹೆಚ್ಚು ಅತಿಥಿ ಗೃಹಗಳು ಈಗ ಪ್ರವಾಸೋದ್ಯಮ ಇಲಾಖೆಗೆ ಕೇಲವೇ ದಿನಗಳ ಹಿಂದೆಯಷ್ಟೇ ಹಸ್ತಾಂತರ ಮಾಡಿದ ಬೆನ್ನಲೇ ಅದರ ಬಾಡಿಗೆ ಕೂಡ ಸದ್ದಿಲ್ಲದೇ ಏರಿಕೆಯಾಗಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ಸುಪ್ರಸಿದ್ದವಾದ ಪ್ರವಾಸಿ ತಾಣವಾದ ನಂದಿಗಿರಿಧಾಮ ಇನ್ನಷ್ಟುಬಡವರಿಗೆ, ಪ್ರವಾಸಿಗರ ಪಾಲಿಗೆ ದುಬಾರಿ ಆಗುವ ಪ್ರವಾಸಿ ತಾಣವಾಗಲಿದೆ ಎಂದು ಹೆಸರು ಹೇಳಲು ಇಚ್ಚಿಸದ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios