ಸಿಬ್ಬಂದಿ ಕೊರತೆಗೆ ಸೊರಗಿದ ನಂದಿ ಗಿರಿಧಾಮ : ಖಾಲಿ ಇರುವ ಅನೇಕ ಹುದ್ದೆಗಳು
ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಗಿರಿಧಾಮದಲ್ಲಿ ನಿರ್ವಹಣೆ ಕೊರತೆ ಎದುರಾಗಿದೆ. ತಿಂಗಳಿಗೆ 30 ಲಕ್ಷ ರು ವರೆಗೂ ಆದಾಯ ತಂದುಕೊಡುವ ಗಿರಿಧಾಮದ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿದೆ.
ಚಿಕ್ಕಬಳ್ಳಾಪುರ (ಮಾ.24): ತನ್ನ ಪ್ರಾಕೃತಿಕ ಸೌಂದರ್ಯದ ಮೂಲಕ ದೇಶ ವಿದೇಶಗಳ ಗಮನ ಸೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮುಕಟ ಪ್ರಾಯವಾಗಿರುವ ನಂದಿ ಗಿರಿಧಾಮ ಸಿಬ್ಬಂದಿ ಕೊರತೆಯಿಂದ ಈಗ ಸಮರ್ಪಕವಾಗಿ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.
ಮಹಾರಾಜರ ಅಳ್ವಿಕೆಯಲ್ಲಿಯೆ ಜಿಲ್ಲೆಯ ನಂದಿಗಿರಿಧಾಮದ ನಿರ್ವಹಣೆ ಶುರುವಾಗಿದೆ. ಆ ಕಾಲಕ್ಕೆ ಬರೋಬ್ಬರಿ 28 ಮಂದಿ ಖಾಯಂ ಹುದ್ದೆಗಳ ಭರ್ತಿ ಆಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಸಿಬ್ಬಂದಿ ಸೇವಾ ಅವಧಿ ಮುಗಿದು ನಿವೃತ್ತಿಗೊಳ್ಳುತ್ತಿರುವ ಪರಿಣಾಮ 28 ಮಂದಿ ಖಾಯಂ ಸಿಬ್ಬಂದಿ ಸಂಖ್ಯೆ ಈಗ ಬರೀ 8 ಕ್ಕೆ ಬಂದು ನಿಂತು 20 ಹುದ್ದೆಗಳು ಖಾಲಿಯಾಗಿರುವ ಕಾರಣ ಗಿರಿಧಾಮ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ನಿತ್ಯ ಪರದಾಡುವಂತಾಗಿದೆ.
ಗಿರಿಧಾಮದಲ್ಲಿ ಸಿಬ್ಬಂದಿ ಕೊರತೆ
ನಂದಿಗಿರಿಧಾಮ ಸಮುದ್ರ ಮುಟ್ಟದಿಂದ 4600 ಅಡಿ ಎತ್ತರದಲ್ಲಿದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಸಾರ್ಕ ಸಮ್ಮೇಳನಕ್ಕೆ ನಂದಿ ಗಿರಿಧಾಮದಲ್ಲಿ ನಡೆದಿತ್ತು. ನಂದಿ ಗಿರಿಧಾಮಕ್ಕೆ ಸಾಕಷ್ಟುಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನಲೆ ಇದೆ. ಅಪಾರ ಪ್ರಮಾಣದಲ್ಲಿ ಸಸ್ಯ ಸಂಪತ್ತು ಹೊಂದಿರುವ ಗಿರಿಧಾಮ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿದ ಸ್ಥಳವಾಗಿದೆ. ಸರ್ಕಾರ ಕೂಡ ಅಭಿವೃದ್ದಿ ಹೆಸರಲ್ಲಿ ವಾರ್ಷಿಕ ಕೋಟ್ಯಾಂತರ ರು ವ್ಯಯಿಸುತ್ತಿದೆ. ಆದರೆ ತೋಟಗಾರಿಕಾ ಸಸ್ಯ ಸಂಪತ್ತು ಸೇರಿದಂತೆ ಗಿರಿಧಾಮ ಕಾಪಾಡಲು ಸಿಬ್ಬಂದಿ ಕೊರತೆ ಎದುರಾಗಿದೆ.
ನಂದಿಬೆಟ್ಟದಲ್ಲಿ ಪ್ರವಾಸಿಗರಿಗಿಲ್ಲ ಕೊರೊನಾ ಭೀತಿ, ಜೋರಾಗಿದೆ ವೀಕೆಂಡ್ ಮೋಜು-ಮಸ್ತಿ! ...
ನಂದಿಗಿರಿಧಾಮದ ಒಟ್ಟು ವಿಸ್ತೀರ್‍ಣವೇ ಬರೋಬ್ಬರಿ 66 ಎಕರೆ ಪ್ರದೇಶದಲ್ಲಿದೆ. 10 ಎಕರೆ ಮುಜುರಾಯಿ ಇಲಾಖೆಗೆ ಸೇರಿದ್ದರೆ 3 ಎಕರೆ ಅರಣ್ಯ ಇಲಾಖೆಯದು ಉಳಿದಂತೆ 53 ಎಕರೆ ತೋಟಗಾರಿಕೆ ಇಲಾಖೆಗೆ ವ್ಯಾಪ್ತಿಯಲ್ಲಿದೆ. ಆದರೆ ಗಿರಿಧಾಮವನ್ನು ಇನ್ನಷ್ಟುಹಸಿರು ಮಯವಾಗಿ ಪರಿಸರ ಸ್ನೇಹಿ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ದಿ ಪಡಿಸುವ ದಿಕ್ಕಿನಲ್ಲಿ ತೋಟಗಾರಿಕಾ ಪ್ರದೇಶವನ್ನು ಸಂರಕ್ಷಿಸಿ ಕಾಲಕಾಲಕ್ಕೆ ನೀರು ಹಾಕುವುದು, ಸ್ವಚ್ಚಗೊಳಿಸುವುದು ಮತ್ತಿತರ ಕೆಲಸ ಮಾಡಬೇಕಾದ ಸುಮಾರು 20 ಕ್ಕೂ ಹೆಚ್ಚು ಗಾರ್ಡ್ (ಬಾಲಿಗಳು) ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಗಿರಿಧಾಮದ ನಿರ್ವಹಣೆಗೆ ಹಿನ್ನಡೆಯಾಗಿ ಗಿರಿಧಾಮದ ಸೌಂದರ್ಯಕ್ಕೆ ಕುಂದು ಬರುತ್ತಿದೆ.
ನಂದಿಗಿರಿಧಾಮ ನಿರ್ವಹಣೆಗೆ ಒಟ್ಟು ಮಂಜೂರಾತಿಯಾಗಿರುವ ಖಾಯಂ ಹುದ್ದೆಗಳ ಸಂಖ್ಯೆ 28 ಇವೆ. ಆದರೆ ಸದ್ಯಕ್ಕೆ ಕೇವಲ 8 ಹುದ್ದೆಗಳು ಮಾತ್ರ ಭರ್ತಿ ಇದ್ದು ಉಳಿದಂತೆ 20 ಹುದ್ದೆಗಳು ಖಾಲಿ ಇವೆ. ಕೊರೊನಾ ಸಂದರ್ಭದಲ್ಲಿ ಇಬ್ಬರು ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಲಾಯಿತು. ಇಲಾಖೆ ಅನುಮತಿ ಕೊಟ್ಟರೆ ಹೊರ ಗುತ್ತಿಗೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತೇವೆ.
ಗೋಪಾಲ್, ವಿಶೇಷಾಧಿಕಾರಿ, ನಂದಗಿರಿಧಾಮ.
ತಿಂಗಳಿಗೆ 25 ರಿಂದ 30 ಲಕ್ಷ ರು ಆದಾಯ
ವಿಶ್ವ ವಿಖ್ಯಾತ ನಂದಿಗಿರಿಧಾಮದಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಲಕ್ಷಾಂತರ ರು, ಆದಾಯ ಹರಿದು ಬರುತ್ತಿದೆ. ವೀಕೆಂಡ್ ಬಂದರೆ ಶನಿವಾರ, ಭಾನುವಾರ ಪ್ರವಾಸಿಗರು ಪ್ರವಾಹದ ರೀತಿ ಗಿರಿಧಾಮಕ್ಕೆ ಬಂದು ಹೋಗುತ್ತಾರೆ. ಪ್ರವಾಸಿಗರಿಗೆ ಪ್ರವೇಶ ದ್ವಾರದ ಟಿಕೆಟ್‌ನಿಂದ ಹಿಡಿದು, ಕಾರು, ಬೈಕ್ ವಾಹನ ಪಾರ್ಕಿಂಗ್, ಮಳಿಗೆಗಳ ಬಾಡಿಗೆ ಸೇರಿ ತಿಂಗಳ ತಿಂಗಳು 25 ರಿಂದ 30 ಲಕ್ಷ ರು, ಆದಾಯ ಇದ್ದೇ ಇದೆ. ಆದರೆ ಆದಾಯ ಕೊಡುವ ಗಿರಿಧಾಮ ನಿರ್ವಹಣೆಗೆ ಸರ್ಕಾರ ಅಗತ್ಯ ಸಿಬ್ಬಂದಿಯನ್ನು ನೇಮಿಸದಿರುವುದು ಗಿರಿಧಾಮದಲ್ಲಿ ನಿರೀಕ್ಷಿಯ ಪ್ರಮಾಣದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಅಡ್ಡಗಾಲು ಆಗಿದೆ.