ಹಿಂದಿನ ಕಾಮಗಾರಿ ನಡೆದಿಲ್ಲ, ಬಿಲ್‌ಪಾಸ್ ಮಾಡಬಾರದು: ಶಾಸಕ ನರೇಂದ್ರಸ್ವಾಮಿ ಸೂಚನೆ
ಕ್ಷೇತ್ರದಲ್ಲಿ ಈ ಹಿಂದಿನ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಯಾವುದೇ ಬಿಲ್‌ಗಳನ್ನು ಪಾಸ್ ಮಾಡಬಾರದು. ಆರಂಭಗೊಳ್ಳದ ಕಾಮಗಾರಿಗಳಿಗೆ ಮರುಟೆಂಡರ್ ಕರೆಯುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳವಳ್ಳಿ (ಜು.02): ಕ್ಷೇತ್ರದಲ್ಲಿ ಈ ಹಿಂದಿನ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಯಾವುದೇ ಬಿಲ್‌ಗಳನ್ನು ಪಾಸ್ ಮಾಡಬಾರದು. ಆರಂಭಗೊಳ್ಳದ ಕಾಮಗಾರಿಗಳಿಗೆ ಮರುಟೆಂಡರ್ ಕರೆಯುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡ ವೇಳೆ ನಡೆದಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದಾಗ ಯಾವುದೇ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಅವಶ್ಯಕತೆ ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅಂದಾಜುವೆಚ್ಚ ಸಿದ್ದಪಡಿಸಿ ನೀಡಿದರೇ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯದ ಮೇಲ್ವಿಚಾರಕರನ್ನು ವರ್ಗಾಯಿಸಬೇಕೆಂದು ಈಗಾಗಲೇ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೊದಲು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದ ಮೇಲ್ವಿಚಾರಕರನ್ನು ಕೂಡಲೇ ವರ್ಗವಣೆ ಮಾಡಬೇಕು. ಮೇಲ್ವಿಚಾರಕರ ಕೊರತೆ ತಾತ್ಕಾಲಿಕ ಮಹಿಳಾ ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ರೈತರು ನೀಲಗಿರಿ ಮತ್ತು ಸರ್ವೆ ಮರ ಹೆಚ್ಚಾಗಿ ಬೆಳೆದಿದ್ದಾರೆ. ಇದರಿಂದ ಅಂತರ್ಜಲ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಸರ್ವೆ ಮರ ಮತ್ತು ನೀಲಗಿರಿ ಬೆಳೆಯದಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ನೀರಿನ ಸಮಸ್ಯೆ ನೀಗಿಸಲು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಮುನಿಯಪ್ಪ
ಅಧಿಕಾರಿಗಳು ಮತ್ತು ರೈತರ ನಡುವೆ ಒಂದಾಣಿಕೆ ಬರಬೇಕು. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು. ಪೂರಿಗಾಲಿ ಹನಿ ನೀರಾವರಿ ಯೋಜನೆ, ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆಗಳು ಕೇವಲ ದಿನಗಳಲ್ಲಿ ಕಾಮಗಾರಿ ಅಂತಿಮಗೊಳ್ಳಲಿದೆ ಎಂದು ಹೇಳಿದರು. ತಾಲೂಕಿನ ಎಲ್ಲಾ ಕೆರೆಗಳಿಗೆ ಸರ್ಮಪಕ ನೀರು ಪೂರೈಕೆಯಾಗುತ್ತಿರುವುದರಿಂದ ಮೀನು ಸಾಗಾಣಿಕೆಗೆ ಅನುಕೂಲವಾಗಲು ಇಲಾಖೆ ಅಧಿಕಾರಿಗಳು ಕೆಲಸದಲ್ಲಿ ಚುರುಕುಗೊಳಿಸಬೇಕು ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯ ನೀಡಲು ಮುಂದಾಗಬೇಕು ಎಂದು ಹೇಳಿದರು.
ಜಲಜೀವನ್ ಮೀಷನ್ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಮನೆಗಳಿಗೆ ಏಕೆ ಮೀಟರ್ ಅಳವಡಿಸುತ್ತಿರುವುದು ಸರಿಯಲ್ಲ. ಯೋಜನೆಯಲ್ಲಿರುವ ರೀತಿಯಲ್ಲಿ ಪೈಪ್‌ಲೈನ್ ಮಾಡಿಲ್ಲ. ಯೋಜನೆ ಹಣ ಮಾಡುವ ಉದ್ದೇಶವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದರು. ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ 5 ಕೆಜಿ ಅಕ್ಕಿ ಹಾಗೂ ಉನ್ನುಳಿದ ಐದು ಕೆಜಿಗೆ ಹಣ ನೀಡುತ್ತಿರುವುದರಿಂದ ಒಂದು ಕುಟುಂಬಕ್ಕೂ ತೊಂದರೆಯಾಗದಂತೆ ಸೌಲಭ್ಯ ನೀಡಬೇಕು. ಯಾವುದಾದರೂ ವ್ಯತ್ಯಾಸ ಕಂಡು ಬಂದರೆ ತಕ್ಷವೇ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಸರ್ಕಾರದ ಸೌಲಭ್ಯಗಳು ಸಾರ್ವಜನಿಕರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕಿನಲ್ಲಿ ಹಿಂದೆ ಅಕ್ರಮ ಮದ್ಯಮಾರಾಟ ಹೆಚ್ಚಾಗಿ ನಡೆಯುತ್ತಿದ್ದರಿಂದ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಅಕ್ರಮ ಮದ್ಯ ಮಾರಾಟಕ್ಕೆ ಪೊಲೀಸರು, ಅಬಕಾರಿ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಕಡಿವಾಣ ಹಾಕಬೇಕೆಂದು ಹೇಳಿದರು. ಬಿಜಿ ಪುರ ಗ್ರಾಮದಲ್ಲಿ ಯಾವುದೇ ಬಾರ್‌ಗಳಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ. ಆದರೆ, ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕಂಡು ಕಾಣದಂತೆ ಮೈಮರೆತಿರುವುದು ಖಂಡನೀಯ. ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು.
ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ
ಜಾತಿ ನಿಂದನೆ ಪ್ರಕರಣ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳ ಜೊತೆಗೂಡಿ ಪ್ರಕರಣ ಸಂಬಂಧ ಪರಿಶೀಲನೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇಂತಹ ಕೆಲಸವನ್ನು ಮಾಡದೇ ನಿರ್ಲಕ್ಷ್ಯ ತೋರಿದ್ದಾರೆಂದು ಕಿಡಿಕಾರಿದರು. ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕೆಂದು ಸೂಚಿಸಿದೆ ಆದರೂ ಕ್ರಮಕೈಗೊಂಡಿಲ್ಲ. ತಾಲೂಕು ಅಧಿಕಾರಿಗಳು ಸಾರ್ವಜನಿಕರು ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಮಸ್ಯೆಗಳನ್ನು ಪತ್ರದ ಮೂಲಕ ನನ್ನ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.