ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡದಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಸಾಕಷ್ಟುಅಕ್ಕಿ ಇದ್ದರೂ ಹಣ ಕೊಡುತ್ತೇವೆಂದರೂ ರಾಜ್ಯಕ್ಕೆ ಅಕ್ಕಿ ಕೊಡಲು ಸಿದ್ಧವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಾಗಮಂಗಲ (ಜೂ.30): ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡದಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಸಾಕಷ್ಟುಅಕ್ಕಿ ಇದ್ದರೂ ಹಣ ಕೊಡುತ್ತೇವೆಂದರೂ ರಾಜ್ಯಕ್ಕೆ ಅಕ್ಕಿ ಕೊಡಲು ಸಿದ್ಧವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ತಿಟ್ಟನಹೊಸಹಳ್ಳಿಯಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿವೃದ್ಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೃಷಿ ಪರಿಕರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಕಷ್ಟವೋ ಸುಖವೋ ಎಲ್ಲ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತಿದ್ದೇವೆ. ಇದನ್ನು ಸಹಿಸಿಕೊಳ್ಳಲು ವಿಪಕ್ಷದವರಿಗೆ ಆಗುತ್ತಿಲ್ಲ ಎಂದರು.
ಕಳೆದ ಐದು ವರ್ಷದಲ್ಲಿ ಆಡಳಿತ ನಡೆಸಿದ ಮೂವರು ಮುಖ್ಯಮಂತ್ರಿ ಮಹಾನುಭಾವರು ಕೃಷಿ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಕೃಷಿಭಾಗ್ಯ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ಆಲೋಚಿಸಲಾಗಿದೆ ಎಂದರು. ಜುಲೈ 7ರಂದು ನಡೆಯುವ ಬಜೆಟ್‌ನಲ್ಲಿ ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಇನ್ನುಳಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಕಾರ್ಯಕ್ರಮಗಳು ಮುಂದುವರಿಯಲಿವೆ. ನಾಡಿನ ರೈತರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೇಂದ್ರವು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯದಿಂದ ಅಕ್ಕಿ ಕೊಡ್ತಿಲ್ಲ: ಸಚಿವ ಚಲುವರಾಯಸ್ವಾಮಿ
ವಾತಾವರಣಕ್ಕೆ ಅನುಗುಣವಾಗಿ ರೈತರು ತಮ್ಮ ಕೃಷಿ ಭೂಮಿಯಲ್ಲಿ ಯಾವ ಬೆಳೆ ಹಾಕಬೇಕು. ಮಳೆ ಕಡಿಮೆಯಾದ ಸಂದರ್ಭದಲ್ಲಿ ಯಾವ ಬೆಳೆ ಬೆಳೆಯಬೇಕೆಂಬ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಕಾರ ಹಾಗೂ ಇಲಾಖೆ ಮಾಡುತ್ತಿದೆ. ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯನ್ನು ಪಡೆದು ಕೃಷಿ ಮಾಡಿದಾಗ ಮಾತ್ರ ಲಾಭದಾಯಕವಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಹಾಗಾಗಿ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಉಪಯೋಗಪಡೆದುಕೊಳ್ಳುವ ನಿಟ್ಟಿನಲ್ಲಿ ರೈತರು ಕಾರ್ಯೋನ್ಮುಖರಾಗಬೇಕು ಎಂದರು.
ಬೆಳೆ ವಿಮೆಗೆ 900ಕೋಟಿ: ರಾಜ್ಯದಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ರೈತರು ಬಿತ್ತನೆ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ರೈತರ ಹಿತದೃಷ್ಟಿಯಿಂದ ಕೃಷಿ ಇಲಾಖೆಯ ಬೆಳೆ ವಿಮಾ ಯೋಜನೆಗೆ 900 ಕೋಟಿ ಅನುದಾನ ಮಂಜೂರು ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ರಾಜ್ಯದ ರೈತರ ಪರವಾಗಿ ಬೆಳೆ ವಿಮೆಗೆ 900 ಕೋಟಿ ಹಣವನ್ನು ಸರ್ಕಾರವೇ ಭರಿಸುತ್ತಿದೆ. ಹಾಗಾಗಿ ರೈತರು ಶೇ.2ರಷ್ಟುಮಾತ್ರ ಬೆಳೆ ವಿಮೆ ಹಣವನ್ನು ಕಟ್ಟಲು ಹಿಂದೇಟು ಹಾಕಬಾರದು ಎಂದರು.
ಗೃಹಲಕ್ಷ್ಮಿಗೆ ಶೀಘ್ರ ಚಾಲನೆ: ಕುಟುಂಬದ ಮುಖ್ಯಸ್ಥೆ ಮಹಿಳೆಯ ಬ್ಯಾಂಕ್ ಖಾತೆಗೆ 2ಸಾವಿರ ಹಣ ಪಾವತಿಸುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ವ್ ತಿಂಗಳಿನಿಂದ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಶೀಘ್ರದಲ್ಲಿಯೇ ದಿನಾಂಕ ನಿಗಧಿಪಡಿಸಲಾಗುವುದು ಎಂದರು. ಬಳಿಕ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿವೃದ್ಧಿ ಯೋಜನೆಯಡಿ ತಿಟ್ಟನಹೊಸಹಳ್ಳಿ ಗ್ರಾಮದ ಅರ್ಹ 26 ಮಂದಿ ಫಲಾನುಭವಿಗಳಿಗೆ ಹಸು ಖರೀದಿಗೆ ತಲಾ 40 ಸಾವಿರ ಸೇರಿದಂತೆ 24.69ಲಕ್ಷ ರು. ವೆಚ್ಚದ ರಸಮೇವು ಘಟಕ. ಮೇವು ಕತ್ತರಿಸುವ ಯಂತ್ರ, ತಕ್ಕಡಿ, ತೋಟಗಾರಿಕೆ ಬೆಳೆ ಸಸಿಗಳನ್ನು ಸಂಪೂರ್ಣ ಉಚಿತವಾಗಿ ವಿತರಣೆ ಮಾಡಲಾಯಿತು.
ಜು.1ರಿಂದ ಬೆಂಗಳೂರು-ಮೈಸೂರು ಹೈವೇಯಲ್ಲಿ ಮತ್ತೊಂದು ಟೋಲ್ ಪ್ಲಾಜಾ: ಇಲ್ಲಿದೆ ಟೋಲ್ ದರ ವಿವರ
ಕೃಷಿ ಇಲಾಖೆ ಕಾರ್ಯಕ್ರಮಗಳ ಸಮಗ್ರ ಮಾಹಿತಿಯುಳ್ಳ ಕರಪತ್ರ ಮತ್ತು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ ನಂತರ ಬೆಳೆ ವಿಮೆ ಕುರಿತ ಪ್ರಚಾರ ವಾಹನಕ್ಕೆ ಸಚಿವರು ಮತ್ತು ಗಣ್ಯರು ಚಾಲನೆ ನೀಡಿದರು. ಜಂಟಿ ಕೃಷಿ ನಿರ್ದೇಶಕ ಅಶೋಕ್, ಇಕೆವೈಸಿ, ಬೆಳೆ ವಿಮೆ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ ಮಮತ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಡಿ.ಜಯರಾಂ, ಎಸ್‌ಎಲ್ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ದಿನೇಶ್, ತಾಪಂ ಮಾಜಿ ಅಧ್ಯಕ್ಷ ನವೀನ್‌ಕುಮಾರ್, ಗ್ರಾಪಂ ಸದಸ್ಯೆ ಭಾಗ್ಯಮ್ಮ, ಮುಖಂಡರಾದ ಸುನಿಲ ಲಕ್ಷ್ಮೀಕಾಂತ್, ವಜ್ರಕುಮಾರ್, ಮುಕುಂದ, ಎನ್.ಟಿ.ಕೃಷ್ಣಮೂರ್ತಿ, ಅಣೆಚನ್ನಾಪುರ ಮಂಜೇಶ, ಇಲಾಖೆಯ ಅಧಿಕಾರಿ ಯುವರಾಜ ಸೇರಿದಂತೆ ನೂರಾರು ಮಂದಿ ರೈತರು ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದರು.