ಭಟ್ಕಳದಲ್ಲಿ ಧ್ವಂಸಗೊಂಡಿದ್ದ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮಧ್ಯೆ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಸ್ಥಳವು ಪೂಜೆಗೆ ಮತ್ತು 'ಮಾರಿ ಹೊರೆ' ಇಡಲು ಸೂಕ್ತವಲ್ಲ ಎಂದು ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ವಿರೋಧಿಸಿವೆ.

ಕಾರವಾರ: ಮಾರಿ ಹೊರೆ ಇಡುವ ಪಟ್ಟಣದ ಮುರಿನಕಟ್ಟೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟೆಯನ್ನು ಧ್ವಂಸಗೊಳಿಸಿದ ನಂತರ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮುರಿನಕಟ್ಟೆಯನ್ನು ಇದೀಗ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮಧ್ಯೆ ನಿರ್ಮಿಸಲು ಸಿದ್ಧತೆ ಮಾಡುತ್ತಿರುವುಕ್ಕೆ ಹಿಂದೂ ಸಂಘಟನೆಗಳ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಮೇ 24ರಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣ ಮಾಡಲಾದ ನೂತನ ಮುರಿನಕಟ್ಟೆ ಮೇಲೆ ಧ್ವಂಸ ಪ್ರಕರಣದ ನಂತರ ಉಂಟಾದ ಹಲವು ಗೊಂದಲಗಳಿಗೆ ತೆರೆ ಎಳೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಂಸದರು ಕಟ್ಟೆ ನಿರ್ಮಾಣದ ಬಗ್ಗೆ ಮಾತನಾಡಿದ್ದರು.

ಮುರಿನಕಟ್ಟೆಯನ್ನು ಹೆದ್ದಾರಿ ಡಿವೈಡರ್ ಮಧ್ಯದಲ್ಲಿ ನಿರ್ಮಾಣ ಮಾಡಿ ಆಳೆತ್ತರದ ಗ್ರಿಲ್ಸ್ ಹಾಕಿದ್ದು, ಇಲ್ಲಿ ಮಾರಿ ಹೊರೆಯನ್ನು ಇಡುವುದಕ್ಕೆ ಮತ್ತು ಪೂಜೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವ ಕೂಗು ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಕೇಳಿ ಬಂದಿದೆ.

ಹಿಂದೂ ಸಂಘಟನೆಯ ಮುಖಂಡರ ವಾದ ಏನು?

ಈ ಹಿಂದೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಮಗೆ 10 ಅಡಿ ಅಗಲ 10 ಅಡಿ ಉದ್ದದ ಕಟ್ಟೆಯನ್ನು ಹೆದ್ದಾರಿಯಂಚಿನಲ್ಲಿ ಕಟ್ಟಿಕೊಡುವುದಾಗಿ ಭರವಸೆಯನ್ನು ನೀಡಿದಂತೆಯೇ ಕಟ್ಟಿಕೊಡಬೇಕು. ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದು ರಸ್ತೆಯ ಡಿವೈಡರ್ ಮಧ್ಯದಲ್ಲಿ ಹಾಲಿ ಕಟ್ಟಲಾದ ಕಟ್ಟೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹಿಂದೂ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಮುರಿನಕಟ್ಟೆಯ ಮೂಲಸ್ಥಾನದಲ್ಲಿ ಕಟ್ಟೆ ಕಟ್ಟುತ್ತೇವೆ ಎಂದು ರಸ್ತೆ ವಿಭಜಕವನ್ನು ಕಟ್ಟಿದ್ದು ಹೊರೆ ಹಾಕುವುದಕ್ಕೆ ಇದು ಯೋಗ್ಯವಾಗಿಲ್ಲ ಎನ್ನುವ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು ಜಿಲ್ಲಾಡಳಿತ, ಹೆದ್ದಾರಿ ಇಲಾಖೆ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಉಂಟಾಗಿದೆ. ಕಟ್ಟೆ ನಿರ್ಮಾಣದ ಸರಿಯಾಗುವ ವರೆಗೆ ಮುರಿನಕಟ್ಟೆಯನ್ನು ಸ್ಥಳಾಂತರ ಮಾಡದಿರಲು ಹಿಂದೂ ಸಂಘಟನೆ ಮತ್ತು ಮುರಿನಕಟ್ಟೆ ನಡೆದುಕೊಳ್ಳುವ ಭಕ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಂದು ನಾವು ಕಟ್ಟಿದ ನೂತನ ಕಟ್ಟೆಯನ್ನು ಮೂರು ಸಾವಿರಕ್ಕೂ ಹೆಚ್ಚು ಮತಾಂಧ ಮುಸ್ಲಿಮರು ಧ್ವಂಸ ಮಾಡಿದ್ದಾರೆ. ಮುರಿನಕಟ್ಟೆ ಹಿಂದೂಗಳ ಶ್ರದ್ಧಾ ಭಕ್ತಿ ಸ್ಥಳ. ಎಷ್ಟೇ ಬೆಲೆ ತೆತ್ತಾದರೂ ನಾವು ಕಟ್ಟೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಅಧಿಕಾರಿಗಳು ಹೇಳಿದ ಮಾತಿಗೆ ಒಂದು ಊರಿನ ಅಭಿವೃದ್ಧಿಯಾದರೆ ನಾವು ಸಹಕಾರ ನೀಡಬೇಕೆಂದು ಒಪ್ಪಿಗೆ ನೀಡಿದ್ದೆವು. ಮುರಿನಕಟ್ಟೆ ಸರಿಯಾದ ಸ್ಥಳದಲ್ಲಿ ನಿರ್ಮಿಸಬೇಕು ಎಂದು ಹಿಂದೂ ಮುಖಂಡ ಕೃಷ್ಣ ನಾಯ್ಕ ಆಸರಕೇರಿ ಹೇಳಿದ್ದಾರೆ.

ಮುರಿನಕಟ್ಟೆಯನ್ನು ಸರಿಯಾಗಿ ಕಟ್ಟಬೇಕು. ಹೆದ್ದಾರಿ ಡಿವೈಡರ್ ಮಧ್ಯೆ ಸಣ್ಣ ಜಾಗದಲ್ಲಿ ನಿರ್ಮಿಸಿದರೆ ಮಾರಿ ಹೊರೆ ಇಡಲು ತೊಂದರೆ ಆಗುತ್ತದೆ. ಈಗಿನ ಸ್ಥಿತಿಗತಿ ಬಗ್ಗೆ ಸಂಸದರು ಮತ್ತು ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದು ಕಟ್ಟೆ ಸರಿಯಾದ ಸ್ಥಳದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಹೇಳಿದ್ದಾರೆ.

ಧ್ವಂಸಗೊಳಿಸಿದ ಮುರಿನಕಟ್ಟೆಯನ್ನು ಸರಿಯಾದ ಸ್ಥಳದಲ್ಲಿ ನಾವು ಹೇಳಿದಂತೆ ನಿರ್ಮಿಸಿಕೊಡಬೇಕು. ಡಿವೈಡರ್ ಮಧ್ಯೆ ತೋರಿಕೆಗೆ ಕಟ್ಟೆ ಕಟ್ಟಿದರೆ ನಾವು ಒಪ್ಪಿಕೊಳ್ಳುವುದು ಹೇಗೆ? ಇದೊಂದು ಮಾರಿ ಹೊರೆ ಇಡುವ ಪವಿತ್ರ ಸ್ಥಳವಾಗಿದೆ. ಇದನ್ನು ಸರಿಯಾಗಿ ನಿರ್ಮಿಸಿಕೊಡಬೇಕು ಎಂದು ಹಿಂಜಾವೇ ಮುಖಂಡ ಜಯಂತ ನಾಯ್ಕ, ವಿಶ್ವ ಹಿಂದೂ ಪರಿಷತ್ ಪ್ರಮುಖ ರಾಮಕೃಷ್ಣ ನಾಯ್ಕ, ಹನುಮಾನ ನಗರದ ಶ್ರೀನಿವಾಸ ನಾಯ್ಕ ಮುಂತಾದವರು ತಿಳಿಸಿದ್ದಾರೆ.

ಹೆದ್ದಾರಿ ಡಿವೈಡರ್ ಮಧ್ಯದಲ್ಲಿ ಮುರಿನಕಟ್ಟೆ ನಿರ್ಮಾಣಕ್ಕೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರ ಮುರಿನಕಟ್ಟೆ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕು.