ಧಾರವಾಡ(ಮೇ.22): ‘ಸ್ವಾನ್‌’ ಎಂಬ ಧೂಮಕೇತು ಮೇ 18 ರಿಂದ ಜೂನ್‌ 3ರ ವರೆಗೂ ಬರಿಗಣ್ಣಿಗೆ ಕಾಣಲಿದ್ದು, ಅಂತರ್ಜಾಲ ತಾಣಗಳ ಮೂಲಕ ನೇರ ಪ್ರಸಾರ ಮಾಡಲು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಿದ್ಧತೆ ಮಾಡಿಕೊಂಡಿದೆ.

ಮಂಜಿನ ಹನಿಗಳಿಂದ ರೂಪುಗೊಂಡಿರುವ ‘ಸ್ವಾನ್‌’ ಎಂಬ ಧೂಮಕೇತು ಏ. 11ರಂದು ಗೋಚರಿಸಿದ್ದು, ಇದು ಭೂಮಿಯಿಂದ ಸುಮಾರು 9 ಕೋಟಿ ಕಿಮೀ ದೂರದಲ್ಲಿದ್ದು ಇದೀಗ ಸಮೀಪಿಸುತ್ತಿದೆ. ಇದನ್ನು ಆಸ್ಪ್ರೇಲಿಯಾದ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಮೈಕಲ್‌ ಮಟ್ಟಿಯಾಜೊ ಪತ್ತೆ ಮಾಡಿದ್ದಾರೆ. ಹಳದಿ ತಲೆ, ನವಿಲಿನ ಬಣ್ಣದ ಬಾಲ ಹೊಂದಿರುವ ಈ ಸುಂದರ ಧೂಮಕೇತುವು ಸೊಹೊ ಅಂತರಿಕ್ಷ ವೀಕ್ಷಣಾಲಯದಲ್ಲಿರುವ ‘ಸ್ವಾನ್‌’ ಎಂಬ ಸಾಧನವು ಧೂಮಕೇತುವನ್ನು ಪತ್ತೆ ಮಾಡಿದೆ. ಹೀಗಾಗಿ ಇದೇ ಹೆಸರಿನಿಂದ ಇದನ್ನು ಕರೆಯಲಾಗುತ್ತಿದೆ ಎಂದು ಕೇಂದ್ರದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ, ಸಂಕಷ್ಟದಲ್ಲಿ ಅಲೆಮಾರಿ ಕುಟುಂಬ

ಸೂರ್ಯನ ಬಳಿ ಬಂದಾಗ ಕೋಮಾದಲ್ಲಿರುವ ಜಲಜನಕ ಹೊಂದಿದ ಅಣುಗಳಿಂದ ಒಡೆದು ಹೊರಬಂದ ಪರಮಾಣುಗಳನ್ನು ಗುರುತಿಸಿ ಸ್ವಾನ್‌ ಛಾಯಾಚಿತ್ರ ತೆಗೆದಿದೆ. ಆಸ್ಟ್ರಿಯಾ ಖಭೌತ ಛಾಯಾಗ್ರಾಹಕ ಜೆರೋಲ್ಡೊ ರೀಮನ್‌ ಇದರ ಛಾಯಾಚಿತ್ರ ತೆಗೆದಿದ್ದಾರೆ. ಪ್ರತಿ ಸೆಕೆಂಡಿಗೆ 13ಕೆಜಿಯಷ್ಟುನೀರಾವಿಯನ್ನು ಇದು ಹೊರಹಾಕುತ್ತಿದೆ ಎಂದು ಮೈಕಲ್‌ ಕಾಂಬಿ ಎಂಬ ತಜ್ಞ ಹೇಳಿದ್ದಾರೆ. ಈ ಧೂಮಕೇತು ಹೆಚ್ಚು ನೀರಾವಿಯನ್ನು ಹೊರಹಾಕುತ್ತಿರುವುದರಿಂದ ಹೆಚ್ಚು ಪ್ರತಿಫಲಿಸಿ ಆಕರ್ಷಕವಾಗಿ ಗೋಚರಿಸುತ್ತದೆ.

ಮೇ 18ರಿಂದ ಕಂಡುಬರುತ್ತಿರುವ ಈ ಧೂಮಕೇತು ಜೂನ್‌ 3ರ ವರೆಗೂ ಬರಿಗಣ್ಣಿನಿಂದ ನೋಡಲು ಸಾಧ್ಯ. ಜೂನ್‌ 3ರ ನಂತರ ದೂರದರ್ಶಕಗಳ ಸಹಾಯದಿಂದ ನೋಡಬಹುದು. ಇದರ ಬೆಳಕು ಭೂಮಿಗೆ ತಲುಪಲು 4 ನಿಮಿಷಗಳು ಬೇಕು. ಮೇ 27ರ ವರೆಗೆ ಧೂಮಕೇತು ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿರುವುದರಿಂದ ನೋಡಲು ಹೆಚ್ಚು ಅನುಕೂಲಕರ ಎಂದು ತಜ್ಞರು ತಿಳಿಸಿದ್ದಾರೆ.

ಕೋವಿಡ್‌-19 ಸೋಂಕು ಹರಡುವ ಭೀತಿ ಇರುವುದರಿಂದ ವಿಜ್ಞಾನ ಕೇಂದ್ರಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಕೇಂದ್ರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಇದರ ವೀಕ್ಷಣೆಯ ದೃಶ್ಯಾವಳಿಯನ್ನು ಅಪ್‌ಲೋಡ್‌ ಮಾಡಲಾಗುವುದು ಎಂದಿದ್ದಾರೆ ವಿಜ್ಞಾನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ. ಮಾಹಿತಿಗೆ 0836-2215482 ಸಂಪರ್ಕಿಸಬಹುದು.