ಗರ್ಭಿಣಿಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು: ಡಾ. ಗೌಡ
ಮಹಿಳೆಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಮನೆಕೆಲಸ, ಕುಟುಂಬದ ನಿರ್ವಹಣೆ ಒತ್ತಡದ ನಡುವೆಯೂ ಆರೋಗ್ಯದತ್ತ ಗಮನ ಕೊಡಬೇಕು ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ. ಗೌಡ ಹೇಳಿದರು.
ಶಿರಾ : ಗರ್ಭೀಣಿಯರು ಶಿಶುವನ್ನು ಒಂಭತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡು ಪೋಷಿಸುವ ಮಹಿಳೆಯ ತ್ಯಾಗ, ಸಹನಶೀಲನೆ ಅಗಾಧವಾದದ್ದು, ತಾಯಿಯ ಸ್ಥಾನವನ್ನು ಯಾರೂ ಕೂಡ ತುಂಬಲು ಸಾಧ್ಯವಿಲ್ಲ. ಮಹಿಳೆಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಮನೆಕೆಲಸ, ಕುಟುಂಬದ ನಿರ್ವಹಣೆ ಒತ್ತಡದ ನಡುವೆಯೂ ಆರೋಗ್ಯದತ್ತ ಗಮನ ಕೊಡಬೇಕು ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ. ಗೌಡ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆ ಕಂಡುಬರುತ್ತದೆ. ಪ್ರತಿ ಗರ್ಭಿಣಿಯರು ಯಾವುದೇ ಸಮಸ್ಯೆ ಇದ್ದರೂ ಕೂಡ ವೈದ್ಯರಲ್ಲಿ ತಪಾಸಣೆ ಮಾಡಿಸಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಆರೋಗ್ಯವಂತ ಮಗುವನ್ನು ಪಡೆಯಬಹುದು. ತಾಯಿಯಿಂದ ಮಗುವಿಗೆ ಎಚ್ಐವಿ, ಹೈಪಟೈಸಿಸ್ ಹಾಗೂ ಸಿಪಿಲಿಸ್ ರೋಗ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ನಿರ್ಮೂಲನೆ ಮಾಡಲು ಗರ್ಭಿಣಿಯರು ಯಾವುದೇ ಸಂಕೋಚ ಇಲ್ಲದೆ ತಮ್ಮ ಸಮಸ್ಯೆಯನ್ನು ಆಶಾ ಕಾರ್ಯಕರ್ತೆಯರಿಗೆ ಹೇಳಿ. ಅವರು ವೈದ್ಯರಿಗೆ ತಿಳಿಸುವುದರ ಮೂಲಕ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದು ತಾಯಿಯಿಂದ ಮಗುವಿಗೆ ಹರಡುವ ಕಾಯಿಲೆಯನ್ನು ತಡೆಗಟ್ಟಬಹುದು ಎಂದ ಅವರು ಗರ್ಭಧಾರಣೆ ಮಹಿಳೆಯ ಜೀವನದಲ್ಲಿ ಒಂದು ಮಹತ್ತರ ಘಟ್ಟ. ಆದ್ದರಿಂದ ಗರ್ಭಿಣಿಯರು ಸುರಕ್ಷಿತ ತಾಯ್ತನಕ್ಕೆ ಹೆಚ್ಚು ಒತ್ತು ನೀಡಬೇಕು. ಸುರಕ್ಷಿತ ಹೆರಿಗೆಗಾಗಿ ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ದೇಶ್ವರ್ ಮಾತನಾಡಿ, ಗರ್ಭಿಣಿ ಮಹಿಳೆಯರಿಗೆ ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವುದರ ಜೊತೆಗೆ ಸೊಪ್ಪು ತರಕಾರಿ, ಮೊಟ್ಟೆ ಸೇರಿದಂತೆ ಉತ್ತಮ ಪೌಷ್ಟಿಕ ಆಹಾರಗಳನ್ನು ಸೇವಿಸಿ ಎಂದರು.
ಕಾರ್ಯಕ್ರಮದಲ್ಲಿ ಆರ್‌ಸಿಎಚ್ಒ ಡಾ. ಮೋಹನ್, ಐಸಿಟಿಸಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಗಿರೀಶ್, ಮಕ್ಕಳ ತಜ್ಞರಾದ ಡಾ. ಭಾರತಿ, ಡಾ. ದರ್ಶನ್ ಸೇರಿದಂತೆ ಹಲವರು ಭಾಗವಹಿಸಿದ್ದರು.