ಬೆಂಗಳೂರು(ಜು.12): ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರು ಹೆರಿಗೆ ನೋವಿನ ನಡುವೆ ನಗರದ ಹಲವು ಆಸ್ಪತ್ರೆಗಳಿಗೆ ಅಲೆದಾಡಿರುವ ಘಟನೆ ನಗರದಲ್ಲಿ ಶನಿವಾರ ನಡೆದಿದೆ. ಡಿ.ಜಿ.ಹಳ್ಳಿಯ ಸುಬ್ರಹ್ಮಣ್ಯ ದೇವಸ್ಥಾನ ಬಡಾವಣೆಯ ನಿವಾಸಿಯಾಗಿರುವ ಮಹಿಳೆಗೆ ಕೊರೋನಾ ಸೋಂಕು ದೃಢವಾಗಿದ್ದು, ಹೋಮ್‌ ಕ್ವಾರಂಟೈನ್‌ನಲ್ಲಿದ್ದರು.

ಆದರೆ, ಶುಕ್ರವಾರ ರಾತ್ರಿ 8.30ರ ಸಮಯಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ರಾತ್ರಿ ಆ್ಯಂಬುಲೆನ್ಸ್‌ಗೆ ಸಂಪರ್ಕ ಮಾಡಿದರೂ ಬಂದಿರಲಿಲ್ಲ. ಶನಿವಾರ ಬೆಳಗ್ಗೆ ಬ್ಲೀಡಿಂಗ್‌ ಶುರುವಾಗಿದೆ.

ಅರ್ಧಕ್ಕರ್ಧ ಬೆಂಗ್ಳೂರು ಸೀಲ್‌ಡೌನ್‌ ಸಾಧ್ಯತೆ..!

ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಆಟೋ ರಿಕ್ಷಾದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. ಎಲ್ಲಿಯೂ ಚಿಕಿತ್ಸೆ ಲಭ್ಯವಾಗಿಲ್ಲ. ಅಂತಿಮವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಕೆ.ಆರ್‌.ಪುರ ಕೆರೆಯಲ್ಲಿ ಪಿಪಿಇ ಕಿಟ್‌ ಪತ್ತೆ: ಆತಂಕ

ನಗರದಲ್ಲಿ ಪಿಪಿಇ ಕಿಟ್‌ಗಳನ್ನು ಬೇಜವಾಬ್ದಾರಿಯಿಂದ ಎಲ್ಲೆಂದರಲ್ಲಿ ಎಸೆಯುವ ಘಟನೆಗಳು ಮುಂದುವರೆಯುತ್ತಿದ್ದು, ಈಗ ಕೆ.ಆರ್‌.ಪುರದ ಕೆರೆಯಲ್ಲಿ ಬಳಕೆ ಮಾಡಿದ ಪಿಪಿಇ ಕಿಟ್‌ ಪತ್ತೆಯಾಗಿದ್ದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ. ಕಳೆದ ವಾರ ಯಶವಂತಪುರ, ಹೆಬ್ಬಾಳ ಮೇಲ್ಸೇತುವೆ ಹಾಗೂ ಕೋರಮಂಗಲ, ಜೆ.ಪಿ.ನಗರ, ರಾಮಸ್ವಾಮಿ ಪಾಳ್ಯ ವಾರ್ಡ್‌ನ ಜೆ.ಸಿ.ನಗರ ಸ್ಮಶಾನದಲ್ಲಿ ಪಿಪಿಇ ಕಿಟ್‌ಗಳಲ್ಲಿ ಎಸೆದು ಹೋಗಲಾಗಿತ್ತು. ಇದೀಗ ಕೆ.ಆರ್‌.ಪುರದ ಕೆರೆಯಲ್ಲಿ ಪಿಪಿಇ ಕಿಟ್‌ ಎಸೆಯಲಾಗಿದ್ದು, ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಕ್ಟೋರಿಯಾದಲ್ಲಿ ನಿನ್ನೆ ಇಬ್ಬರು ಸಾವು

ಚಿಕಿತ್ಸೆ ಫಲಕಾರಿಯಾಗದೆ ಕೊರೋನಾ ಸೋಂಕಿತರಿಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಜು.5ರಂದು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದ 50 ಹಾಗೂ 37 ವರ್ಷ ವ್ಯಕ್ತಿಗಳಿಬ್ಬರು ಕೊನೆಯುಸಿರೆಳೆದಿದ್ದಾರೆ. 37 ವರ್ಷದ ವ್ಯಕ್ತಿ ಬಿಪಿ ಹಾಗೂ ಶುಗರ್‌ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈ ನಡುವೆ ವಿಕ್ಟೋರಿಯಾ ಆಸ್ಪತ್ರೆಯ ಆ್ಯಂಬುಲೆನ್ಸ್‌ ಚಾಲಕನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತಿದ್ದರು, ಈ ವೇಳೆ ಸೋಂಕು ಹರಡಿರಬಹುದು ಎಂದು ಹೇಳಲಾಗಿದೆ.

ಎಲ್‌ ಅಂಡ್‌ ಟಿ ಸೀಲ್ಡೌನ್‌

ಬಾಗಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕಣ್ಣೂರಿನ ಎಲ್‌ ಅಂಡ್‌ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 4 ಕಾರ್ಮಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಕಂಪನಿಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್‌ ಮಾಡಲಾಗಿದೆ. 85 ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಜೆ.ಪಿ.ಪಾರ್ಕ್ ಬಂದ್‌

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯಾನವನಗಳಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಸಾರ್ವಜನಿಕರು ಮಾಡಿಕೊಂಡ ಮನವಿ ಮೇರೆಗೆ ಬಿಬಿಎಂಪಿ ನಗರದ ಮತ್ತಿಕೆರೆಯ ಜೆ.ಪಿ. ಪಾರ್ಕ್ಗೆ ಜನರ ಪ್ರವೇಶ ಬಂದ್‌ ಮಾಡಿದೆ. ಮತ್ತಿಕೆರೆ ಸೇರಿದಂತೆ ಈ ಭಾಗದ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ಸೋಂಕಿತರು ಇರುವುದು ದೃಢಪಟ್ಟಿತ್ತು. ಅವರ ಸಂಪರ್ಕದಲ್ಲಿ ಇರುವವರು ಉದ್ಯಾನಕ್ಕೆ ಬರಬಂದರೆ ಸೋಂಕು ಹರಡಬಹುದು ಆತಂಕ ಜನರಲ್ಲಿ ಮೂಡಿತ್ತು.