ಮೈಸೂರು ಅರಸರ ಕೊಡುಗೆಗಿಂತ ತಂದೆ ಸಿದ್ದರಾಮಯ್ಯ ಕೊಡುಗೆ ದೊಡ್ಡದು ಎಂಬ ಯತೀಂದ್ರ ಹೇಳಿಕೆಗೆ ವ್ಯಾಪಕ ಟೀಕೆ. ಪ್ರತಾಪ್ ಸಿಂಹ ಯತೀಂದ್ರಗೆ ತಿರುಗೇಟು ನೀಡಿದ್ದು, ಸಿಎಂ ಸಿದ್ದರಾಮಯ್ಯ ಬಿಜೆಪಿಗಿಂತ ನಾವು ಹೆಚ್ಚು ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ಮೈಸೂರು (ಜು.26): ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿಗೆ ಕೊಟ್ಟಷ್ಟೇ ಕಾಣಿಕೆಯನ್ನು ನನ್ನ ತಂದೆ ಸಿದ್ದರಾಮಯ್ಯ ಕೂಡ ನೀಡಿದ್ದಾರೆ ಎಂದು ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಯತೀಂದ್ರ ಮಾತಿಗೆ ರಾಜಕಾರಣಿಗಳೆಲ್ಲರೂ ಟೀಕೆ ಮಾಡುತ್ತಿರುವ ನಡುವೆ ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಮಾತಿನಲ್ಲಿಯೇ ಜಾಡಿಸಿದ್ದಾರೆ.
'ಅನಧಿಕೃತ ವರ್ಗಾವಣೆ ಖಾತೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ. ಮಕ್ಕಳಿಗೆ ಆಸ್ತಿ ಮಾಡಿ ಕೊಡಬಹುದು. ತಲೆಯಲ್ಲಿ ಬುದ್ದಿ ತುಂಬಿಸಲು ಆಗಲ್ಲ. ಅದು ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಮಾತಲ್ಲ. ಸಿದ್ದರಾಮಯ್ಯ ಅವರ ಅಂತರಾಳದ ಭಾವನೆ ಕೂಡ. ಮಹಾರಾಜರ ಕುಟುಂಬದ ಬಗ್ಗೆ ಸಿದ್ದರಾಮಯ್ಯ ಗೆ ದ್ವೇಷ, ಅಪಥ್ಯಾ ಭಾವನೆ ಇದೆ. ದೇವರಾಜ ಅರಸುಗಿಂತಾ ದೊಡ್ಡವರು ನಾನು ಅಂತಾ ಸಿದ್ದರಾಮಯ್ಯ ಹೇಳ್ತಿದ್ದರು. ಈಗ ನಾಲ್ವಡಿ ಕೃಷ್ಣರಾಜ ಮಹಾರಾಜ ಗಿಂತಾ ದೊಡ್ಡವರಾಗಿದ್ದಾರೆ. 10 ವರ್ಷ ಸಿಎಂ ಆಗಿ ಬಿಟ್ಟರೆ ನಾಡದೇವತೆ ಚಾಮುಂಡಿ ಗಿಂತಾ ದೊಡ್ಡವರು ಆಗಿಬಿಡ್ತಾರೆ ಎಂದು ಹೇಳಿದ್ದಾರೆ.
ಯತೀಂದ್ರ ಅವರೆ ನಿಮ್ಮಪ್ಪನ ಕೊಡುಗೆ ಏನೂ ಹೇಳಿ? ಕೆಆರ್ ಆಸ್ಪತ್ರೆಗೆ ಗೆ ಸುಣ್ಣ ಹೊಡೆಸಲು ನಿಮ್ಮಪ್ಪನ ಕೈಯಲ್ಲಿ ಆಗಿಲ್ಲ. ಮೈಸೂರಿಗೆ ನಿಮ್ಮಪ್ಪನ ಕೊಡುಗೆ ಏನೂ ಹೇಳಿ? ನಿಮ್ಮ ಅಮ್ಮ ಅಪ್ಪ ಸೇರಿ ಮೂಡಾದಲ್ಲಿ ಸೈಟ್ ಹೊಡೆದರು ಅದೇನಾ ನಿಮ್ಮ ಅಪ್ಪನಾ ಕೊಡುಗೆ. ನಾಲ್ವಡಿ ಮಹಾರಾಜರು ನಾಡ ಬೆಳಗಿದರು. ಶುದ್ದ ಕುಡಿಯುವ ನೀರಿನ ಘಟಕ ಕಟ್ಟಿ ಜಲಾಶಯ ಕಟ್ಟಿದ ರೀತಿ ಫೋಸ್ ಕೊಡುವುದು ಬಿಡಿ. ವರ್ಗಾವಣೆಯಲ್ಲಿ ಒಳ್ಳೆ ಕಮಾಯಿ ಮಾಡಿಕೊಂಡು ಅರಾಮಾಗಿ ಇದ್ದಿರಿ. ಯತೀಂದ್ರ ಅವರೇ ನಿಮ್ಮ ಅಪ್ಪನ ಕೊಡುಗೆ ಏನೂ ಹೇಳಿ. ಉಡಾಫೆ ಮಾತಾಡಿಕೊಂಡು ಓಡಾಡಿದ್ದೆ ಸಿಎಂ ಸಾಧನೆ ಎಂದು ಮಾತಿನಲ್ಲಿ ತಿವಿದಿದ್ದಾರೆ.
ಅಭಿವೃದ್ಧಿ ಬಗ್ಗೆ ಚರ್ಚೆಗೆ ಸಿಎಂ ಪಂಥಾಹ್ವಾನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಸಿಎಂ ಅವರೇ ವೇದಿಕೆ ಸಿದ್ಧ ಮಾಡಿ. ನಾವು ಬರ್ತಿವಿ. ಚರ್ಚೆ ಮಾಡಿಯೇ ಬಿಡೋಣ. ಕಲಘಟಗಿ ಲಾಡು, ಮರಿ ಖರ್ಗೆ, ನಿಮ್ಮ ಮಗ ಯತೀಂದ್ರ ಎಲ್ಲರನ್ನೂ ಕರೆದುಕೊಂಡು ಬನ್ನಿ ಎಂದು ಪ್ರತಾಪ್ ಸಿಂಹ ಸವಾಲೆಸೆದಿದ್ದಾರೆ.
ಪುತ್ರನ ಮಾತಿಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ಬಿಜೆಪಿಯವರಿಗಿಂತ ಜಾಸ್ತಿ ಮಾಡಿದ್ದೇವೆ ನಾವು. ಬಿಜೆಪಿಯವರು ಏನು ಮಾಡಿಲ್ಲ, ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಏನ್ ಮಾರಿ, ಏನ್ ಕಟ್ಟಿದ್ದಾರೆ ಎಂದ ಯತ್ನಾಳ್
ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್ ಗಿಂತಲೂ ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ದಾರೆ, ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, 'ಮೈಸೂರು ಮಹಾರಾಜರು ತಮ್ಮ ಎಲ್ಲ ಒಡವೆ ಬಂಗಾರ ಮಾರಿ ಕೃಷ್ಣರಾಜ ಸಾಗರ ಜಲಾಶಯ ಕಟ್ಟಿದರು. ಸಿದ್ದರಾಮಯ್ಯ ಏನಾರು ಮಾರಿದ್ದಾರಾ? ಇದ್ದ ಮೈಸೂರಿನಲ್ಲಿನ ಮುಡಾ ಪ್ಲಾಟ್ ಹೊಡೆದುಕೊಂಡು ಹೋಗಿದ್ದಾರೆ. ಅವರ ಮಗ ತೀರಾ ಹಾದಿ ಬಿಟ್ಟು ಮಾತನಾಡುತ್ತಿದ್ದಾನೆ. ಏನೋ ಸ್ವಲ್ಪ ಶ್ಯಾಣ್ಯಾ ಅದಾನ ಅಂತಾ ತಿಳದುಕೊಂಡಿದ್ದೇವೆ. ನಿಮ್ಮಪ್ಪ ಗ್ಯಾರಂಟಿ ಮಾಡಿ ಕರ್ನಾಟಕ ದಿವಾಳಿ ಮಾಡಿದ್ದಾನೆ ಮೈಸೂರು ಮಹಾರಾಜರದ್ದು ಆ ಭಾಗದಲ್ಲಿ ಸಾಕಷ್ಟು ಕೊಡುಗೆ ಇದೆ. ಅವರೊಟ್ಟಿಗೆ ಹೋಲಿಕೆ ಮಾಡಿ ಮಾತನಾಡುವದು ಅಸಂಬದ್ಧ ಹೇಳಿಕೆ ಎಂದಿದ್ದಾರೆ.
