ಹೆಸರುಘಟ್ಟ ಮುಖ್ಯರಸ್ತೆ ಅಭಿವೃದ್ಧಿಗೆ 15 ಕೋಟಿ ಬಿಡುಗಡೆ, ನಿರಂತರ ಮಳೆಗೆ ಶುರುವಾಗದ ಕಾಮಗಾರಿ, ವಾಹನ ಸವಾರರಿಗಿಲ್ಲ ನಿತ್ಯ ಪಡಿಪಾಟಲು

ಪ್ರಶಾಂತ್‌ ಕೆಂಗನಹಳ್ಳಿ

ಬೆಂಗಳೂರು(ನ.05):  ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎಂಟನೇ ಮೈಲಿ ಸಿಗ್ನಲ್‌ ಬಳಿ ಕಳೆದ ಎಂಟು ತಿಂಗಳಿಂದ ನಿರಂತರವಾಗಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಾಷ್ಟೀಯ ಹೆದ್ದಾರಿ ಗುಂಡಿಮಯವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುವುದರ ಜೊತೆಗೆ ಗಲೀಜು ನೀರು ಮೈಮೇಲೆ ಸಿಡಿಯುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಹಿಡಿಶಾಪ ಹಾಕಿಕೊಂಡು ತೆರಳುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ಇತ್ತೀಚೆಗಷ್ಟೇ ನಡೆದ ಹೆಸರುಘಟ್ಟ ಮುಖ್ಯರಸ್ತೆಯ ಅಭಿವೃದ್ಧಿಗೆ ಸರ್ಕಾರದಿಂದ 15 ಕೋಟಿ ಹಣ ಬಿಡುಗಡೆ ಮಾಡಿದ್ದು, ಕಳೆದ ಮಾರ್ಚ್‌ನಲ್ಲಿ ಶಾಸಕ ಆರ್‌. ಮಂಜುನಾಥ್‌ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿ ಕೆಲಸ ಆರಂಭವಾಗಲೇ ಇಲ್ಲ . ವಾಹನ ಸವಾರರು ರಸ್ತೆ ಗುಂಡಿಗಳು ಹಾಗೂ ವಿಪರೀತ ಧೂಳಿನಿಂದ ಪರದಾಡುವಂತಾಗಿತ್ತು. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಎಂಬಂತೆ ಅರ್ಧ ಇಂಚಿನಷ್ಟು ಡಾಂಬರೀಕರಣ ಮಾಡಲಾಗಿದ್ದು ಅದೂ ಸಹ ಕಳಪೆಯಾದ್ದರಿಂದ ಕಿತ್ತು ಗುಂಡಿಗಳು ಬಿದ್ದಿವೆ.

ಬೆಂಗ್ಳೂರಿನ ಐಟಿ-ಬಿಟಿ ವಲಯದಲ್ಲೂ ರಸ್ತೆಗಳು ನೆಟ್ಟಗಿಲ್ಲ..!

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯವರು ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಎಂಟನೇ ಮೈಲಿಗೆ ಹೊಂದಿಕೊಂಡಂತೆ ಎರಡೂ ಬಹುಮಹಡಿ ಕಟ್ಟಡಗಳು ಇದ್ದು, ಆ ನೀರಿನಿಂದ ಚರಂಡಿ ತುಂಬಿ ಹರಿಯುತ್ತಿದೆ. ಇಲ್ಲಿ ನಿತ್ಯ ಹಲವಾರು ಆಟೋಗಳು, ಕಾರುಗಳು, ಸಾವಿರಾರು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ರಸ್ತೆ ಮೇಲೆ ಹರಿಯುತ್ತಿರುವ ಮಲೀನ ನೀರು ವಾಹನ ತೆರಳುವ ಸಂದರ್ಭದಲ್ಲಿ ಜನರ ಮೇಲೆ ಸಿಡಿದಿರುವ ಅನೇಕ ಉದಾಹರಣಗಳಿವೆ.

ಈಗಾಗಲೇ ಮುಖ್ಯ ಆಯುಕ್ತರ ಜೊತೆ ಸ್ಥಳ ಪರಿಶೀಲನೆ ಮಾಡಲಾಗಿದೆ. ನಮ್ಮ ಮೆಟ್ರೋ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ರಸ್ತೆಗೆ ಹರಿಯುತ್ತಿರುವ ಚರಂಡಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಶೀರ್ಘದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ದಾಸರಹಳ್ಳಿ ವಲಯ ಜಂಟಿ ಆಯುಕ್ತ ಕೆ.ಎಚ್‌.ಜಗದೀಶ್‌ ತಿಳಿಸಿದರು.

98% ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ ಎಂದ ಬಿಬಿಎಂಪಿ: ನಿಮಗೆ ನೀವೆ ಸರ್ಟಿಫಿಕೇಟ್‌ ಕೊಡ್ಕೊಂಡ್ರೆ ಹೆಂಗೆ?; ಕೋರ್ಟ್‌ ಪ್ರಶ್ನೆ

ಜನಪ್ರತಿನಿಧಿಗಳೇ ಇತ್ತ ಕಣ್ಣಾಯಿಸಿ: ಆಕ್ರೋಶ

ಕಳೆದ ಐದಾರು ತಿಂಗಳಿಂದ ಹೆಸರುಘಟ್ಟಮುಖ್ಯರಸ್ತೆಯ ಚರಂಡಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಹರಿಯುತ್ತಿರುವ ಚರಂಡಿ ನೀರಿನಿಂದ ದ್ವಿಚಕ್ರ ವಾಹನ, ಆಟೋ, ಕಾರು ಹಾಗೂ ಹಲವಾರು ವಾಹನ ಸವಾರರು ಪರ ದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾರೊಬ್ಬರೂ ಇದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿಲ್ಲ. ಸ್ಥಳೀಯ ಶಾಸಕರಾದಿಯಾಗಿ ಬಿಬಿಎಂಪಿ ಅಧಿಕಾರಿಗಳು ಸಹ ದಿನನಿತ್ಯ ಇದೇ ರಸ್ತೆಯಲ್ಲಿ ಹಾದು ಹೋಗುತ್ತಾ ರಾದರೂ ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದೇ ರಸ್ತೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಹಲವಾರು ಸಚಿವರು ದಾಸರಹಳ್ಳಿಗೆ ಬಂದು ಹೋಗಿದ್ದಾರೆ. ಆದರೆ ಚರಂಡಿ ದುರಸ್ತಿಗೆ ಮುಂದಾಗುತ್ತಿಲ್ಲ ಎಂಬ ಆರೋಪಗಳೂ ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಕಳೆದ ಒಂದು ತಿಂಗಳಿನಿಂದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಗಲೀಜು ನೀರಿನಲ್ಲೇ ಸಂಚರಿಸುವ ಕರ್ಮ ಜನರದ್ದಾಗಿದೆ. ನಿತ್ಯ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆಯೂ ಸಂಪೂರ್ಣ ಹಾಳಾಗಿದೆ ಅಂತ ಸ್ಥಳೀಯ ನಿವಾಸಿ ದಿಲೀಪ್‌ ರಾಜು ತಿಳಿಸಿದ್ದಾರೆ.