ಪ್ರವಾಹ ಬಂದು ನಲುಗಿದ್ದ ಮಹದೇವಪುರ ವಲಯಕ್ಕೆ ಈಗ ರಸ್ತೆ ಗುಂಡಿಗಳ ಕಂಟಕ, 2 ಸಾವಿರಕ್ಕಿಂತ ಅಧಿಕ ಗುಂಡಿ

ಸಂಪತ್‌ ತರೀಕೆರೆ

ಬೆಂಗಳೂರು(ನ.03): ಪ್ರವಾಹ ಪರಿಸ್ಥಿತಿಯಿಂದ ಹೈರಾಣಾಗಿದ್ದ ಮಹದೇವಪುರ ವಲಯದ ಹಲವು ಬಡಾವಣೆಗಳ ನಿವಾಸಿಗಳು ಮತ್ತು ವಾಹನ ಸವಾರರಿಗೆ ಇದೀಗ ರಸ್ತೆ ಗುಂಡಿಗಳದ್ದೇ ಸಮಸ್ಯೆ. ಸುಮಾರು ಎರಡು ಸಾವಿರಕ್ಕಿಂತ ಅಧಿಕ ರಸ್ತೆ ಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಆದರೆ, ಪ್ರತಿ ವಾರ್ಡ್‌ಗಳಲ್ಲಿ ಪತ್ತೆಯಾಗದ ನೂರಾರು ಗುಂಡಿಗಳು ಸ್ಥಳೀಯರ ಆಕ್ರೋಶ ಹೆಚ್ಚಿವೆ. ಹೂಡಿ, ಹಗದೂರು, ವರ್ತೂರು, ಹೊರಮಾವು, ಕೆ.ಆರ್‌.ಪುರಂ ಸೇರಿದಂತೆ ಹಲವು ವಾರ್ಡ್‌ ರಸ್ತೆಗಳಲ್ಲಿ ಇನ್ನೂ ನೂರಾರು ರಸ್ತೆಗುಂಡಿಗಳಿದ್ದು, ಯಾವಾಗ ಪಾಲಿಕೆ ಗುಂಡಿ ಮುಕ್ತ ವಾರ್ಡ್‌ಗಳನ್ನು ಮಾಡುತ್ತದೆಯೋ ಎಂಬ ಗೊಂದಲದಲ್ಲೇ ವಾಹನ ಸವಾರರು, ಸ್ಥಳೀಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯವ ಪರಿಸ್ಥಿತಿ ಇದೆ.

ಮಹದೇವಪುರ ವಲಯ ಬಹುತೇಕ ಕೈಗಾರಿಕಾ ಪ್ರದೇಶವಾಗಿದ್ದು, ಐಟಿಬಿಟಿ ಕಂಪನಿಗಳು ಸೇರಿದಂತೆ ಹಲವು ನೂರಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಔಟರ್‌ ರಿಂಗ್‌ ರಸ್ತೆ, ವೈಟ್‌ಫೀಲ್ಡ್‌, ಬೆಳ್ಳಂದೂರು, ಹೊಸ ರೋಡ್‌, ಇಬ್ಬಲೂರು, ಹಗದೂರು ಒಳಗೊಂಡಂತೆ ಅನೇಕ ರಸ್ತೆಗಳಲ್ಲಿ ನಿತ್ಯವೂ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಹಿಂದೆಂದಿಗಿಂತಲೂ ಹೆಚ್ಚು ರಸ್ತೆ ಗುಂಡಿಗಳಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿ ನಡೆಗೆ ಹೈಕೋರ್ಟ್‌ ಬೇಸರ

ತೇಪೆ ಬೇಡ: ರಸ್ತೆಗಳಿಗೆ ಡಾಂಬರೀಕರಣ ಮಾಡಿ

ಪಾಲಿಕೆ ಮಾಹಿತಿಯಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕೆ.ಆರ್‌.ಪುರಂ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳಿವೆ. ಮಹದೇವಪುರದಲ್ಲಿ ವರ್ತೂರು, ಬೆಳ್ಳಂದೂರು, ಕಾಡುಗೋಡಿ, ಹಗದೂರು, ದೊಡ್ಡಾನೆಕುಂದಿ ವಾರ್ಡ್‌ಗಳ ಬಹುತೇಕ ರಸ್ತೆ ಗುಂಡಿಗಳನ್ನು ಭರ್ತಿ ಮಾಡಲಾಗಿದೆ. ಆದರೆ, ಸ್ಥಳೀಯರು ದೊಡ್ಡ ರಸ್ತೆ ಗುಂಡಿಗಳನ್ನು ಮಾತ್ರ ಪಾಲಿಕೆಯವರು ಮುಚ್ಚುತ್ತಿದ್ದಾರೆ. ಸಣ್ಣಪುಟ್ಟಗುಂಡಿಗಳ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿಲ್ಲ. ಇಂದಿನ ಸಣ್ಣ ಗುಂಡಿಗಳು ಮುಂದೆ ದೊಡ್ಡ ಗುಂಡಿಗಳಾಗಿ ಪರಿವರ್ತನೆಯಾಗುತ್ತವೆ. ಸಣ್ಣ ಮಳೆಗೂ ರಸ್ತೆ ಗುಂಡಿಗಳಿಗೆ ಹಾಕಿರುವ ತೇಪೆ ಕಿತ್ತು ಬರುತ್ತಿದ್ದು, ತೇಪೆ ಹಾಕುವ ಬದಲು ಸಂಪೂರ್ಣವಾಗಿ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

2004 ರಸ್ತೆ ಗುಂಡಿ ಪತ್ತೆ

ಪ್ರತಿ ಬಾರಿ ಮಳೆ ಸುರಿದಾಗೆಲ್ಲ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆ ಗುಂಡಿ ಮುಚ್ಚಿ, ಅನಾಹುತಗಳನ್ನು ತಪ್ಪಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದೇವೆ. ಕಣ್ಣಿಗೆ ಕಾಣುವ ಗುಂಡಿಗಳನ್ನು ಮಾತ್ರ ಅಧಿಕಾರಿಗಳು ಮುಚ್ಚುತ್ತಿದ್ದಾರೆ. ವಾರ್ಡ್‌ಗಳ ಒಳ ರಸ್ತೆಗಳಿಗೂ ಸ್ವಲ್ಪ ಬಂದು ನೋಡಿದರೆ ಒಳ್ಳೆಯದು ಎಂದು ವರ್ತೂರು ನಿವಾಸಿ ಗಿರೀಶ್‌ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಹೂಡಿ- 180 ಕಿ.ಮೀ (155 ರಸ್ತೆ ಗುಂಡಿ), ಗರುಡಾಚಾರ್‌ಪಾಳ್ಯ-76.68 ಕಿ.ಮೀ(145), ಕಾಡುಗೋಡಿ-142.59 ಕಿ.ಮೀ(318), ಹಗದೂರು-78.54 ಕಿ.ಮೀ(96), ದೊಡ್ಡನೆಕ್ಕುಂದಿ-141.16 ಕಿ.ಮೀ(141), ಮಾರತ್ತಹಳ್ಳಿ-165.48 ಕಿ.ಮೀ(45), ವರ್ತೂರು- 41.2 ಕಿ.ಮೀ (232) ಮತ್ತು ಬೆಳ್ಳಂದೂರು-189.96 ಕಿ.ಮೀ (ರಸ್ತೆ ಗುಂಡಿಗಳು 185) ಸೇರಿದಂತೆ 1015.6 ಕಿ.ಮೀ ಉದ್ದದ ರಸ್ತೆಗಳಲ್ಲಿ 1317 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ.

ಕೆ.ಆರ್‌.ಪುರಂ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಾದ ಹೊರಮಾವು-332.48 ಕಿ.ಮೀ(84 ರಸ್ತೆ ಗುಂಡಿ), ರಾಮಮೂರ್ತಿ ನಗರ-122 ಕಿ.ಮೀ. (95) ವಿಜಿನಾಪುರ-51.58 ಕಿ.ಮೀ(69), ಕೆ.ಆರ್‌.ಪುರಂ-67 ಕಿ.ಮೀ(62 ರಸ್ತೆಗುಂಡಿ), ಬಸವನಪುರ-118.3 ಕಿ.ಮೀ(106), ದೇವಸಂದ್ರ-32.8 ಕಿ.ಮೀ(27), ಎ.ನಾರಾಯಣಪುರ-47.61 ಕಿ.ಮೀ(58), ವಿಜ್ಞಾನ ನಗರ- 85.46 ಕಿ.ಮೀ(142), ಎಚ್‌ಎಎಲ್‌ ವಿಮಾನ ನಿಲ್ದಾಣ-24 ಕಿ.ಮೀ(44) ಸೇರಿದಂತೆ 881.2 ಕಿ.ಮೀ ಉದ್ದದ ರಸ್ತೆಗಳಲ್ಲಿ 687 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ.

ಹೀಗೆ ಒಟ್ಟು 1896.8 ಕಿ.ಮೀ ಉದ್ದದ ರಸ್ತೆಯಲ್ಲಿ 2004 ರಸ್ತೆ ಗುಂಡಿಗಳನ್ನು ಗುರು ಮಾಡಲಾಗಿದ್ದು, ಈವರೆಗೆ 1716 ರಸ್ತೆ ಗುಂಡಿಗಳನ್ನು ಭರ್ತಿ ಮಾಡಲಾಗಿದೆ. 333 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇದೆ ಎಂದು ಮಹದೇವಪುರ ವಲಯದ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಮುಖ ರಸ್ತೆಗಳ ಗುಂಡಿಗಳು ಭರ್ತಿ

ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆ ಸ್ವಲ್ಪ ಬಿಡುವು ನೀಡಿದ ಬೆನ್ನಲ್ಲೇ ಮಹದೇವಪುರ ವಲಯ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಔಟರ್‌ ರಿಂಗ್‌ ರಸ್ತೆ ಸವೀರ್‍ಸ್‌ ರಸ್ತೆ, ದೊಡ್ಡಾನೆಕುಂದಿ, ಮಾರತ್ತಹಳ್ಳಿ, ಇಬ್ಬಲೂರು, ಇಮ್ಮಡಿಹಳ್ಳಿ ರಸ್ತೆ, ಹಗದೂರು ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸಿದ್ದಾಪುರ ನಲ್ಲೂರಹಳ್ಳಿ ರಸ್ತೆ, ಗುಂಜೂರು ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಆರಂಭಗೊಂಡಿದೆ. 25 ಪ್ರಮುಖ ರಸ್ತೆಗಳಲ್ಲಿದ್ದ ಗುಂಡಿಗಳನ್ನು ಭರ್ತಿ ಮಾಡಲಾಗಿದೆ ಎಂದು ಮಹದೇವಪುರ ವಲಯದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದರು.

ಬೆಂಗಳೂರಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್‌: ವಾಹನ ಸಾವರರು ಸುಸ್ತೋ ಸುಸ್ತು..!

ಮಳೆಯಿಂದ ರಸ್ತೆಗೆ ರಾಜಕಾಲುವೆ ನೀರು ಹರಿದು ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಮೊದಲು ಪ್ರವಾಹಕ್ಕೆ ತುತ್ತಾಗಿದ್ದೆವು. ಈಗ ರಸ್ತೆ ಗುಂಡಿಗಳಿಂದ ವಾಹನಗಳನ್ನು ಆಗಾಗ ರಿಪೇರಿಗೆ ಬಿಟ್ಟು ದುಡ್ಡು ಕಳೆದುಕೊಳ್ಳುತ್ತಿದ್ದೇವೆ. ಬಿಬಿಎಂಪಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕೆಲಸ ಮಾಡಿದರೆ ಒಳ್ಳೆಯದ ಅಂತ ಬೆಳ್ಳಂದೂರು ನಿವಾಸಿ ಸುಹಾಸ್‌ ರೋಷನ್‌ ತಿಳಿಸಿದ್ದಾರೆ.

ಕೆ.ಆರ್‌.ಪುರದಿಂದ ರಾಮಮೂರ್ತಿ ನಗರಕ್ಕೆ ಹೋಗುವ ರಸ್ತೆ ಮತ್ತು ಇಲ್ಲಿನ ವಾರ್ಡ್‌ ರಸ್ತೆಗಳು, ಪ್ರಮುಖ ರಸ್ತೆಗಳಲ್ಲೂ ಗುಂಡಿಗಳಿಂದ ಅನೇಕ ಅನಾಹುತಗಳು ಸಂಭವಿಸಿವೆ. ಆಗಾಗ ಬೈಕ್‌ ಸವಾರರು ಬಿದ್ದು ಎದ್ದೇಳುವುದು ಸಾಮಾನ್ಯ. ಗುಂಡಿ ಮುಚ್ಚಿ ಸಾಮಾನ್ಯ ಜನರ ಜೀವ ಉಳಿಸಿ ಎನ್ನುವುದೊಂದೇ ನಮ್ಮ ಆಗ್ರಹ ಅಂತ ಕೆ.ಆರ್‌.ಪುರಂ ನಿವಾಸಿ ರಘುನಂದನ್‌ ಕೋಟಿ ಹೇಳಿದ್ದಾರೆ.