ಹಾಲಿನ ಖರೀದಿ ದರ ಏರಿಸಲು ಆಗ್ರಹಿಸಿ, ಉಡುಪಿಯಲ್ಲಿ ಅಂಚೆ ಕಾರ್ಡ್ ಚಳುವಳಿ
ಹಾಲಿನ ಖರೀದಿ ದರ ಏರಿಸುವಂತೆ ಒತ್ತಾಯಿಸಿ ಅಂಚೆ ಕಾರ್ಡ್ ಚಳುವಳಿ ಗೆ ಕರಾವಳಿಯಲ್ಲಿ ಚಾಲನೆ ದೊರಕಲಿದೆ. ಜಿಲ್ಲೆಯ ರೈತರು ಮತ್ತು ಸಹಕಾರಿಗಳು ಈ ಆಂದೋಲನಕ್ಕೆ ಕೈಜೋಡಿಸಿದ್ದಾರೆ.
ಉಡುಪಿ (ಅ.24): ಹಾಲಿನ ಖರೀದಿ ದರ ಏರಿಸುವಂತೆ ಒತ್ತಾಯಿಸಿ ಅಂಚೆ ಕಾರ್ಡ್ ಚಳುವಳಿ ಗೆ ಕರಾವಳಿಯಲ್ಲಿ ಚಾಲನೆ ದೊರಕಲಿದೆ. ಜಿಲ್ಲೆಯ ರೈತರು ಮತ್ತು ಸಹಕಾರಿಗಳು ಈ ಆಂದೋಲನಕ್ಕೆ ಕೈಜೋಡಿಸಿದ್ದಾರೆ. ಸಹಕಾರ ಭಾರತಿ(ರಿ.) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಭಾರತೀಯ ಕಿಸಾನ್ ಸಂಘ (ರಿ.) ಉಡುಪಿ ಇವರ ಸಹಯೋಗದೊಂದಿಗೆ ಅ.27 ರ ಗುರುವಾರ ಬೆಳಿಗ್ಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೃಹತ್ ರೈತ ಸಮಾವೇಶ, ಹಾಲಿನ ಖರೀದಿ ದರ ಏರಿಸುವಂತೆ ಒತ್ತಾಯಿಸಿ ಅಂಚೆ ಕಾರ್ಡ್ ಚಳುವಳಿಗೆ ಚಾಲನೆಯನ್ನು ನೀಡಲಾಗುತ್ತದೆ ಎಂದು ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿಯವರು ಹೇಳಿದ್ದಾರೆ. ಹಾಲು ಉತ್ಪಾದನೆಯ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕನಿಷ್ಠ 10 ರೂ ಏರಿಸುವಂತೆ ಒತ್ತಾಯಿಸಿ ಸರಕಾರಕ್ಕೆ ರಾಜ್ಯದ ರೈತ ಸಮುದಾಯವು ಬೇಡಿಕೆ ಹಾಗೂ ಮನವಿಯನ್ನು ಸಲ್ಲಿಸುತ್ತಿದೆ. ಆದರೆ ಸರಕಾರ ಯಾವುದೇ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ಉಡುಪಿ ಜಿಲ್ಲೆಯ ರೈತರು ಅಂಚೆ ಕಾರ್ಡ್ ಚಳುವಳಿಯ ಮೂಲಕ ವಿವಿಧ ಹಂತಗಳ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ರವರು ಹಾಲಿನ ದರ ಏರಿಸುವ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಸೂಕ್ತ ಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.
ಸಹಕಾರಿ ಭಾರತಿ ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಸಾಣೂರುನರಸಿಂಹ ಕಾಮತ್ ಮಾತನಾಡಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರಾಜ್ಯದ ಲಕ್ಷಾಂತರ ಹೈನುಗಾರ ಕುಟುಂಬಗಳ ನೆರವಿಗೆ ಮುಖ್ಯಮಂತ್ರಿಗಳು ಬರಬೇಕೆಂದು ಆಗ್ರಹಿಸಿ,ಉಡುಪಿ ಜಿಲ್ಲೆಯ ಒಂದು ಸಾವಿರ ರೈತ ಕುಟುಂಬಗಳು ಅಂಚೆ ಕಾರ್ಡ್ ನಲ್ಲಿ ಪತ್ರ ಬರೆದು ಮುಖ್ಯಮಂತ್ರಿಗಳಿಗೆ ರವಾನಿಸುವುದರ ಮೂಲಕ ಸಹಕಾರ ಭಾರತಿ ಉಡುಪಿ ಜಿಲ್ಲೆಯಿಂದ ಇಡೀ ರಾಜ್ಯಾದ್ಯಂತ ರೈತಪರ ಹೋರಾಟವನ್ನು ವಿಸ್ತರಿಸಲಾಗುವುದು ಎಂದರು.
ಸಹಕಾರ ಭಾರತಿ ಜಿಲ್ಲಾ ಹಾಲು ಪ್ರಕೋಷ್ಠದ ಸಂಚಾಲಕ ಕನ್ನಾರು ಕಮಲಾಕ್ಷ ಹೆಬ್ಬಾರ್ ಈ ಬಗ್ಗೆ ಜನಜಾಗೃತಿಗಾಗಿ ಸಹಕಾರ ಭಾರತಿ ಹಾಲು ಪ್ರಕೋಷ್ಠದ ವತಿಯಿಂದ ಉಡುಪಿ ಜಿಲ್ಲೆಯ 300ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು,ಸಿಬ್ಬಂದಿ ವರ್ಗ ಮತ್ತು ರೈತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
KMF Recruitment 2022: ಕೆಎಂಎಫ್ ನಲ್ಲಿ ವಿವಿಧ 487 ಹುದ್ದೆಗಳಿಗೆ ನೇಮಕಾತಿ
ರೈತ ಸಮಾವೇಶದ ಬಳಿಕ ಉಡುಪಿ ಜಿಲ್ಲೆಯ ಸಹಕಾರ ಭಾರತಿ ಮತ್ತು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಮತ್ತು ತಾಲೂಕಿನ ಪದಾಧಿಕಾರಿಗಳ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಿದ್ದಾರೆ ಎಂದರು.
ಪಶು ಆಹಾರ ಬೆಲೆ ಏರಿಕೆ, ನಷ್ಟದಿಂದ ಹೈನುಗಾರರು ಹೈರಾಣು
ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥರು ರೈತ ಸಮಾವೇಶವನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಸಹಕಾರ ಭಾರತಿ ಹಾಲು ಪುಕೋಷ್ಟದ ರಾಜ್ಯ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಪ್ರಾಸ್ತಾವಿಸಲಿದ್ದಾರೆ.ಮುಂದಿನ ಹಂತದ ಹೋರಾಟದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಕಡಂದಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.