ಪಶು ಆಹಾರ ಬೆಲೆ ಏರಿಕೆ, ನಷ್ಟದಿಂದ ಹೈನುಗಾರರು ಹೈರಾಣು
- ಪಶು ಆಹಾರ ಬೆಲೆ ಏರಿಕೆ, ನಷ್ಟದಿಂದ ಹೈನುಗಾರರು ಹೈರಾಣು
- ಹಾಲು ಉತ್ಪಾದಕರ ಮೇಲೆ ನೇರ ಪರಿಣಾಮ ಬೀರುತ್ತಿರುವ ದರ ಏರಿಕೆ ಬಿಸಿ
ರಾಮ್ ಅಜೆಕಾರು
ಕಾರ್ಕಳ (ಅ.23) : ಕಳೆದ ಕೆಲವು ತಿಂಗಳುಗಳಿಂದ ಪಶು ಅಹಾರದ ದರವು ನಿರಂತರ ಏರಿಕೆಯಾಗುತ್ತಿದ್ದು, ಹೈನುಗಾರರು ಹಾಲು ಉತ್ಪಾದನೆಯ ಖರ್ಚು ಮತ್ತು ಆದಾಯವನ್ನು ಸರಿದೂಗಿಸಲಾಗದೆ ಹೈರಣಾಗಿದ್ದಾರೆ.
ಪಶು ಅಹಾರವಾದ ಒಣ ಹುಲ್ಲು, ಜೋಳದ ಕಡ್ಡಿ, ಬೂಸ, ಶೇಂಗಾ, ಹಿಂಡಿ ಇತ್ಯಾದಿಗಳ ದರ ಹೆಚ್ಚಳವಾಗಿರುವುದರಿಂದ ಹಾಲು ಉತ್ಪಾದಕರ ಮೇಲೆ ಅದರ ನೇರ ಪರಿಣಾಮ ಬೀರುತ್ತಿದೆ. ಹಾಲು ಒಕ್ಕೂಟಗಳು ಉತ್ಪಾದಕರಿಗೆ ಗುಣಮಟ್ಟದ ಹಾಲಿಗೆ ಪ್ರತಿ ಲೀಟರ್‌ಗೆ ಸರ್ಕಾರದ 5 ರುಪಾಯಿ ಪ್ರೋತ್ಸಾಹಧನವೂ ಸೇರಿ 36 ರು. ಬೆಲೆ ನಿಗದಿ ಮಾಡಿದೆ. ಆದರೆ ಪ್ರಸ್ತುತ ನಂದಿನಿ ಹಾಲಿನ ದರವು ಪ್ರತಿ ಲೀಟರ್ 44 ರುಪಾಯಿಯಾಗಿದೆ. ಸರ್ಕಾರ ಹಾಲು ಉತ್ಪಾದಕರಿಂದ ಹಾಲು ಖರೀದಿ ದರವನ್ನು ಏರಿಸಬೇಕಿದೆ. ಪಶು ಆಹಾರದ ಬೆಲೆ ಏರಿಕೆಯಾಗಿರುವುದರಿಂದ ಅದರಿಂದ ಆಗುವ ನಷ್ಟವನ್ನು ಸರಿದೂಗಿಸಲಾಗದೆ ಕೆಲವು ಹೈನುಗಾರರು ಕಸುಬಿನಿಂದಲೇ ದೂರವಾಗುತಿದ್ದಾರೆ.
ಜಾನುವಾರುಗಳಿಗೆ Lumpy skin disease; ಹೈನೋದ್ಯಮಕ್ಕೆ ಪೆಟ್ಟು
ಈ ಬಾರಿ ಹೆಚ್ಚಿದ ಮಳೆಯಿಂದಾಗಿ ಶೆಂಗಾ ಹಿಂಡಿ, ಜೋಳ, ಹತ್ತಿ ಹಿಂಡಿ ,ಡಿಒಆರ್‌ಬಿ ಉತ್ಪಾದನೆ ಕುಂಠಿತವಾಗಿದ್ದು, ಕಳೆದ 8 ತಿಂಗಳಿಂದ ಇವುಗಳ ದರ ತೀವ್ರ ಏರುಗತಿಯಲ್ಲಿದೆ. ನಂದಿನಿ ಗೋಲ್ಡ್ ಜೂನ್‌ನಲ್ಲಿ 50 ಕಿಲೋಗೆ 990 ರು. ಇದ್ದರೆ ಸೆಪ್ಟೆಂಬರ್ ತಿಂಗಳಲ್ಲಿ 1065 ರು.ಗಳಾಗಿದ್ದು, ಅ.19 ರಂದು 1190 ರು.ಗೆ ಏರಿಕೆಯಾಗಿದೆ. 4 ತಿಂಗಳಲ್ಲಿ 210 ರು.ಗಳಷ್ಟುಹೆಚ್ಚಿದ್ದು, ಸದ್ಯ ನಂದಿನಿ ಬೈಪಾಸ್ ಪಶು ಅಹಾರ ಬೆಲೆ 1310 ರುಪಾಯಿಯಷ್ಟಿದೆ.
ಒಣಹುಲ್ಲು ಕೊರತೆ, ಬೆಲೆ ಹೆಚ್ಚಳ, ಹಸುಗಳ ಅರೋಗ್ಯ ಸಮಸ್ಯೆಯಿಂದಾಗಿ ಹೈನುಗಾರರು ಕಂಗಾಲಾಗಿದ್ದಾರೆ. ಹೈನುಗಾರರನ್ನು ಮತ್ತು ಹೈನುಗಾರಿಕೆಯನ್ನು ಉಳಿಸಬೇಕಾದರೆ ಸರ್ಕಾರವು ಹಾಲು ಉತ್ಪಾದಕರಿಂದ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ 50 ರುಪಾಯಿಯಾದರೂ ಏರಿಸಬೇಕು. ಇದರಿಂದ ಹೈನುಗಾರರಿಗೂ ಲಾಭವಾಗಲಿದೆ
- ರಂಜಿತ್, ಹಾಲು ಉತ್ಪಾದಕರು ಉಡುಪಿ