ಕನಕಗಿರಿ(ಮೇ.21): ಹೊರ ರಾಜ್ಯಗಳಿಂದ ತಮ್ಮೂರಿಗೆ ಬಂದ ಕ್ವಾರಂಟೈನ್‌ನಲ್ಲಿರುವ ಸ್ಥಳೀಯ ನಿವಾಸಿಗಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಹಾಗೂ ದುರ್ನಾತದಿಂದ ಕೂಡಿದ ಶೌಚಾಲಯಗಳಿದ್ದು, ಜನರಿಗೆ ತೊಂದರೆ ಉಂಟಾಗಿದೆ.

ಕೊವೀಡ್‌-19 ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬಂದ ಪಟ್ಟಣದ ನಿವಾಸಿಗಳಿಗೆ ಇಲ್ಲಿನ ಹೊರವಲಯದ ಪ.ಜಾ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮುಂಜಾಗ್ರ​ತಾ ಕ್ರಮವಾಗಿ 14 ದಿನಗಳ ಕಾಲ 4 ಮಹಿಳೆಯರು, 16 ಜನ ಪುರುಷರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಿಗೆ ಮಂಗಳವಾರ ಪೂರೈಕೆ ಮಾಡಿದ ಶಾವಿಗೆ ಉಪ್ಪಿಟ್ಟು ಹಾಗೂ ಅನ್ನ, ಸಾಂಬರನಲ್ಲಿ ಹುಳು ಬಂದಿದ್ದರಿಂದ 20 ಜನರು ಊಟ ಬಿಟ್ಟಿದ್ದಾರೆ. ಕ್ವಾರಂಟೈನ್‌ನಲ್ಲಿ ಇದ್ದರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಳಪೆ ಮಟ್ಟದ ಹಾಗೂ ಹುಳು ಬಿದ್ದಿರುವ ಉಪಾಹಾರ, ಊಟ ಪೂರೈಕೆ ಮಾಡುತ್ತಿದ್ದಾರೆನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ನವಲಿ ಡ್ಯಾಂ ನಿರ್ಮಾಣಕ್ಕೆ ಗ್ರೀನ್‌ ಸಿಗ್ನಲ್‌: ಗಂಗಾವತಿ ಭಾಗ​ದಲ್ಲಿ ಭೂಮಿಗೆ ಬಂತು ಚಿನ್ನದ ಬೆಲೆ..!

ಇತ್ತ ಶೌಚಾಲಯಗಳು ಸ್ವಚ್ಛತೆ ಇಲ್ಲದ ಕಾರಣ ದುರ್ನಾತ ಬೀರುತ್ತಿವೆ. ಬಾಗಿಲಗಳು ದುರಸ್ತಿಗೊಂಡಿವೆ. ಶೌಚಕ್ಕೆ, ಸ್ನಾನಕ್ಕೆ ಹೋಗಲು ತೊಂದರೆಯಾಗಿದೆ. ಈ ದುಸ್ಥಿತಿಯಿಂದ ಮತ್ತೊಂದು ರೋಗಕ್ಕೆ ತುತ್ತಾಗುವ ಲಕ್ಷಣಗಳು ಹೆಚ್ಚಾಗಿದೆ. ನಿತ್ಯ ವೈದ್ಯರು ಆಗಮಿಸಿ ಸ್ಕಾನಿಂಗ್‌ ತಪಾಸಣೆ ಮಾಡುತ್ತಿದ್ದು, ರೋಗದ ಲಕ್ಷಣಗಳು ಇಲ್ಲದಿದ್ದರೂ ಸಹ ಶೌಚಾಲಯದ ಬಾಗಿಲು ದುರಸ್ತಿ ಹಾಗೂ ಸ್ವಚ್ಛತೆಗೆ ತಾಲೂಕು ಹಾಗೂ ಪ.ಪಂ ಸಿಬ್ಬಂದಿಗಳು ಮುಂದಾಗಿಲ್ಲ. ಶೌಚ ಮತ್ತು ಸ್ನಾನಕ್ಕೆ ತೆರಳಿದರೆ ಆಯಾ ಜನರ ಸಂಬಂಧಿಕರು ಹೊರಗಡೆ ಕಾವಲುಗಾರರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ವಾರಂಟೈನಲ್ಲಿರುವ ಜನರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಊಟ ಹಾಗೂ ವಸತಿಯ ವ್ಯವಸ್ಥೆ ಕಲ್ಪಿಸುತ್ತಿದ್ದು, ನಮಗೆ ಸಂಬಂಧಿಸಿಲ್ಲ ಎಂದು ಪ.ಪಂ. ಮುಖ್ಯಾಧಿಕಾರಿ ತಿರುಮಲ ಎಂ. ಹೇಳಿದ್ದಾರೆ. ಚೆನ್ನೈ, ಮುಂಬೈ, ಮಹಾರಾಷ್ಟ್ರ, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯದಿಂದ 20 ಜನರು ಆಗಮಿಸಿದ್ದು, ಮುಂಜಾಗ್ರ​ತಾ ಕ್ರಮವಾಗಿ ತಾಲೂಕು ಹಾಗೂ ಪ.ಪಂ ಆಡಳಿತ ಮಂಡಳಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.