ಬೇಸಿಗೆ ಆರಂಭವಾಗಿದೆ. ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬೀಳುವ ಆತಂಕವು ಇದೆ. ಈ ಹಿನ್ನಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಹಲವು ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಫೆ.13): ಬೇಸಿಗೆ ಆರಂಭವಾಗಿದೆ. ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬೀಳುವ ಆತಂಕವು ಇದೆ. ಈ ಹಿನ್ನಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಬೀಳದಂತೆ ಹಲವು ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಅದೇನು ಅಂತೀರಾ ಈ ಸ್ಟೋರಿ ನೋಡಿ. ಈಗ ಬೇಸಿಗೆ ಆರಂಭವಾಗಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಒಣಗತೊಡಗಿದೆ. ಹಾಗಾಗಿ ಬೆಂಕಿಯಿಂದ ಅರಣ್ಯ ಸಂಪತ್ತು ರಕ್ಷಿಸಲು ಅರಣ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮ ವಹಿಸಿದೆ. ಪ್ರಮುಖವಾಗಿ ಬೆಂಕಿ ರೇಖೆ ( ಫೈರ್ ಲೈನ್) ನಿರ್ಮಾಣ ಮಾಡಲಾಗುತ್ತಿದೆ. ಕಾಡಿಗೆ ಬೆಂಕಿ ಹಬ್ಬದಂತೆ ಬಂಡಿಪುರದ ಮದ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಹಾಗು ಸುತ್ತಮುತ್ತಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಗಳಲ್ಲಿ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ.
ರಸ್ತೆ ಬದಿ ಬೆಳೆದು ನಿಂತಿರುವ ಕಳೆ ಗಿಡಗಳನ್ನು ಕತ್ತರಿಸಿ ಒಣಗಿದ ಎಲೆಗಳು ಹಾಗು ಒಣ ಹುಲ್ಲಿಗೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲೂ ತಲಾ 250 ಕಿ.ಲೋ. ಮೀಟರ್ ನಂತೆ ಸುಮಾರು 3000 ಕಿ.ಲೋ. ಮೀಟರ್ ಬೆಂಕಿ ರೇಖೆ ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ರಸ್ತೆಯ ಇಕ್ಕೆಲಗಳಲ್ಲಿ ಮೊದಲೇ ಬೆಂಕಿ ಹಾಕಿ ನಂದಿಸುವುದರಿಂದ ಬೆಂಕಿ ಕಾಡಿಗೆ ಹಬ್ಬುವುದಿಲ್ಲ. ಬೆಂಕಿ ರೇಖೆ ನಿರ್ಮಾಣವಷ್ಟೇ ಅಲ್ಲದೆ ಪ್ರತಿಯೊಂದು ವಲಯಕ್ಕೂ ನೀರಿನ ಟ್ಯಾಂಕರ್, ಫೈರ್ ಮೀಟರ್ಸ್, ಪಿಕಪ್ ವಾಹನ ಸೇರಿದಂತೆ ಅಗ್ನಿಶಾಮಕ ಉಪಕರಣಗಳನ್ನು ಸನ್ನದ್ಧವಾಗಿ ಇಡಲಾಗಿದೆ.
ಫೈರ್ ಲೈನ್ ಕೆಲಸ ನಿರ್ವಹಣೆ ಕೇವಲ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಜನವರಿಯಿಂದ ಮೇ ವರೆಗೆ ದಿನಗೂಲಿ ಆಧಾರದ ಮೇಲೆ ಕಾರ್ಮಿಕರನ್ನ ನೇಮಕ ಮಾಡಿಕೊಳ್ಳಲಾಗುತ್ತೆ. ಬೆಂಕಿ ರೇಖೆ ನಿರ್ಮಾಣಕ್ಕೆ ಹಾಗು ಬೆಂಕಿ ನಂದಿಸಲು ಹೊರಗುತ್ತಿಗೆ ಆಧಾರದ ಮೇಲೆ 455 ಫೈರ್ ವಾಚರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅರಣ್ಯ ಇಲಾಖೆ ವಾಹನದಲ್ಲೇ ಬರುವ ಇವರು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕೆಲಸ ಮಾಡ್ತಾರೆ. ಸಣ್ಣಪುಟ್ಟ ಗಿಡಗಂಟಿಗಳನ್ನ ಮೊದಲು ಕಡಿದು ಬಳಿಕ ಬೆಂಕಿ ಹಾಕಲಾಗುತ್ತೆ. ಕಾಡಲ್ಲಿ ಸಿಗುವ ಸೊಪ್ಪು ತಗೊಂಡು ಬೆಂಕಿ ನಂದಿಸುವ ಕೆಲಸವನ್ನ ಒಟ್ಟಾಗಿ ಮಾಡ್ತಿದಾರೆ.
ಮಾದಪ್ಪನ ಸನ್ನಿಧಾನದಲ್ಲಿ ನಡೆಯಬೇಕಿದ್ದ ಸಂಪುಟ ಸಭೆ 3ನೇ ಬಾರಿಗೆ ಮುಂದೂಡಿಕೆ?: ಕಾರಣವೇನು?
ಕಾಡಿನ ಬಗೆ ಹೆಚ್ಚು ಅರಿವಿರುವ ಸ್ಥಳೀಯ ಸೋಲಿಗರಿಗೆ ಆದ್ಯತೆ ನೀಡಲಾಗಿದೆ. ಅರಣ್ಯಕ್ಕೆ ಬೆಂಕಿ ಬಿದ್ದರೆ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗಲಿದೆ. ಸಹಜವಾಗಿಯೇ ವನ್ಯಜೀವಿಗಳು ಕಾಡಂಚಿನ ಗ್ರಾಮ ಇಲ್ಲವೇ ಜಮೀನುಗಳಿಗೆ ಲಗ್ಗೆ ಇಟ್ಟು ಪ್ರಾಣಿ ಮಾನವ ಸಂಘರ್ಷ ಸಹಜವಾಗಿಯೇ ಉಂಟಾಗಲಿದೆ. ಹಾಗಾಗಿ ಅರಣ್ಯಕ್ಕೆ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸುವುದು ಸಾರ್ವಜನಿಕರ ಜವಬ್ದಾರಿಯೂ ಆಗಿದೆ. ಒಟ್ಟಾರೆ ಬೆಂಕಿ ಬಿದ್ದಾಗ ಕ್ರಮ ಕೈಗೊಳ್ಳುವ ಬದಲು ಮೊದಲೇ ಸಮರೋಪಾದಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾರದ್ದೋ ಮೇಲಿನ ದ್ವೇಷ ಮತ್ತು ಸ್ವಾರ್ಥಕ್ಕಾಗಿ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕದೇ ಇರಲಿ. ಅಮೂಲ್ಯ ಅರಣ್ಯ ಸಂಪತ್ತು ನಾಶವಾಗದಿರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.
