ಮಂಗಳೂರು(ಫೆ.27): ‘ವಿರೋಧ ಪಕ್ಷ ಸ್ಥಾನದಲ್ಲಿ ಕೂರಲು ಕಾಂಗ್ರೆಸ್‌ ನಾಲಾಯಕ್‌’ ಎಂಬ ಜಿಲ್ಲಾ ಬಿಜೆಪಿ ಮುಖಂಡರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಮಾನಾಥ ರೈ, ಅಧಿಕಾರ ನಡೆಸಲು ಬಿಜೆಪಿ ನಾಲಾಯಕ್‌ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ನಾವು ಚುನಾವಣೆಯಲ್ಲಿ ಸೋತಿರುವುದು ನಿಜ. ಈ ಸೋಲು ಶಾಶ್ವತವಲ್ಲ. ಜನರಿಗೆ ಧರ್ಮದ ಅಮಲು ಹತ್ತಿಸಿ ಅಧಿಕಾರಕ್ಕೆ ಬಂದ ಬಿಜೆಪಿಯವರಿಗೆ ಈಗ ಅಧಿಕಾರದ ಅಮಲು ತಲೆಗೇರಿದೆ. ಅದೇ ಅಮಲಿನಿಂದ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ ಎಂದರು.

ದಿವ್ಯಾಂಗ ಮಕ್ಕಳ ಶಾಲೆಗೆ ಕಂಬಳ ವೀರನ ಕೊಡುಗೆ

ಬಿಜೆಪಿ ಶಾಸಕರು ಪರ್ಸೆಂಟೇಜ್‌ ಸಿಗುವಂಥ ಅಭಿವೃದ್ಧಿ ಕೆಲಸಗಳನ್ನು ಮಾತ್ರ ಮಾಡಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಕೆಲಸಗಳೂ ನಡೆಯುತ್ತಿಲ್ಲ. ಜಿಲ್ಲೆಯ ಎಲ್ಲ ಶಾಸಕರು ಈ ಕೆಲಸ ಮಾಡ್ತಿದ್ದಾರೆ ಎನ್ನಲ್ಲ. ಆದರೆ ಕೆಲವು ಶಾಸಕರು ಅಭಿವೃದ್ಧಿ ಕಾಮಗಾರಿಗಳಲ್ಲಿ ಪರ್ಸೆಂಟೇಜ್‌ ಪಡೆಯುತ್ತಿದ್ದಾರೆ. ಬೇಕಾದರೆ ಗುತ್ತಿಗೆದಾರರನ್ನೇ ಕೇಳಿ ಎಂದು ರೈ ಆರೋಪಿಸಿದರು.

ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು:

ಹಿಂದೆ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಮಾಫಿಯಾ ನಡೆಯುತ್ತಿದೆ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುತ್ತಿದ್ದರು. ಈಗ ಅಕ್ರಮ ಮರಳುಗಾರಿಕೆ ನಡೆಯುವ ಜಾಗಗಳಿಗೆ ಹೋಗಬೇಡಿ ಎಂದು ಪೊಲೀಸರಿಗೇ ಧಮ್ಕಿ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ವ್ಯವಹಾರಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ದೂರಿದರು.

ಬಡವರಿಗೆ ಒಂದೇ ಒಂದು ಮನೆ ಕಟ್ಟಿಸಿಕೊಡಲು ಇವರಿಂದ ಆಗಿಲ್ಲ. ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ತಂದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೇ ಬಿಜೆಪಿಯವರ ಕೊಡುಗೆ. ತಮಗೆ ಅಧಿಕಾರ ನಡæಸಲು ಬರಲ್ಲ, ನಾಲಾಯಕ್‌ ಎಂಬುದನ್ನು ಬಿಜೆಪಿಯವರು ಈ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ರಮಾನಾಥ ರೈ ಟೀಕಿಸಿದರು.

ಮದರಂಗಿ ಶಾಸ್ತ್ರ ಮುಗಿಸಿ ಮಲಗಿದ್ದ ವಧು ಮದುವೆ ದಿನ ನಾಪತ್ತೆ

ವಿಧಾನ ಪರಿಷತ್‌ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಮನಪಾ ಸದಸ್ಯರಾದ ಅಬ್ದುಲ್‌ ರವೂಫ್‌, ನವೀನ್‌ ಡಿಸೋಜ, ಕಾಂಗ್ರೆಸ್‌ ಮುಖಂಡರಾದ ಸುಭೋದಯ್‌ ಆಳ್ವ, ಎಸ್‌.ಅಪ್ಪಿ, ನಿರಜ್‌ಪಾಲ್‌, ಸಂತೋಷ್‌ ಕುಮಾರ್‌ ಶೆಟ್ಟಿ, ಮುಹಮ್ಮದ್‌ ಕುಂಜತ್‌ಬೈಲ್‌, ಹರಿನಾಥ್‌ ಕೆ., ನಝೀರ್‌ ಬಜಾಲ್‌ ಮತ್ತಿತರರು ಇದ್ದರು.

ದೊರೆಸ್ವಾಮಿ ನಿಂದನೆ ದೇಶದ್ರೋಹ: ರಮಾನಾಥ ರೈ

ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಎಚ್‌.ಎಸ್‌. ದೊರೆಸ್ವಾಮಿ ವಿರುದ್ಧ ಬಿಜೆಪಿಯವರ ಅವಹೇಳನಕಾರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಮಾನಾಥ ರೈ, ಬ್ರಿಟಿಷರ ಜತೆ ಕೈಜೋಡಿಸಿದವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಭಿಮಾನವಿಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನೇ ಟೀಕಿಸ್ತಾರೆ. ಗಾಂಧೀಜಿಯ ಕೊಂದ ಗೋಡ್ಸೆಯನ್ನು ಪೂಜಿಸ್ತಾರೆ ಎಂದು ಟೀಕಿಸಿದರು.