ಮೈಕೊಡವಿ ನಿಂತ ರಾಜಕೀಯ ಪಕ್ಷಗಳು : ರಂಗೇರಲಿದೆ ರಣಕಣ
ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವೂ ಬುಧವಾರ ವೇಳಾಪಟ್ಟಿಪ್ರಕಟಿಸಿದ್ದು ಮೇ.10ಕ್ಕೆ ಮತ ಸಮರಕ್ಕೆ ದಿನ ನಿಗದಿಯಾಗಿದೆ. ಅತ್ತ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಜಿಲ್ಲೆಯ ರಾಜಕೀಯ ಪಕ್ಷಗಳು ಮೈಕೊಡವಿ ನಿಂತಿದ್ದು ಚುನಾವಣಾ ರಣಕಣ ರಂಗೇರುವಂತೆ ಮಾಡಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ : ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವೂ ಬುಧವಾರ ವೇಳಾಪಟ್ಟಿಪ್ರಕಟಿಸಿದ್ದು ಮೇ.10ಕ್ಕೆ ಮತ ಸಮರಕ್ಕೆ ದಿನ ನಿಗದಿಯಾಗಿದೆ. ಅತ್ತ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಜಿಲ್ಲೆಯ ರಾಜಕೀಯ ಪಕ್ಷಗಳು ಮೈಕೊಡವಿ ನಿಂತಿದ್ದು ಚುನಾವಣಾ ರಣಕಣ ರಂಗೇರುವಂತೆ ಮಾಡಿದೆ.
ಈಗಾಗಲೇ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಒಂದೂವರೆ ತಿಂಗಳು ಮೊದಲೇ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಚುನಾವಣಾ ರಣತಂತ್ರ ಹಾಗೂ ಪ್ರಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಸೆಡ್ಡು ಹೊಡೆಲು ಮುಂದಾಗಿದೆ.
ಆಟೋ ಚಾಲಕರ ಕೈ ಹಿಡಿದ ಕುಮಾರಣ್ಣ: ಮಾಸಿಕ 2 ಸಾವಿರ ರೂ. ನೆರವು ಘೋಷಣೆ
ಮತ್ತೊಂದಡೆ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡುವ ತವಕದಲ್ಲಿರುವ ಆಡಳಿತರೂಢ ಬಿಜೆಪಿ ಜಿಲ್ಲೆಯ ಐದು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಿಸದೇ ಇದ್ದರೂ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಗೆ ಟಕ್ಕರ್ ಕೊಡಲು ಇನ್ನಿಲ್ಲದ ರಾಜಕೀಯ ತಂತ್ರಗಾರಿಕೆ ಅಣಿಯುತ್ತಿದ್ದು ಬಿಜೆಪಿ ಅಭ್ಯರ್ಥಿಗಳ ಘೋಷಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ನಡುವೆ ಇತ್ತೀಚೆಗೆ ಅಷ್ಟೇ ಕಾಂಗ್ರೆಸ್ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ ಸೇರಿ ಮೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿರುವುದು ರಾಜಕೀಯವಾಗಿ ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು ಆಗಲಿದ್ದಾರೆಂಬ ಯಕ್ಷಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಅದರಲ್ಲೂ ಹಾಲಿ ಮೂವರು ಶಾಸಕರಲ್ಲಿ ಇಬ್ಬರಿಗೆ ಟಿಕೆಟ್ ಹಂಚಿರುವ ಕಾಂಗ್ರೆಸ್, ಶಿಡ್ಲಘಟ್ಟಶಾಸಕ ವಿ.ಮುನಿಯಪ್ಪಗೆ ಟಿಕೆಟ್ ಘೋಷಿಸಿಲ್ಲ. ಅವರ ಉತ್ತರಾಧಿಕಾರಿ ಯಾರಾಗುತ್ತಾರೆಂಬ ಚರ್ಚೆ ಕ್ಷೇತ್ರದಲ್ಲಿ ಸಾಕಷ್ಟುಸದ್ದು ಮಾಡುತ್ತಿದೆ.
ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ:
ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಯು ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದು, ಬಿಜೆಪಿಗಿಂತ ಜೆಡಿಎಸ್ ಕಾಂಗ್ರೆಸ್‌ಗೆ ಪ್ರಮುಖ ರಾಜಕೀಯ ಎದುರಾಳಿ ಆಗಿದೆ. ಜೊತೆಗೆ ಪ್ರತಿ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯುತ್ತಿದ್ದ ಚುನಾವಣೆ ಇದೀಗ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಅದರಲ್ಲೂ ಸಚಿವ ಸುಧಾಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಜಿಲ್ಲಾದ್ಯಂತ ಕಮಲದ ಬಲ ವಿಸ್ತರಣೆ ಆಗಿದ್ದು ಐದು ಕ್ಷೇತ್ರಗಳಿಗೆ ಇನ್ನೂ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸದೇ ಇರುವುದು ಸಾಕಷ್ಟುಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಬಿಜೆಪಿಯ 5 ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚು ಆಕಾಂಕ್ಷಿಗಳು ಇರುವುದರಿಂದ ಯಾರಿಗೆ ಮಣೆ ಹಾಕಿ ಟಿಕೆಟ್ ಘೊಷಣೆ ಮಾಡುತ್ತದೆ ಎನ್ನುವುದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ ವಿಧಾನಸಭೆ 2018ರ ಚುನಾವಣೆ ಪಕ್ಷಗಳ ಬಲಾಬಲ ಎಷ್ಟಿದೆ?: 2023ಕ್ಕೆ ಏನಾಗಲಿದೆ.!
ಹಾಲಿ ಪಕ್ಷಗಳ ಬಲಾಬಲ
ಒಟ್ಟು ಕ್ಷೇತ್ರ 5
ಜೆಡಿಎಸ್ 1
ಬಿಜೆಪಿ 1
ಕಾಂಗ್ರೆಸ 3
ಮತದಾರರ ಬೇಟೆಗೆ 3 ಪಕ್ಷಗಳಿಂದ ಪೈಪೋಟಿ
ಜಿಲ್ಲಾದ್ಯಂತ ಜನತಾ ಜಲಧಾರೆ, ಪಂಚರತ್ನರಥಯಾತ್ರೆ ಮೂಲಕ ಮೊದಲ ಹಂತದಲ್ಲಿ ಮತದಾರರನ್ನು ತಲುಪಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಮನೆ ಮನೆಗೂ ಬೇಟಿ ನೀಡಿ ಮತಯಾಚನೆ ನಡೆಸುತ್ತಿದ್ದಾರೆ. ಆಡಳಿತರೂಢ ಬಿಜೆಪಿ ಕೂಡ ವಿಜಯ ಸಂಕಲ್ಪ ಯಾತ್ರೆ, ವಿವಿದ ಮೋರ್ಚಾಗಳ ಜಿಲ್ಲಾ ಸಮಾವೇಶ ನಡೆಸಿದೆ. ಕಾಂಗ್ರೆಸ್ ಕೂಡ ಪ್ರಜಾಧ್ವನಿ ಸಮಾವೇಶಗಳ ಮೂಲಕ ಚುನಾವಣೆಗೆ ಕಹಳೆ ಮೊಳಗಿಸುವ ಮೂಲಕ ಮತಬೇಟೆಗೆ ಮುಂದಾಗಿವೆ.