ಬೆಂಗಳೂರು: ಮಾಗಡಿ ರೋಡ್ ಮದುಮಗ ಆಯ್ತು! ಸುಂಕದಕಟ್ಟೆ ಮದುಮಗಳಿಗೆ ರಸ್ತೆ ಬಿಡದ ಪೊಲೀಸರು
ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಮದುವೆ ಮಂಟಪಕ್ಕೆ ಹೋಗುತ್ತಿದ್ದ ಮದುಮಗಳನ್ನು ಅಡ್ಡಗಟ್ಟಿದ ಘಟನೆ ಸುಂಕದಕಟ್ಟೆ ಬಳಿ ನಡೆದಿದೆ.
ಬೆಂಗಳೂರು (ಏ.29): ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಬೆಳಗ್ಗೆ ಮದುಮಗನನ್ನು ಚೌಟ್ರಿಗೆ ಹೋಗಲು ಬಿಡದೇ ಪೊಲೀಸರು ಅಡ್ಡಗಟ್ಟಿದ್ದರು. ಆದರೆ, ಮಧ್ಯಾಹ್ನ ಸುಂಕದಕಟ್ಟೆಯ ಬಳಿ ಮತ್ತೊಂದು ಪ್ರಕರಣದಲ್ಲಿ ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ಮದುಮಗಳನ್ನು ಅಡ್ಡಗಟ್ಟಿರುವ ಘಟನೆ ನಡೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ (5.3 ಕಿಮೀ) ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನುಯ ಬಂದ್ ಮಾಡಿದ್ದ ಪೊಲೀಸರು ಬೆಳಗ್ಗೆ ನೈಸ್ ರೋಡ್ ಜಂಕ್ಷನ್‌ನಲ್ಲಿ ಚೌಟ್ರಿಗೆ ಹೊರಟಿದ್ದ ಮದುಮಗನನ್ನು ಪೊಲೀಸರು ಅಡ್ಡಗಟ್ಟಿದ್ದರು. ಈಗ ಮಧ್ಯಾಹ್ನ ಸುಂಕದ ಕಟ್ಟೆ ಬಳಿಯ ಕಲ್ಯಾಣ ಮಂಟಪಕ್ಕೆ ಹೊರಟಿದ್ದ ಮದುಮಗಳನ್ನೂ ಕೂಡ ಅಡ್ಡಗಟ್ಟಿದ್ದಾರೆ. ಕಲ್ಯಾಣ ಮಂಟಪಕ್ಕೆ ಹೋಗಲು ಮಧುಮಗಳನ್ನು ಸ್ಕೂಟರ್‌ನಲ್ಲಿ ಕರೆತಂದ ಕುಟುಂಬಸ್ಥರು, ರಸ್ತೆಯ ಪಕ್ಕದಲ್ಲಿರುವ ಮುದ್ದಣ್ಣ ಚೌಲ್ಟ್ರಿಯಲ್ಲಿ ಮದುವೆ ನಿಗದಿಯಾಗಿದ್ದು, ಹೋಗಲು ಬಿಡುವಂತೆ ಮನವಿ ಮಾಡಿದ್ದಾರೆ.
Bengaluru: ಮದುಮಗನನ್ನು ತಾಳಿ ಕಟ್ಟೋಕೆ ಹೋಗಲು ಬಿಡದ ಪೊಲೀಸರು! ಮೋದಿ ಬರ್ತಾರೆಂದು ರಸ್ತೆ ಕ್ಲೋಸ್!
ಮದುವೆ ಕಲಶವನ್ನು ಸ್ಕ್ಯಾನ್ ಮಾಡಿದ ಪೊಲೀಸರು: ಸ್ಕೂಟರ್‌ನಲ್ಲಿ ಮದುಮಗಳು, ಚಾಲಕ ಹಾಗೂ ಕಲಶ ಹಿಡಿದು ಕುಳಿತಿದ್ದ ಮಹಿಳೆಯನ್ನು ನೋಡಿದ ಪೊಲೀಸರು ಕಲಶವನ್ನು ಸ್ಕ್ಯಾನ್ ಮಾಡಿ ಪರಿಶೀಲನೆ ಮಾಡಿದ್ದಾರೆ. ನಂತರ, ಮಾಧ್ಯಮಗಳ ಕ್ಯಾಮರಾಗಳು ಬಂದು ಮದುಮಗಳು ಹಾಗೂ ಅವರನ್ನು ಅಡಡಗಟ್ಟಿದ ಪೊಲೀಸರ ನಡುವೆ ನಡೆಯುತ್ತಿದ್ದ ವಾಗ್ವಾದವನ್ನು ಸೆರೆಹಿಡಿಯಲು ಮುಂದಾಗುತ್ತಿದ್ದಂತೆ, ಪೊಲೀಸರು ಮದುಮಗಳು ಕಲ್ಯಾಣ ಮಂಟಪದತ್ತ ತೆರಳಲು ಅವಕಾಶ ಮಾಡಿಕೊಟ್ಟರು.
ಸುಂಕದಕಟ್ಟೆ ನೈಸ್ ರೋಡ್ ಜಂಕ್ಷನ್ ಬಳಿ ಘಟನೆ: ನೈಸ್ ರೋಡ್ ಜಂಕ್ಷನ್ ಬಳಿ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ಮದುಮಗನ ಕಾರನ್ನು ಪೊಲೀಸರು ತಡೆದಿದ್ದರು. ಪೊಲೀಸರು ಅಡ್ಡಗಟ್ಟಿದ್ದರಿಂದ ತಾನೇ ಖುದ್ದು ಕಾರಿನಿಂದ ಇಳಿದ ಮದುಮಗ ಇದೇ ರಸ್ತೆಯಲ್ಲೇ ಚೌಟ್ರಿ ಇದೆ, ನಮ್ಮನ್ನು ಮದುವೆ ಕಾರ್ಯಕ್ರಮಕ್ಕೆ ಹೋಗಲು ಬಿಡುವಂತೆ ಮನವಿ ಮಾಡಿಕೊಂಡಿದ್ದಾನೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಹಿನ್ನೆಲೆಯಲ್ಲಿ ನೈಸ್ ರೋಡ್ ಜಂಕ್ಷನ್ ಬಳಿ ರಸ್ತೆ ಬ್ಲಾಕ್ ಮಾಡಲಾಗಿದೆ ಎಂದು ಮದುಮಗನನ್ನು ಅಲ್ಲಿಯೇ ನಿಲ್ಲಿಸಿದ್ದಾರೆ. ಸುಂಕದಕಟ್ಟೆ ರಸ್ತೆಯಲ್ಲಿರುವ ಅಕ್ಷಯ್ ಚೌಟ್ರಿಯ ಬಳಿ ನಡೆದಿದೆ. ಇಂದು ಮತ್ತು ನಾಳೆ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ ರಿಷಪ್ಷನ್ ಇದ್ದು, ಭಾನುವಾರ ತಾಳಿ ಮುಹೂರ್ತವಿದೆ. ಹೀಗಾಗಿ, ರಿಷಪ್ಷನ್‌ಗೆ ತಡವಾಗುತ್ತಿದೆ ಎಂದು ಹೇಳಿದರೂ ದಾರಿಯನ್ನು ಬಿಟ್ಟಿರಲಿಲ್ಲ. ಸುಮಾರು ಒಂದೆ ಗಂಟೆ ಕಾಲ ಮದುಮಗ ರಸ್ತೆಯಲ್ಲೇ ನಿಂತುಕೊಂಡು ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟ ನಂತರ ಅವರಿಗೆ ದಾರಿಯನ್ನು ಬಿಟ್ಟಿದ್ದರು.
ಇಂದು ಬೆಂಗ್ಳೂರಲ್ಲಿ ಮೋದಿ ರೋಡ್ ಶೋ: ರಸ್ತೆ ಸಂಚಾರ ಬದಲಾವಣೆ
ರಾತ್ರಿ 7.30ರವರೆಗೆ ಸಂಚಾರ ನಿರ್ಬಂಧ: ನಗರದ ವಿವಿಧೆಡೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು,ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 7.30ರವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಕಬ್ಬನ್ ರಸ್ತೆ, ಡಿಕನ್ಸನ್ ರಸ್ತೆ, ಅಂಬೇಡ್ಕರ್ ರಸ್ತೆ, ಕೆ.ಆರ್.ಸರ್ಕಲ್, ನೃಪತುಂಗ ರಸ್ತೆ, ಲಾಲ್‌ಬಾಗ್ ಪಶ್ಚಿಮ ದ್ವಾರ ರಸ್ತೆ, ಲಾಲ್‌ಬಾಗ್ ಮುಖ್ಯ ರಸ್ತೆ, ಬಸವನಗುಡಿ 50 ಅಡಿ ಕೆನರಾ ಬ್ಯಾಂಕ್ ರಸ್ತೆ, ಕೃಂಬಿಗಲ್ ರಸ್ತೆ, ಆರ್.ವಿ.ಕಾಲೇಜು ರಸ್ತೆ, ದೇವಾಂಗ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.