ಮೈಸೂರು: ಪೊಲೀಸ್ ಅಧಿಕಾರಿಯ ಪುತ್ರನ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಅಮಾಯಕ ಬಲಿ
ದೂರು ದಾಖಲಾಗಿ 20 ದಿನಗಳಲ್ಲೇ ಈತ ಮತ್ತೆ ವ್ಹೀಲಿಂಗ್ ಮಾಡಿ ಅಮಾಯಕ ವ್ಯಕ್ತಿಯ ಜೀವವನ್ನು ಬಲಿ ತೆಗೆದುಕೊಂಡ ಸಯ್ಯದ್. ಮೃತರ ಕುಟುಂಬದವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ನಂಜನಗೂಡು(ಸೆ.17): ಸಂಚಾರ ಪೊಲೀಸ್ ಅಧಿಕಾರಿಯ ಪುತ್ರನ ಬೈಕ್ ವ್ಹೀಲಿಂಗ್‌ಗೆ ರಸ್ತೆ ಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿ ಬಲಿಯಾಗಿದ್ದು, ಮತ್ತೊಬ್ಬ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಜರುಗಿದೆ.
ತಾಲೂಕಿನ ಇಮ್ಮಾವು ಗ್ರಾಮದ ನಿವಾಸಿ ಗುರುಸ್ವಾಮಿ (65) ಮೃತ ದುರ್ದೈವಿ. ಇದೇ ಗ್ರಾಮದ ಗೋವಿಂದರಾಜು ಗಾಯಗೊಂಡಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಹೀಲಿಂಗ್ ಮಾಡುತ್ತಿದ್ದ ಸಯ್ಯದ್ ಐಮಾನ್ (18) ನಂಜನಗೂಡಿನ ಸಂಚಾರ ಪಿಎಸ್‌ಐ ಯಾಸ್ಮಿನ್ ತಾಜ್ ಪುತ್ರ. ಸಯ್ಯದ್ ಐಮಾನ್ ಹಾಗೂ ಆತನ ಸ್ನೇಹಿತ ಪಂಕಜ್ ಬೈಕ್‌ನಲ್ಲಿ ಕಾರ್ಖಾನೆಯೊಂದರ ಬಳಿ ವ್ಹೀಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಜಾನುವಾರುಗಳನ್ನು ಮೇಯಿಸಲು ಕಾರ್ಖಾನೆಯ ಬಂಡು ರಸ್ತೆ ಬದಿಯಲ್ಲಿ ಗುರುಸ್ವಾಮಿ ಹಾಗೂ ಗೋವಿಂದರಾಜು ಕುಳಿತ್ತಿದ್ದರು. ಅತಿ ವೇಗವಾಗಿ ವ್ಹೀಲಿಂಗ್ ಮಾಡಿಕೊಂಡು ಬಂದು ಅವರ ಮೇಲೆ ಬೈಕ್ ಹರಿಸಿದ್ದಾರೆ.
ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್‌ಐ ಪುತ್ರನನ್ನೇ ಜೈಲಿಗೆ ದಬ್ಬಿದ ಮೈಸೂರು ಪೊಲೀಸರು!
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಗುರುಸ್ವಾಮಿ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಗೋವಿಂದರಾಜು ಹಾಗೂ ಸ್ಥಳೀಯರು ವ್ಹೀಲಿಂಗ್ ಮಾಡುತ್ತಿದ್ದ ಸಯ್ಯದ್ ಐಮಾನ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಜಾಮೀನಿನ ಮೇಲೆ ಹೊರ ಬಂದಿದ್ದ!
ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸಯ್ಯದ್ ಐಮಾನ್ ಕಳೆದ ತಿಂಗಳು ನಂಜನಗೂಡು ಹಾಗೂ ಮೈಸೂರಿನ ವರ್ತುಲ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಸ್ಕೂಟರ್ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಮೈಸೂರಿನ ಸಿದ್ಧಾರ್ಥನಗರ ಸಂಚಾರ ಠಾಣೆ ಪೊಲೀಸರು ಈತನ ಮೇಲೆ ದೂರು ದಾಖಲಿಸಿ ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ದೂರು ದಾಖಲಾಗಿ 20 ದಿನಗಳಲ್ಲೇ ಈತ ಮತ್ತೆ ವ್ಹೀಲಿಂಗ್ ಮಾಡಿ ಅಮಾಯಕ ವ್ಯಕ್ತಿಯ ಜೀವವನ್ನು ಬಲಿ ತೆಗೆದುಕೊಂಡಿದ್ದಾನೆ. ಮೃತರ ಕುಟುಂಬದವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.