ಮರಳು ವ್ಯವಹಾರದಲ್ಲಿ ಅಖಿಲ್‌ ಎಂಬುವವರಿಂದ ಪೊಲೀಸ್‌ ಪೇದೆ ಹಾಗೂ ಚಾಲಕ ಹಣ ಕೇಳಿದ್ದಾರೆಂಬ ದೂರಿನ ಮೇಲೆಯೇ ಲೋಕಾಯುಕ್ತರ ದಾಳಿ 

ಕಲಬುರಗಿ/ಜೇವರ್ಗಿ(ಸೆ.23):  ಮರಳು ವ್ಯವಹಾರದಲ್ಲಿ ಲಂಚವಾಗಿ 30 ಸಾವಿರ ಸ್ವೀಕರಿಸುತ್ತಿರುವಾಗ ಜೇವರ್ಗಿಯಲ್ಲಿ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ತಂಡ ದಾಳಿ ನಡೆಸಿ ಪೊಲೀಸ್‌ ಪೇದೆ ಶಿವರಾಯ, ಜೇವರ್ಗಿ ಸಿಪಿಐ ವಾಹನ ಚಾಲಕ ಅವ್ವಣ್ಣ ಇವರನ್ನು ತಕ್ಷಣ ಸ್ಥಳದಲ್ಲೇ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸಿಪಿಐ ಅವರ ಹೆಸರು ಬಂಧಿತರಿಬ್ಬರೂ ಪ್ರಸ್ತಾಪಿಸಿದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಜೇವರ್ಗಿ ಸಿಪಿಐ ಶಿವಪ್ರಸಾದ್‌ ಇವರನ್ನೂ ವಿಚಾರಣೆಗೆ ಕರೆದೊಯ್ದಿದ್ದಾರೆ.

ಇವರನ್ನೆಲ್ಲ ಜೇವರ್ಗಿ ಹೊರವಲಯದಲ್ಲಿರುವ ಅತಿಥಿ ಗೃಹಕ್ಕೆ ಕರೆದೊಯ್ದು ಲೋಕಾಯುಕ್ತ ತಂಡ ವಿಚಾರಣೆ ನಡೆಸುತ್ತಿದೆ. ಇನ್ನೂ ವಿಚಾರಣೆ ಮುಂದುವರಿದಿರೋದರಿಂದ ಸಂಪೂರ್ಣ ಮಾಹಿತಿ ಇಂದು ಹೊರಬೀಳುವ ನಿರೀಕ್ಷೆ ಇದೆ.
ಮರಳು ವ್ಯವಹಾರದಲ್ಲಿ ಅಖಿಲ್‌ ಎಂಬುವವರಿಂದ ಪೊಲೀಸ್‌ ಪೇದೆ ಹಾಗೂ ಚಾಲಕ ಹಣ ಕೇಳಿದ್ದರೆಂಬ ಮಾಹಿತಿ ಗೊತ್ತಾಗಿದ್ದು ಈ ದೂರಿನ ಮೇಲೆಯೇ ಲೋಕಾಯುಕ್ತರು ದಾಳಿ ಮಾಡಿ ಬಂಧಿಸಿದ್ದಾರೆಂದು ಗೊತ್ತಾಗಿದೆ.

ಬೆಂಗಳೂರು: ಜಯನಗರದ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ

ಸಿನಿಮಿಯ ರೀತಿಯಲ್ಲಿ ಬಂಧನ:

ಬಂಧಿತ ಜೇವರ್ಗಿ ಪೊಲೀಸ್‌ ಪೇದೆ ಶಿವರಾಯ ಪೊಲೀಸ್‌ ವಸತಿ ಗೃಹದಿಂದಲೇ ಹಣ ಸಮೇತ ಪರಾರಿಯಾಗಲು ಯತ್ನಿಸಿದ್ದು ಸಿನಿಮೀಯ ರೀತಿಯಲ್ಲಿ ಬೆನ್ನು ಹತ್ತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್‌ ಸೇರಿದಂತೆ ಪಿಐ ದೃವತಾರೆ, ಅಕ್ಕಮಹಾದೇವಿ, ನಾನಾಗೌಡ, ಸಿಬ್ಬಂದಿ ಪ್ರದೀಪ್‌ ಮತ್ತು ಸಿದ್ದಲಿಂಗ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.