ಬೆಂಗಳೂರಿಗೆ ಆಗಮಿಸುವ ಮೋದಿ ಅವರು ಬಹುನಿರೀಕ್ಷಿತ ಕೆ.ಆರ್‌.ಪುರ - ವೈಟ್‌ಫೀಲ್ಡ್‌ ಮೆಟ್ರೊ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದಕ್ಕೂ ಮುನ್ನ ವೈಟ್‌ಫೀಲ್ಡ್‌ನಲ್ಲಿ ಮಹಾದೇವಪುರ ಕ್ಷೇತ್ರದ ಸತ್ಯಸಾಯಿ ಆಶ್ರಮದಿಂದ ವೈಟ್‌ಫೀಲ್ಡ್‌  ಮೆಟ್ರೋ ಸ್ಟೇಷನ್‌ವರೆಗೆ ಸುಮಾರು ಒಂದು ಕಿ.ಮೀ.ನಷ್ಟು ದೂರ ರೋಡ್‌ ಶೋ ನಡೆಸಲಿದ್ದಾರೆ. 

ಬೆಂಗಳೂರು(ಮಾ.19): ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 25ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆಯಲ್ಲಿ ನಡೆಯುವ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದು ಬೆಳಗ್ಗೆ ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸುವ ಮೋದಿ ಅವರು ಬಹುನಿರೀಕ್ಷಿತ ಕೆ.ಆರ್‌.ಪುರ - ವೈಟ್‌ಫೀಲ್ಡ್‌ ಮೆಟ್ರೊ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದಕ್ಕೂ ಮುನ್ನ ವೈಟ್‌ಫೀಲ್ಡ್‌ನಲ್ಲಿ ಮಹಾದೇವಪುರ ಕ್ಷೇತ್ರದ ಸತ್ಯಸಾಯಿ ಆಶ್ರಮದಿಂದ ವೈಟ್‌ಫೀಲ್ಡ್‌ ಮೆಟ್ರೋ ಸ್ಟೇಷನ್‌ವರೆಗೆ ಸುಮಾರು ಒಂದು ಕಿ.ಮೀ.ನಷ್ಟು ದೂರ ರೋಡ್‌ ಶೋ ನಡೆಸಲಿದ್ದಾರೆ. ಕೆ.ಆರ್‌.ಪುರ ಮೆಟ್ರೋ ಸ್ಟೇಷನ್‌ವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆಯೂ ಇದೆ.

PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!

ಬಳಿಕ ಅವರು ಚಿಕ್ಕಬಳ್ಳಾಪುರದ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ತೆರಳಲಿದ್ದಾರೆ. ನಂತರ ಮಧ್ಯಾಹ್ನ ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಯ ಸಮಾರೋಪ ಮಹಾಸಂಗಮ ಸಮಾವೇಶದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವೈಟ್‌ಫೀಲ್ಡ್‌ ಮೆಟ್ರೋ ವಿಶೇಷತೆ:

ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ ನಡುವಿನ ಮಾರ್ಗದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲು ಬಿಎಂಆರ್‌ಸಿಎಲ್‌ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿತ್ತು. 13.75 ಕಿ.ಮೀ. ಉದ್ದದ ವೈಟ್‌ಫೀಲ್ಡ್‌ -ಕೆ.ಆರ್‌.ಪುರ ಮೆಟ್ರೊ ಮಾರ್ಗದ ಸುರಕ್ಷತಾ ಪರೀಕ್ಷೆ ಫೆಬ್ರವರಿಯಲ್ಲಿ ನಡೆದಿತ್ತು. ಈ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರು ಕಳೆದ. 28ರಂದು ಬಿಎಂಆರ್‌ಸಿಎಲ್‌ಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.
ಈ ಮಾರ್ಗದಲ್ಲಿ ಪ್ರತಿ 12 ನಿಮಿಷಗಳಿಗೊಂದು ರೈಲು ಸಂಚರಿಸುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಸ್ವಂತ ವಾಹನದಲ್ಲಿ ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ಗೆ ಹೋಗಬೇಕಾದರೆ ಸುಮಾರು ಒಂದು ಗಂಟೆ ಸಮಯ ಬೇಕಾಗುತ್ತದೆ. ಆದರೆ ಮೆಟ್ರೊದಿಂದಾಗಿ ಪ್ರಯಾಣದ ಸಮಯ 24 ನಿಮಿಷಗಳಿಗೆ ತಗ್ಗಲಿದೆ.