ಹುಣಸೂರು ತಾಲೂಕಿನಲ್ಲಿ ಪಿಎಂ ಜನ್‌ ಮನ್ ಜಾರಿ

ತಾಲೂಕಿನಲ್ಲಿ ಆದಿವಾಸಿ ಜೇನುಕುರುಬ ಸಮುದಾಯದ ಹಾಡಿಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೇ ಯೋಜನೆಯಾದ ಪಿಎಂ ಜನ್‌ ಮನ್ (ಪ್ರಧಾನಮಂತ್ರಿ ಜನ್‌ ಜಾತಿ ಆದಿವಾಸಿ ಮಹಾ ಅಭಿಯಾನ್‌) ಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಪ. ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ್ ಹೇಳಿದರು.

PM Jan Man issued in Hunsur Taluk snr

  ಹುಣಸೂರು :  ತಾಲೂಕಿನಲ್ಲಿ ಆದಿವಾಸಿ ಜೇನುಕುರುಬ ಸಮುದಾಯದ ಹಾಡಿಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೇ ಯೋಜನೆಯಾದ ಪಿಎಂ ಜನ್‌ ಮನ್ (ಪ್ರಧಾನಮಂತ್ರಿ ಜನ್‌ ಜಾತಿ ಆದಿವಾಸಿ ಮಹಾ ಅಭಿಯಾನ್‌) ಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಪ. ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಪಂ ಆಡಳಿತಾಧಿಕಾರಿ ಸಿದ್ಧಗಂಗಮ್ಮ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆಯ ಮೊದಲ ಹಂತವಾಗಿ ಜ. 3ರಿಂದ ಹಾಡಿಗಳಿಗೆ ತೆರಳಿ ಆಧಾರ್ ಕಾರ್ಡ್ ತಿದ್ದುಪಡಿಯಿಂದ ಆರಂಭಗೊಂಡು ಹೊಸ ಕಾರ್ಡ್ ನೋಂದಾಯಿಸುವ ಕಾರ್ಯ ಆರಂಭಿಸಿದ್ದು, ಈವರೆಗೆ 996 ಕಾರ್ಡ್‌ಗಳನ್ನು ನೀಡಲಾಗಿದೆ. 5 ವರ್ಷ ಒಳಪಟ್ಟ ಮಕ್ಕಳಿಗೆ ಜನನ ಪ್ರಮಾಣಪತ್ರ ಅವಶ್ಯಕತೆಯಿದ್ದು, ಆದಿವಾಸಿಗಳಿಗಾಗ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ನೀಡುವ ಕೈಬರಹದ ಜನನ ಪ್ರಮಾಣಪತ್ರವನ್ನೇ ಆಧಾರವಾಗಿಟ್ಟುಕೊಂಡು ಮಕ್ಕಳಿಗೂ ಆಧಾರ್‌ ಕಾರ್ಡ್ ನೀಡಲು ಸರ್ಕಾರ ಆದೇಶಿಸಿದ್ದು, ಅದಕ್ಕೂ ಚಾಲನೆ ನೀಡಲಾಗಿದೆ ಎಂದರು.

ಸರ್ಕಾರಿ ಶಾಲೆಗಳ ಶಾಲಾ ಅಭಿವೃದ್ಧಿ ಮಂಡಳಿ (ಎಸ್‌ ಡಿಎಂಸಿ) ಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕೆಂದು ತಾಪಂ ಇಒ ಬಿ.ಕೆ. ಮನು ಸೂಚಿಸಿದರು.

ತಾವು ಸಾಕಷ್ಟು ಶಾಲೆಗಳಿಗೆ ಭೇಟಿ ನೀಡಿದ್ದ ವೇಳೆ ಆ ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಸಮಿತಿ ಸದಸ್ಯರಾಗಿ ನೇಮಿಸಿಕೊಂಡಿಲ್ಲವೆಂಬ ಮಾಹಿತಿ ತಿಳಿಯಿತು. ಸ್ಥಳೀಯವಾಗಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಬಹುದೊಡ್ಡದಾಗಿರುತ್ತದೆ. ಎಸ್‌ ಡಿಎಂಸಿ ನೀತಿ ನಿಯಮಾವಳಿಗಳ ಪ್ರಕಾರ ಜನಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಿಕೊಳ್ಳಲು ಅವಕಾಶವಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆ ಗಮನಹರಿಸಿ ಕ್ರಮವಹಿಸಬೇಕೆಂದು ಕ್ಷೇತ್ರ ಸವನ್ವಯಾಧಿಕಾರಿಗೆ ಸೂಚಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಕೆ. ಸಂತೋಷ್‌ ಕುಮಾರ್ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಸ್‌ ಡಿಎಂಸಿ ಕಾರ್ಯ ನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ತಾಲೂಕಿನ 393 ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಒಟ್ಟು 40,711 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2023-24ನೇ ಸಾಲಿಗಾಗಿ 8 ಶಾಲೆಗಳಲ್ಲಿ ಶೌಚಗೃಹ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಸಾಲಿನಿಂದ ರಾಜ್ಯ ಸರ್ಕಾರ ನಿರ್ದೇಶಿಸಿರುವಂತೆ ಮೌಲ್ಯಾಂಕ ಪರೀಕ್ಷೆಗಳನ್ನು ಆಯೋಜಿಸಲು ಕ್ರಮವಹಿಸಲಾಗಿದೆ. ಮೌಲ್ಯಾಂಕ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಪರಿಚಯಿಸುವ ಉದ್ದೇಶ ಹೊಂದಿದೆ ಎಂದರು.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಪ್ರಭಾರ ಶಿರಸ್ತೇದಾರ್ ಶರವಣ ಮಾತನಾಡಿ, ತಾಲೂಕಿನಲ್ಲಿ ವಿವಿಧ ಕಾರಣಗಳಿಂದ 300 ರೇಷನ್ ಕಾರ್ಡ್‌ಗಳು ರದ್ದುಗೊಂಡಿವೆ. 8 ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಹಣ ಬಿಡುಗಡೆಯಾಗಿಲ್ಲ. ಆದಿವಾಸಿಗಳಿಂದ 600 ಪಡಿತರ ಚೀಟಿಗಳಿಗೆ ಬೇಡಿಕೆ ಬಂದಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು. ತಾಲೂಕಿನಲ್ಲಿ ಒಟ್ಟು 79,529 ಕಾರ್ಡ್‌ಗಳಿದ್ದು, ಈ ಪೈಕಿ 687 ಅಂತ್ಯೋದಯ, 70,665 ಬಿಪಿಎಲ್ ಮತ್ತು 2,550 ಎಪಿಲ್ ಕಾರ್ಡ್‌ದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios