ಮೈಸೂರು(ಫೆ.09): ಪಿರಿಯಾಪಟ್ಟಣ ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆಯ ಮುಸುಕಿನ ಗುದ್ದಾಟಕ್ಕೆ ಫೆ. 9ರಂದು ಪಟ್ಟಣದಲ್ಲಿ ನಡೆಯಲಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಾಕ್ಷಿಯಾಗಿದ್ದು, ಈಗಾಗಲೇ ಅಭ್ಯರ್ಥಿಗಳು ಬಿರುಸಿನ ಮತ ಪ್ರಚಾರ ಕೈಗೊಂಡು ಮತದಾರರ ಓಲೈಕೆ ಕಸರತ್ತು ಮಾಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ತಾಲೂಕಿನ ಸಾರ್ವಜನಿಕರಲ್ಲಿದೆ.

ಕಾಂಗ್ರೆಸ್‌ನ ಮಾಜಿ ಶಾಸಕ ಕಿತ್ತೂರಿನ ದಿವಂಗತ ಕಾಳಮರಿಗೌಡ ಅವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರ ಆಡಳಿತದಲ್ಲಿದ್ದ ಪಿಎಲ್‌ಡಿ ಬ್ಯಾಂಕ್ ನಂತರದ ದಿನಗಳಲ್ಲಿ ಅಂದು ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕೆ. ವೆಂಕಟೇಶ್ ಅವರ ಬೆಂಬಲಿಗರು ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ನಂತರ ಬದಲಾದ ರಾಜಕೀಯದಲ್ಲಿ ಶಾಸಕರಾಗಿದ್ದ ಕೆ.ವೆಂಕಟೇಶ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಪಿಎಲ್‌ಡಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಮತ್ತೆ ಕಾಂಗ್ರೆಸ್ಸಿಗರ ಪಾಲಾಯಿತು.

ಬಿಜೆಪಿ ವಶದಲ್ಲಿದ್ದ ಬ್ಯಾಂಕ್‌ ಕೈ ವಶಕ್ಕೆ: ಕಮಲ ಪಡೆಗೆ ತೀವ್ರ ಮುಖಭಂಗ

ಅಂದಿನಿಂದ ಇಂದಿ ನವರೆಗೂ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಕೆ. ವೆಂಕಟೇಶ್ ಅವರ ಬೆಂಬಲಿಗರು ಅಧ್ಯಕ್ಷರಾಗುವ ಮೂಲಕ ಅವರ ಹಿಡಿತದಲ್ಲಿದೆ. ಪ್ರಸ್ತುತ ಜೆಡಿಎಸ್‌ನ ಕೆ.ಮಹದೇವ್ ಶಾಸಕರಾಗಿರುವುದರಿಂದ ಈ ಬಾರಿಯ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಕಾವು ರಂಗೇರಿದ್ದು, ಹಿಂದೆ ರಾಜಕೀಯದಲ್ಲಿ ಒಂದೇ ಪಕ್ಷದಲ್ಲಿದ್ದವರು ಪರಸ್ಪರ ಎದುರಾಳಿಗಳಾಗಿ ತಮ್ಮ ಪಕ್ಷದ ಬೆಂಬಲಿಗ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡು ಮತದಾರರ ಓಲೈಕೆಗೆ ಮುಂದಾಗಿರುವುದರಿಂದ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.

ಟೋಕನ್ ಕೊಟ್ರೆ 25 ಕೆಜಿ ಅಕ್ಕಿ, ಕಾಲ್ ಮಾಡಿದ್ರೆ ಕೋಳಿ ಮಾಂಸ: ಎಲ್ಲ ಫ್ರೀ ಫ್ರೀ

ಸಾಲಗಾರರಲ್ಲದ ಒಂದು ಕ್ಷೇತ್ರ ಹಾಗೂ ಸಾಲಗಾರರ 13 ಕ್ಷೇತ್ರ ಸೇರಿದಂತೆ ಒಟ್ಟು 14 ಕ್ಷೇತ್ರಗಳ ಚುನಾವಣೆಯಲ್ಲಿ 35 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ 8 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಸಾಲಗಾರರ ಕ್ಷೇತ್ರದ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, 13 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 26 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರೈತನಿಂದ ಲಂಚ ಪಡೆಯುತ್ತಿದ್ದಾಗಲೇ ಅಧಿಕಾರಿ ಎಸಿಬಿ ಬಲೆಗೆ

ಸಾಲಗಾರರಲ್ಲದ ಕ್ಷೇತ್ರದಲ್ಲಿ ಈಚೂರು ಗ್ರಾಮದ ಇಪಿ ಲೋಕೇಶ್ ಹಾಗೂ ಹೆಮ್ಮಿಗೆ ಗ್ರಾಮದ ಎಚ್.ಕೆ. ಶ್ರೀನಿವಾಸ್ ಸ್ಪರ್ಧಿಸಿದ್ದಾರೆ. ಸಾಮಾನ್ಯ ಕ್ಷೇತ್ರದ ರಾವಂದೂರು ಕ್ಷೇತ್ರಕ್ಕೆ ಹಿಟ್ನಹಳ್ಳಿ ಗ್ರಾಮದ ಎಚ್.ಜಿ. ಪರಮೇಶ್, ಹಿಟ್ನಹಳ್ಳಿ ಗ್ರಾಮದ ಎಚ್.ಕೆ. ಅಮೃತೇಶ್, ಕಗ್ಗುಂಡಿ ಗ್ರಾಮದ ಸುರೇಂದ್ರ ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು. ಅಂತಿಮವಾಗಿ ಎಚ್. ಕೆ. ಅಮೃತೇಶ್ ಹಾಗೂ ಸುರೇಂದ್ರ ತಮ್ಮ ನಾಮಪತ್ರ ಹಿಂಪಡೆದ ಕಾರಣ ಕಾಂಗ್ರೆಸ್ ಬೆಂಬಲಿತ ಎಚ್.ಜಿ. ಪರಮೇಶ್ ಅವಿರೋಧ ಆಯ್ಕೆಯಾಗಿ ಸತತ ೮ನೇ ಬಾರಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿದ್ದು, 3ನೇ ಬಾರಿ ಅವಿರೋಧ ಆಯ್ಕೆಯಾಗಿದ್ದಾರೆ. ಒಟ್ಟಾರೆ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷ ಅಥವಾ ಪ್ರಾದೇಶಿಕ ಪಕ್ಷದ ಚಿಹ್ನೆಯಡಿ ಸ್ಪರ್ಧಿಸದಿದ್ದರೂ ತಮ್ಮ ಬೆಂಬಲಿಗ ಪಕ್ಷದ ಪರವಾಗಿ ಸ್ಪರ್ಧಿಸಿದ್ದು ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ಈ ಬಾರಿಯ ಚುನಾವಣಾ ಫಲಿತಾಂಶದ ಮೇಲೆ ರಾಜಕೀಯ ಪಂಡಿತರ ಕಣ್ಣು ನೆಟ್ಟಿದೆ.

-ಬೆಕ್ಕರೆ ಸತೀಶ್ ಆರಾಧ್ಯ