ಧಾರವಾಡ ಕೇಂದ್ರ ಕಾರಾಗೃಹವು ಕೈದಿಗಳ ಪುನರ್ವಸತಿಗಾಗಿ ನೂತನ ಪೆಟ್ರೋಲ್ ಬಂಕ್ ಸ್ಥಾಪಿಸುತ್ತಿದೆ. 8 ವರ್ಷಗಳ ಶಿಕ್ಷೆ ಪೂರ್ಣಗೊಳಿಸಿದ ಉತ್ತಮ ನಡತೆಯ ಕೈದಿಗಳಿಗೆ ಇಲ್ಲಿ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ. ಇದರ ಜೊತೆಗೆ ಜೈಲಿನಲ್ಲಿ ತಯಾರಾದ ಉತ್ಪನ್ನಗಳ ಮಾರಾಟ ಮಳಿಗೆಯನ್ನೂ ತೆರೆಯಲಾಗುತ್ತಿದೆ.

ಅಜೀಜಅಹ್ಮದ ಬಳಗಾನೂರ

ಧಾರವಾಡ (ಅ.2): ಕೈದಿಗಳು ಕೇವಲ ಶಿಕ್ಷೆಗೆ ಮಾತ್ರ ಸೀಮಿತರಾಗದೆ ಮುಂದಿನ ಜೀವನವನ್ನು ನ್ಯಾಯುತವಾಗಿ ನಡೆಸುವ ಸಲುವಾಗಿ ಧಾರವಾಡ ಕೇಂದ್ರ ಕಾರಾಗೃಹ ವತಿಯಿಂದ ಪೆಟ್ರೋಲ್‌ ಬಂಕ್‌ ಸ್ಥಾಪಿಸಲಾಗುತ್ತಿದೆ. ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಇದಕ್ಕ ಸಾಥ್‌ ನೀಡಿದೆ.

ರಾಜ್ಯದಲ್ಲಿ ಧಾರವಾಡ ಸೇರಿದಂತೆ ಬೆಂಗಳೂರು, ಬೆಳಗಾವಿ ಹಾಗೂ ಬಳ್ಳಾರಿ ಈ ವಿನೂತನ ಕ್ರಮಕ್ಕೆ ಕಾರಾಗೃಹ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಧಾರವಾಡದಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಎಚ್‌ಪಿ ಪೆಟ್ರೋಲ್ ಬಂಕ್‌ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ನವೆಂಬರ್‌ ಅಂತ್ಯದೊಳಗೆ ಕಾರ್ಯಾರಂಭಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಕಾರಾಗೃಹ ಇಲಾಖೆಗೆ ಆದಾಯದ ಮೂಲ ಸೃಷ್ಟಿಸುವ ಜತೆಗೆ ಸಜಾ ಬಂದಿಗಳ ಪುನರ್ವಸತಿಗೂ ಹೊಸ ವೇದಿಕೆ ಸಿಗಲಿದೆ.

ವರ್ಷ ಶಿಕ್ಷೆ ಪೂರ್ಣಗೊಳಿಸಿದವರಿಗೆ ಅವಕಾಶ

ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಲು ಕನಿಷ್ಠ 8 ವರ್ಷಗಳ ಶಿಕ್ಷೆ ಪೂರ್ಣಗೊಳಿಸಿರುವ ಹಾಗೂ ಉತ್ತಮ ನಡತೆ ಹೊಂದಿರುವ ಸಜಾ ಬಂದಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಾರಾಗೃಹದ ಅಡುಗೆ, ಕಚೇರಿ ಹಾಗೂ ಇತರ ವಿಭಾಗಗಳಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಬಂದಿಗಳ ಪೈಕಿ ಅರ್ಹರನ್ನು ಆಯ್ಕೆ ಮಾಡುವ ಉದ್ದೇಶವಿದೆ. ಬಂಕ್‌ನಲ್ಲಿ 3 ಶಿಫ್ಟ್‌ಗಳಿರಲಿದ್ದು, ಸಿಬ್ಬಂದಿ ಜೊತೆಗೆ ಬಂದಿಗಳನ್ನು ನಿಯೋಜಿಸಲಾಗುತ್ತದೆ. ಗ್ರಾಹಕರೊಂದಿಗೆ ವ್ಯವಹಾರ, ಸಮಯಪಾಲನೆ, ಹಣಕಾಸಿನ ಜವಾಬ್ದಾರಿ, ಕೆಲಸದ ಶಿಸ್ತು ಸೇರದಂತೆ ಹೊರಜಗತ್ತಿನಲ್ಲಿ ಉದ್ಯೋಗಕ್ಕೆ ಅಗತ್ಯವಾದ ಅನುಭವ ಪಡೆಯಲು ಇದರಿಂದ ಅವಕಾಶ ದೊರೆಯಲಿದೆ.

ಬಂಕ್‌ ಪಕ್ಕದಲ್ಲೇ ಜೈಲು ಮಳಿಗೆ:

ಪೆಟ್ರೋಲ್ ಬಂಕ್ ಆವರಣದಲ್ಲೇ ಕಾರಾಗೃಹದಲ್ಲಿ ಬಂದಿಗಳಿಂದ ತಯಾರಾಗುವ ಉತ್ಪನ್ನಗಳ ಮಾರಾಟ ಮಳಿಗೆ ಸ್ಥಾಪಿಸುವ ಯೋಜನೆಯೂ ಇದೆ. ಕೈಮಗ್ಗದ ಟವೆಲ್‌, ಕರವಸ್ತ್ರ, ಬೆಡ್‌ಶೀಟ್‌, ಚೇರ್‌ಮ್ಯಾಟ್‌, ಕಾರ್ಪೆಟ್‌, ಜ್ಯೂಟ್‌ ಬ್ಯಾಗ್‌, ಲಾವಂಚ ಉತ್ಪನ್ನಗಳ ಜತೆಗೆ ಬೇಕರಿ ಉತ್ಪನ್ನಗಳಿಗೂ ಇಲ್ಲಿ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ.

ಶಿಕ್ಷೆಯ ಜತೆಗೆ ಬದುಕು ಕಟ್ಟಿಕೊಳ್ಳುವ ಅವಕಾಶವೂ ಸಿಗಬೇಕು. ಉತ್ತಮ ನಡತೆಯ ಬಂದಿಗಳಿಗೆ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ನೀಡುವ ಮೂಲಕ ಅವರಲ್ಲಿ ಶಿಸ್ತು, ಜವಾಬ್ದಾರಿ, ಉದ್ಯೋಗ ಕೌಶಲ್ಯ ಬೆಳೆಸುವುದು ಉದ್ದೇಶ.

ರಘುಪತಿ, ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕರು