ಮದುವೆ ಮಾಡದಿದ್ದಕ್ಕೆ ವೃದ್ಧ ತಂದೆ-ತಾಯಿಗೆ ಹೀಗ್ ಮಾಡೋದಾ?
ಮದುವೆ ಮಾಡಿಸಿ ಎಂದು ಪ್ರತಿದಿನ ತಂದೆ,ತಾಯಿಯ ಜೊತೆ ಗಲಾಟೆ ಮಾಡುತ್ತಿದ್ದ ಮಗ|ಕೆಲಸವಿಲ್ಲದೆ ಊರಲ್ಲಿ ಖಾಲಿ ಸುತ್ತಾಡುತ್ತಿದ್ದ ಮಗನಿಗೆ ಮದುವೆ ನಿರಾಕರಿಸಿದ್ದ ಪೋಷಕರು| ವೃದ್ಧ ತಂದೆ-ತಾಯಿಯ ಮೇಲೆ ಬಡಿಗೆಯಿಂದ ಹಲ್ಲೆ| ಬಳಿಕ ತಾನೂ ಬ್ಲೇಡ್ ನಿಂದ ತಾನೇ ಹಲ್ಲೆ ಮಾಡಿಕೊಂಡ ಮಗ|
ವಿಜಯಪುರ(ಡಿ.06): ಮದುವೆ ಮಾಡಲಿಲ್ಲ ಅನ್ನೋ ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತಂದೆ, ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ಘಟನೆ ಗುರುವಾರ ರಾತ್ರಿ ನಡೆದಿದೆ.
ಶರಣಮ್ಮ ಹಿರೇಮಠ (70), ಹೇಮಯ್ಯ ಹಿರೇಮಠ (75) ಹಲ್ಲೆಗೊಳಗಾದ ಪೋಷಕರಾಗಿದ್ದಾರೆ. ಹೇಮಯ್ಯ ಅವರ ಎರಡನೇ ಪುತ್ರ ಶಂಕ್ರಯ್ಯ ಹಿರೇಮಠ (40) ಹಲ್ಲೆ ಮಾಡಿದ ಪುತ್ರನಾಗಿದ್ದಾನೆ.
ಶಂಕ್ರಯ್ಯ ಮದುವೆ ಮಾಡುವಂತೆ ವೃದ್ದ ತಂದೆ, ತಾಯಿ ಜೊತೆ ಪ್ರತಿದಿನ ಗಲಾಟೆ ಮಾಡುತ್ತಿದ್ದನು.ಯಾವುದೇ ಕೆಲಸವಿಲ್ಲದೆ ಊರಲ್ಲಿ ಖಾಲಿ ಸುತ್ತಾಡುತ್ತಿದ್ದ ಶಂಕ್ರಯ್ಯನಿಗೆ ಮೊದಲು ದುಡಿದು ಜೀವನ ನಡೆಸು ಆ ಮೇಲೆ ಮದುವೆ ಮಾಡುತ್ತೇವೆ ಎಂದು ಪೋಷಕರು ತಿಳಿಹೇಳಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿನ್ನೆ ಕೂಡ ಶಂಕ್ರಯ್ಯ ಮದುವೆ ಮಾಡಿ ಎಂದು ಕೇಳಿದ್ದಾನೆ, ಅದರೆ, ದುಡಿಮೆ ಇಲ್ಲದ ಕಾರಣ ನಿನಗೆ ಮದುವೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕುಪಿತನಾಗಿ ಶಂಕ್ರಯ್ಯ ಕಳೆದ ರಾತ್ರಿ ತಂದೆ, ತಾಯಿ ಜೊತೆ ಗಲಾಟೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಕುಪಿತನಾದ ಶಂಕ್ರಯ್ಯ ತಂದೆ, ತಾಯಿಯ ಮೇಲೆ ಮಾರಣಾಂತಿಕ ಬಡಿಗೆಯಿಂದ ಹಲ್ಲೆ ಮಾಡಿದ್ದಾನೆ.
ತಂದೆ, ತಾಯಿಯ ಮೇಲೆ ಹಲ್ಲೆ ಮಾಡಿದ ಬಳಿಕ ಶಂಕ್ರಯ್ಯ ಬ್ಲೇಡ್ ನಿಂದ ತಾನೇ ಹಲ್ಲೆ ಮಾಡಿಕೊಂಡಿದ್ದಾನೆ. ತಲೆ ಹಾಗೂ ಕೈಗೆ ಬ್ಲೇಡ್ ನಿಂದ ಗಾಯ ಮಾಡಿಕೊಂಡಿದ್ದಾನೆ. ಸದ್ಯ ಮೂವರನ್ನು ಗ್ರಾಮಸ್ಥರು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.