ಮೈಸೂರು(ಆ.24): ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಿದವರು ಯಾವುದೇ ಕಾರಣಕ್ಕೂ ಉದ್ಧಾರ ಆಗಿಲ್ಲ, ಮುಂದೆಯೂ ಉದ್ಧಾರ ಆಗಲ್ಲ ಎಂಬುದು ನಮ್ಮ ಕಣ್ಮುಂದೆ ಬೇಕಾದಷ್ಟುಉದಾಹರಣೆ ಇದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ಅವರು ಅನರ್ಹ ಶಾಸಕರ ವಿರುದ್ಧ ಗುಡುಗಿದರು.

ಭೇರ್ಯ ಸಮೀಪದ ಕಾಟ್ನಾಳು ಗ್ರಾಮದಲ್ಲಿ 2 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ರಾಜ್ಯ ರಾಜಕಾರಣದಲ್ಲಿ ಏನೇನು ಆಗುತ್ತದೆ ಎಂಬುದನ್ನು ಮೇಲಿರುವ ಆ ದೇವರು ನೋಡುತ್ತಿದ್ದಾನೆ. ದೇವೇಗೌಡರ ಕುಟುಂಬಕ್ಕೆ, ಜೆಡಿಎಸ್‌ ಪಕ್ಷಕ್ಕೆ ಮೋಸ ಮಾಡಿ ಯಾವ ರೀತಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ದೇವೇಗೌಡರು ಏಕೆ ಕುಟುಂಬದವರಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರೆ ಇಂತಹ ಮಹಾನ್‌ ವ್ಯಕ್ತಿಗಳಿಂದ ಮೋಸ ಹೋಗಿ, ಇವರ ಕಾಟ ತಡೆಯಲಾರದೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.

ಮೈಸೂರು: ನೆರೆ ಸಂತ್ರಸ್ತರಿಗೆ ನೆರವಾದ ಶಾಸಕ

ಸುಮ್ಮನೆ ಆರೋಪ ಮಾಡಿ ಸುತ್ತುವವರು ಹೆಚ್ಚು ದಿನ ಉಳಿಯಲ್ಲ:

ರಾಜಕೀಯವಾಗಿ ಮೂಲೆ ಗುಂಪಾಗಿ ಆಸ್ಪತ್ರೆ ಸೇರಿದ್ದವರನ್ನು ಕರೆ ತಂದು ಅಧಿಕಾರ ನೀಡಿ ಕೊನೆಗೆ ನಮ್ಮ ಪಕ್ಷದಲ್ಲಿಯೇ ಇದ್ದುಕೊಂಡು ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕಿದವರು ಮತ್ತೆ ನಮ್ಮ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ನನ್ನ ಮೇಲೆ ಬೈಯ್ಕೊಂಡು, ಇಲ್ಲಸಲ್ಲದ ಆರೋಪ ಮಾಡಿ ಕೊಂಡು ತಿರುಗಾಡುತ್ತಿದ್ದಾರೆ. ಇದು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೂ ಕಾಲು ರು. ಹರಕೆ ಹೊತ್ತ ಯದುವೀರ್ ಒಡೆಯರ್

ಎಪಿಎಂಸಿ ಅಧ್ಯಕ್ಷ ಸೋಮು, ಗ್ರಾಪಂ ಅಧ್ಯಕ್ಷ ಎಂ. ಸುದರ್ಶನ್‌, ಪ್ರಸನ್ನ, ಸುಮತಲಾ ಗುರುಪ್ರಸಾದ್‌, ಮಾಜಿ ಅಧ್ಯಕ್ಷ ಮಂಜೇಗೌಡ, ಲೋಕೋಪಯೋಗಿ ಇಲಾಖೆ ಎಇಇ ಅರುಣ್‌ಕುಮಾರ್‌, ಜೆಇ ಸಿದ್ದೇಶ್ವರ ಪ್ರಸಾದ್‌, ನರಸಿಂಹೇಗೌಡ, ಶಿವಪ್ಪ, ಮುದ್ದಪ್ಪ, ಮೋಹನ್‌, ಚಂದನ್‌, ವ್ಯವಸ್ಥಾಪಕ ಸಿ.ಜೆ. ಅರುಣ್‌, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಧನಂಜಯ, ಜೆಡಿಎಸ್‌ ಮುಖಂಡ ಅಣ್ಣೇಗೌಡ, ಮು.ರಾ. ಹರ್ಷ ಕುಮಾರ್‌ಗೌಡ, ಶ್ರೀಧರ್‌, ಮಂಜಣ್ಣ, ತಾಪಂ ಮಾಜಿ ಸದಸ್ಯ ನಾಗಣ್ಣ, ತಾಲೂಕು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಮಧುಚಂದ್ರ, ಉಪಾಧ್ಯಕ್ಷ ಕಾಂತರಾಜ್‌, ಯುವ ಮುಖಂಡ ವಾಸು, ರಘು, ರಾಘು, ಕಿಶೋರ್‌, ಲೋಕಿ ಇದ್ದರು.

ಅಭಿವೃದ್ಧಿ ಕಾರ್ಯಕ್ರಮ:

ಹೊನ್ನೇನಹಳ್ಳಿಯಲ್ಲಿ .3 ಕೋಟಿ ರು. ವೆಚ್ಚದ ಹೊನ್ನೇನಹಳ್ಳಿ- ಲಕ್ಕಿಕುಪ್ಪೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮೂಡಲಬೀಡುವಿನಲ್ಲಿ ಗ್ರಾಮದ ಪರಿಮಿತಿಯಿಂದ ಸಾಲಿಗ್ರಾಮ- ಭೇರ್ಯ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಒಂದು ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಮಿರ್ಲೆ ಗ್ರಾಮದ ಪರಿಮಿತಿಯಲ್ಲಿ ರಸ್ತೆಯ ಆಯ್ದ ಭಾಗಗಳಲ್ಲಿ 1.80 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಒಂದೇ ದಿನದಲ್ಲಿ 55 ಕೋಟಿ ಕೋಟಿ ರು. ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.