ಮೈಸೂರು(ಆ.17): ತಾಂಡವಪುರದಲ್ಲಿ ಕಪಿಲಾ ನದಿ ಪ್ರವಾಹದಿಂದ ಮುಳುಗಡೆಗೊಂಡಿದ್ದ ನಂಜನಗೂಡು ತಾಲೂಕಿನ ಸೇರುವ ಹಳೇ ಬೊಕ್ಕಹಳ್ಳಿ ಗ್ರಾಮದ ಸಂತ್ರಸ್ತರಿಗೆ ಶಾಸಕ ಡಾ.ಎಸ್‌. ಯತೀಂದ್ರ ಸಿದ್ದರಾಮಯ್ಯ ಅವರು ಸರ್ಕಾರದಿಂದ ನೀಡುವ 10 ಸಾವಿರ ರು. ಚೆಕ್‌ ಹಾಗೂ ಧವಸ-ಧಾನ್ಯಗಳ ಕಿಟ್‌ನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ಹಳೇ ಬೊಕ್ಕಹಳ್ಳಿ ಗ್ರಾಮದ ಕಪಿಲಾ ನದಿ ಪ್ರವಾಹಕ್ಕೆ ಮುಳುಗಡೆಯಾಗುವ ಮನೆಗಳಲ್ಲದೇ ಇಡೀ ಗ್ರಾಮವನ್ನೇ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಸರ್ಕಾರದ ಜೊತೆ ಮಾತನಾಡಿ, ಶಾಶ್ವತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಈಗ ನಿರಾಶ್ರಿತರಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ, ಸರ್ಕಾರ ಕೂಡಲೇ ಹೆಚ್ಚಿನ ಪರಿಹಾರವನ್ನು ನೀಡಿ ಸಂತ್ರಸ್ತರ ನೆರವಿಗೆ ಸಹಕಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಮೈಸೂರು: ನೆರೆಯಿಂದ ಆಸ್ತಿ ಹೋಯ್ತು, ಆದ್ರೆ ಜಾತಿ ಹೋಗಿಲ್ಲ

ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ. ಬಸವರಾಜು, ಗೃಹ ಮಂಡಳಿ ಮಾಜಿ ಸದಸ್ಯ ಟಿ.ಕೆ. ಮಾಲೇಗೌಡ, ಮುಖಂಡ ಯೋಗೇಶ್‌, ತಗಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಾಪಂ ಇಒ ಶ್ರೀಕಂಠರಾಜೇ ಅರಸ್‌, ಆರ್‌ಐ ಮಹೇಶ್‌, ವಿಎ ಯೋಗೇಂದ್ರಕುಮಾರ್‌, ಗ್ರಾಪಂ ಅಧ್ಯಕ್ಷ ಎಸ್‌. ಮಹೇಶ್‌ ಪ್ರಸಾದ್‌, ಸದಸ್ಯರಾದ ಸೋಮಸುಂದರ್‌, ಮಾದಪ್ಪ ಇದ್ದರು.