Elephant Kidnap : ತುಮಕೂರು ಮಠದ ಆನೆಯ ಕಿಡ್ನಾಪ್ ಯತ್ನ
- ಮಠದ ಆನೆಯ ಮಾರಾಟಕ್ಕೆ ಹುನ್ನಾರ
- ಗುಜರಾತ್‌ನ ಸರ್ಕಸ್ ಕಂಪನಿಗೆ ಮಾರಲು ಷಡ್ಯಂತ್ರ : ಕಲ್ಯಾಣ ಸ್ವಾಮೀಜಿ ಆರೋಪ
ತುಮಕೂರು (ಜ.03): ಕರಿಬಸವ ಸ್ವಾಮಿ ಮಠದ (Mutt) ಆನೆಯನ್ನು (elephant) ಅರಣ್ಯ ಇಲಾಖೆಯವರು (Forest Department), ಆನೆ ಬ್ರೋಕರ್ ಜೊತೆ ಶಾಮೀಲಾಗಿ ಗುಜರಾತ್‌ನ ಸರ್ಕಸ್ ಕಂಪನಿಗೆ ಮಾರಾಟ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಕರಿಬಸವ ಸ್ವಾಮಿ ಮಠ ಸೇರಿದಂತೆ ಉರವಕೊಂಡ ಮಠದ ಉತ್ತರಾಧಿಕಾರಿ ಕಲ್ಯಾಣಸ್ವಾಮೀಜಿ ತಿಳಿಸಿದ್ದಾರೆ. ಕರಿಬಸವ ಸ್ವಾಮಿ ಮಠದ ಆನೆಯನ್ನು ಕಿಡ್ನ್ಯಾಪ್ (Kidnap) ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಸ್ವಾಮೀಜಿ ಕಳೆದ ನಾಲ್ಕು ತಿಂಗಳಿನಿಂದ ಆನೆ ಮಾರಾಟ ಮಾಡುವ ಹುನ್ನಾರ ನಡೆಸಲಾಗುತ್ತಿತ್ತು ಎಂದಿದ್ದಾರೆ. ಇದಕ್ಕಾಗಿಯೇ ಕಳೆದ ನಾಲ್ಕು ತಿಂಗಳಿನಿಂದ ತಂತ್ರ ರೂಪಿಸಿರುವ ಆನೆ ಬ್ರೋಕರ್‌ಗಳು (Brokers) ಆನೆಗೆ ಭಿಕ್ಷೆ ಕೊಡುವ ಹಾಗೆ ಮಾಡಿ ಫೋಟೋ ತೆಗೆದು ಆನೆಯ ಮುಂದಿಟ್ಟು ಭಿಕ್ಷೆ ಎತ್ತುತ್ತಿದ್ದಾರೆ ಎಂದು ಪ್ರಾಣಿದಯಾ ಸಂಘದವರ ಮೂಲಕ ಅರಣ್ಯ ಇಲಾಖೆಗೆ ಸುಳ್ಳು ಸುಳ್ಳು ದೂರು ಕೊಡಿಸಿದ್ದಾರೆ ಎಂದರು.
ಮಠದಲ್ಲಿ ಪಳಗಿರುವ ಈ ಆನೆಯನ್ನು ಗುಜರಾತ್‌ನ (Gujarath) ಸರ್ಕಸ್ ಕಂಪನಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಇವರು ನಮ್ಮ ಮಾವುತರಿಂದ ಸಾಕಷ್ಟು ತೊಂದರೆ ಕೊಡುತ್ತಲೇ ಇದ್ದರು ಎಂದರು. ಸುಖಾ ಸುಮ್ಮನೆ ಅರಣ್ಯ ಇಲಾಖೆಯವರು ಮಠದ (Mutt) ಬಳಿ ಬಂದು ಮಾವುತರನ್ನು ಬಯ್ಯುವುದನ್ನು ಮಾಡುತ್ತಲೇ ಇದ್ದರು. ಪ್ರತಿದಿನ ಒಂದಲ್ಲಾ ಒಂದು ತಂತ್ರಗಳನ್ನು ರೂಪಿಸುತ್ತಿದ್ದ ಆನೆ ಬ್ರೋಕರ್‌ಗಳ ಕಾಟದಿಂದ ಬೇಸತ್ತಿದ್ದ ನಮ್ಮ ಹಿರಿಯ ಗುರುಗಳು ನಾಲ್ಕು ತಿಂಗಳ ಹಿಂದೆ ಆನೆಯನ್ನು ಬಳ್ಳಾರಿ ಬಳಿಯ ಕಲ್ಯಾಣ ಸ್ವಾಮಿ ಮಠಕ್ಕೆ ಕಳುಹಿಸಿದ್ದರು ಎಂದರು.
ಚಿಕಿತ್ಸೆಗೆಂದು ಆನೆಯ ಕೊಂಡುಹೋದರು!
ಆದರೆ ಡಿಸೆಂಬರ್ 16 ರಂದು ಮತ್ತೆ ಅರಣ್ಯ ಇಲಾಖೆಯ ಸಿಬ್ಬಂದಿ ತುಮಕೂರಿನ (Tumakuru) ಕರಿಬಸವ ಸ್ವಾಮಿ ಮಠಕ್ಕೆ ಬಂದು ಆನೆಗೆ ಅನಾರೋಗ್ಯವಿದ್ದು, ಈ ಹಿಂದೆ ಮಾಡಿದ್ದ ರಕ್ತ ಪರೀಕ್ಷಾ ವರದಿ ಸರಿಯಿಲ್ಲ. ಹೀಗಾಗಿ ಮತ್ತೆ ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಬೇಕು ಆನೆಯನ್ನು (Elephant) ಕಲ್ಯಾಣ ಸ್ವಾಮಿ ಮಠದಿಂದ ಕರಿಸಿ ಎಂದು ತಿಳಿಸಿದ್ದಾರೆ. ಅದರಂತೆ ನಮ್ಮ ಗುರುಗಳು ದೂರವಾಣಿ ಕರೆ ಮಾಡಿಸಿ ಆನೆಯನ್ನು ಮತ್ತೆ ಕರೆ ತರುವಂತೆ ಹೇಳಿದ್ದಾರೆ. ಡಿ. 31 ರಂದು ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಯಾವುದೋ ಪತ್ರವನ್ನು ತಂದು ಬೆಂಗಳೂರಿನ ಬನ್ನೇರುಘಟ್ಟಕ್ಕೆ ಆನೆಗೆ ಚಿಕಿತ್ಸೆಗೆ ಕೊಂಡೊಯ್ಯುವುದಾಗಿ ಹೇಳಿ ಎರಡು ದಿವಸದಲ್ಲಿ ಮತ್ತೆ ಮಠಕ್ಕೆ ಕರೆ ತಂದು ಬಿಡುವುದಾಗಿ ಹೇಳಿ ಆನೆಯನ್ನು ಕರೆದುಕೊಂಡು ಹೋದರು ಎಂದರು. ಆನೆಯ ಜೊತೆ ಮಾವುತರನ್ನು ಕಳುಹಿಸಿದ್ದಾಗಿ ಸ್ವಾಮೀಜಿ ತಿಳಿಸಿದರು.
ದಿಕ್ಕು ಬದಲಿಸಿದ ಲಾರಿ: ಆದರೆ ದಾಬಸ್‌ಪೇಟೆ ಬಳಿ ಲಾರಿ ಹೋಗುತ್ತಿದ್ದಂತೆ ಮಾವುತರ ಮೇಲೆ ಹಲ್ಲೆ ನಡೆಸಿ ಆನೆ ಸಮೇತ ಹೊರಟಿದ್ದಾರೆ ಎಂದರು. ಈ ವೇಳೆ ಹಲ್ಲೆಗೊಳಗಾದ ನಮ್ಮ ಮಾವುತರನ್ನು ಬಳ್ಳಾರಿಯಲ್ಲಿದ್ದ ನನಗೆ ನಡೆದ ಘಟನೆಯನ್ನೆಲ್ಲಾ ದೂರವಾಣಿ ಮೂಲಕ ತಿಳಿಸಿದರು. ಕೂಡಲೇ ತಾವು ಸಚಿವ ಶ್ರೀರಾಮುಲುಗೆ (Shriramulu)ಆನೆಗೆ ಕೊಂಡೊಯ್ದ ವಿವರವನ್ನು ತಿಳಿಸಿದ್ದಾಗಿ ಹೇಳಿದರು. ಸಚಿವ ಶ್ರೀರಾಮುಲು ಅವರು ಪೊಲೀಸರಿಗೆ ಆನೆಯ ಹುಡುಕುವಂತೆ ಸೂಚಿಸಿದ್ದರಂತೆ. ಅದರಂತೆ ಆನೆ ಹೊತ್ತೊಯ್ದ ಲಾರಿ ಹೋದ ದಿಕ್ಕನ್ನು ಸಿಸಿ ಕ್ಯಾಮರಾದಲ್ಲಿ ಹುಡುಕಿ ಕುಣಿಗಲ್ ದಿಕ್ಕಿನಲ್ಲಿ ಹೋಗಿದ್ದಾಗಿ ಮಾಹಿತಿ ಸಿಕ್ಕಿದೆ. ಬಳಿಕ ಲಾರಿಯ ಬೆನ್ನತ್ತಿದ್ದಾಗ ಕುಣಿಗಲ್ ಬಳಿಯ ನಾರಸಂದ್ರ ಗ್ರಾಮದಲ್ಲಿ ಆನೆ ಇದ್ದದ್ದು ಕಂಡು ಬಂತು. ಕೂಡಲೇ ನಮ್ಮ ಮಠದ ಭಕ್ತರು ಮತ್ತೆ ಮಠಕ್ಕೆ ಆನೆಯನ್ನು ವಾಪಸ್ ಕರೆ ತಂದಿರುವುದಾಗಿ ಕನ್ನಡಪ್ರಭ ಕ್ಕೆ ಸ್ವಾಮೀಜಿ ತಿಳಿಸಿದ್ದಾರೆ.
ಆನೆಯ ಕಾನೂನಾತ್ಮಕವಾಗಿಯೇ ಖರೀದಿ:
ಗುರುಗಳ ಬಳಿ ಸಹಿ ಹಾಕಿಸಿಕೊಂಡು ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವುದಾಗಿ ಬೇರೆಲ್ಲೋ ಕರೆದುಕೊಂಡು ಹೋಗಲು ಹೊಂಚು ಹಾಕಿದ್ದರು ಎಂದರು. ಆನೆಯನ್ನು ಲಾರಿಯಲ್ಲಿ ಸಾಗಿಸಿದ ಸಂಬಂಧ ಪೊಲೀಸ್ ಠಾಣೆಗೆ (Police) ದೂರು ನೀಡಲು ನಿಶ್ಚಿಯಿಸಲಾಗಿತ್ತು. ಆದರೆ ಹಿರಿಯ ಗುರುಗಳ ವಯಸ್ಸಿನ ಕಾರಣ ದೂರು ಪೆಂಡಿಂಗ್ ಇಟ್ಟಿರುವುದಾಗಿ ತಿಳಿಸಿದ್ದಾರೆ. ನಾವು ಆನೆಯನ್ನು ಕಾನೂನಾತ್ಮಕವಾಗಿಯೇ 1994 ರಲ್ಲಿ ಖರೀದಿಸಿದ್ದಾಗಿ ತಿಳಿಸಿದ ಅವರು ನಮ್ಮ ಮಠದಲ್ಲಿ ಈ ಹಿಂದೆ ಗಂಡು ಆನೆ ಇತ್ತು. ಆದರೆ ಅನಾರೋಗ್ಯದ ಕಾರಣ ತೀರಿ ಹೋಯಿತು. ಮಠದ ಬ್ರಹ್ಮೋತ್ಸವ ಮತ್ತಿತರೆ ಕಾರ್ಯಕ್ರಮಕ್ಕೆ ಆನೆ ಬೇಕೇ ಬೇಕು ಎಂದರು. ಸದ್ಯ ಆನೆಯನ್ನು ಮಠಕ್ಕೆ ಕರೆ ತರಲಾಗಿದೆ. ಆನೆ ಕಟ್ಟುವ ಜಾಗದಲ್ಲೂ ಕೂಡ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.