ತರೀಕೆರೆ(ಜು.12): ಓದುವ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂ. ಹಾಕುತ್ತಾರಂತೆ ಎಂಬ ವದಂತಿ ಇದೀಗ ಪಟ್ಟಣದಲ್ಲಿ ಹರಡಿದೆ. ಪೋಷಕರು ಅರ್ಜಿ ಹಾಗೂ ದಾಖಲೆಗಳನ್ನು ತುಂಬಿ ದೆಹಲಿ ವಿಳಾಸಕ್ಕೆ ಕಳುಹಿಸುತ್ತಿದ್ದಾರೆ.

8 ವರ್ಷದಿಂ 32 ವರ್ಷದವರೆಗಿನ ಓದುವ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗೆ ಪ್ರಧಾನಿ ಮೋದಿ 2 ಲಕ್ಷ ಹಾಕುತ್ತಾರಂತೆ ಎಂಬ ಸುದ್ದಿಯಿಂದಾಗಿ, ನವದೆಹಲಿಯ ವಿಳಾಸಕ್ಕೆ ಕಳಿಸಲು ಅರ್ಜಿ ನಮೂನೆ, ವಿವಿಧ ದಾಖಲಾತಿಗಳನ್ನು ಒಳಗೊಂಡ ಲಕೋಟೆ ಹಿಡಿದು ನೂರಾರು ಜನರು ಅಂಚೆ ಕಚೇರಿಗೆ ಬರುತ್ತಿದ್ದಾರೆ.

ಒಂದು ಅಂಚೆ ಲಕೋಟೆಯನ್ನು ಕಳಿಹಿಸಲು ಒಬ್ಬರಿಗೆ .41 ರೂ. ಖರ್ಚು ಬರುತ್ತಿದೆ. ಇದರಿಂದ ಅಂಚೆ ಇಲಾಖೆಗೆ ಆದಾಯ ಬರಬಹುದು. ಆದರೆ ವದಂತಿಯಿಂದಾಗಿ ಮುಗ್ಧರಿಗೆ ಯೋಜನೆ ಪ್ರತಿಫಲ ದೊರೆಯದಿದ್ದರೆ ಹೇಗೆ ಎಂಬ ಆತಂಕ ಸಾರ್ವಜನಿಕರದ್ದು.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಯೋಜನಾಧಿಕಾರಿ ಜ್ಯೋತಿಲಕ್ಷ್ಮೀ ಅವರು ಹೆಣ್ಣುಮಕ್ಕಳ ಕುರಿತ ಯೋಜನೆಗಳು ಇದ್ದರೆ, ಇಲಾಖೆಗೆ ಮೊದಲು ಮಾಹಿತಿ ತಿಳಿಯುತ್ತದೆ. ಬ್ಯಾಂಕ್‌ ಖಾತೆಗೆ ಹಣ ಹಾಕುವಂತಹ ಯಾವುದೇ ಮಾಹಿತಿಗಳು ನಮ್ಮ ಕಚೇರಿಗೆ ಬಂದಲ್ಲಿ ವ್ಯಾಪಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಗೊಂದಲ ನಿವಾರಣೆಗೆ ಒತ್ತಾಯ

ಓದುವ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗೆ ಹಣ ಹಾಕುವ ಯೋಜನೆಗಳ ವಿಚಾರ ಕುರಿತು ಸಂಬಂಧಿಸಿದ ಇಲಾಖೆಗಳು ಶೀಘ್ರವೇ ಸ್ಪಷ್ಟ ಮತ್ತು ಖಚಿತ ಮಾಹಿತಿ ಮುಖೇನ ಜನಜಾಗೃತಿಗೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಅಕೌಂಟ್'ನಲ್ಲಿದೆ 1 ಲಕ್ಷ ಕೋಟಿ: ಹಣ ಸೇರಿದೆ ಮೋದಿ ನಿರೀಕ್ಷೆ ದಾಟಿ!