ದಸರಾ ರಜೆ: ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ದಂಡು
ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಕ್ಕೂ ದರ್ಶನ ಪಡೆಯಲು ಭಕ್ತರು ಮುಗಿ ಬಿದ್ದಿದ್ದರು. ಬೆಟ್ಟದ ತಪ್ಪಲಿನ ಗೇಟ್ ಬಳಿ ಭಕ್ತರು ಸಾಲು ಗಟ್ಟಿ ನಿಂತು ಬಸ್ ಏರಿ ತೆರಳಿದರು.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ(ಅ.23): ನವರಾತ್ರಿ ಹಾಗು ದಸರಾ ರಜೆ ಹಿನ್ನಲೆ ಭಾನುವಾರ ಬಂಡೀಪುರ ಸಫಾರಿ ಹಾಗು ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ನೆರದಿತ್ತು. ಅ.೨೩ ರಂದು ಆಯುಧ ಪೂಜೆ,ಅ.೨೪ ರಂದು ವಿಜಯ ದಶಮಿ ರಜೆಯಿದ್ದ ಕಾರಣ, ಬೆಂಗಳೂರು ನಗರ ಸೇರಿ ರಾಜ್ಯದ ಇತರೆ ಜಿಲ್ಲೆ, ಕೇರಳ ಹಾಗು ತಮಿಳುನಾಡಿನ ಪ್ರವಾಸಿಗರು ಹರಿದು ಬಂದಿದ್ದರು. ಭಾನುವಾರ ಬೆಳಗ್ಗೆ ಹಾಗು ಸಂಜೆ ಬಂಡೀಪುರ ಸಫಾರಿಗೆ ಸಾವಿರಾರು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ಸಫಾರಿ ಕೇಂದ್ರದ ಆವರಣದಲ್ಲಿ ಕಾರುಗಳು ಸಾಲುಗಟ್ಟಿ ನಿಂತಿದ್ದವು.
ಬೆಟ್ಟದಲ್ಲೂ ಭಕ್ತರು:
ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟಕ್ಕೂ ದರ್ಶನ ಪಡೆಯಲು ಭಕ್ತರು ಮುಗಿ ಬಿದ್ದಿದ್ದರು. ಬೆಟ್ಟದ ತಪ್ಪಲಿನ ಗೇಟ್ ಬಳಿ ಭಕ್ತರು ಸಾಲು ಗಟ್ಟಿ ನಿಂತು ಬಸ್ ಏರಿ ತೆರಳಿದರು. ಬೆಟ್ಟದ ತಪ್ಪಲಿನ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಲು ಜಾಗವಿಲ್ಲದೆ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ಕಿಮೀ ದೂರ ಕಾರುಗಳು ನಿಂತಿದ್ದವು. ಬೆಟ್ಟದ ತಪ್ಪಲಿನಲ್ಲಿ ಭಕ್ತರು ಬಿಸಿಲಿನ ಬೇಗೆಗೆ ಕನಲಿದ್ದರು. ಗೋಪಾಲಸ್ವಾಮಿ ದೇವಸ್ಥಾನಕ್ಕೆ ೧೦ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಸಂಜೆಯ ತನಕ ಸುಮಾರು ೪ ಸಾವಿರಕ್ಕೂ ಹೆಚ್ಚು ಜನರು ಬೆಟ್ಟಕ್ಕೆ ತೆರಳಿದ್ದಾರೆ ಎನ್ನಬಹುದು. ಗೋಪಾಲಸ್ವಾಮಿ ಬೆಟ್ಟಕ್ಕೆ ೧೦ ಸಾರಿಗೆ ಬಸ್‌ಗಳ ಓಡಾಟದ ಫಲವಾಗಿ ಭಾನುವಾರ ಒಂದೇ ದಿನ ಹೆಚ್ಚು ಆದಾಯ ಬಂದಿದೆ ಎಂದು ಟ್ರಾಫಿಕ್ ಕಂಟ್ರೋಲರ್ ವಿಜಯಕುಮಾರ್ ತಿಳಿಸಿದರು.
ನಮ್ಮದು ಪ್ರಪಂಚದಲ್ಲೇ ಮಾದರಿ ಸರ್ಕಾರ: ಸಚಿವ ಕೃಷ್ಣ ಬೈರೇಗೌಡ
ರೆಸಾರ್ಟ್,ಹೋಟೆಲ್‌ಗಳಲ್ಲಿ ಜನವೋ ಜನ!
ವಿಜಯ ದಶಮಿ ಹಿನ್ನಲೆ ಬಂಡೀಪುರ ಸುತ್ತ ಮುತ್ತಲಿನ ಖಾಸಗಿ ರೆಸಾರ್ಟ್ ಹಾಗು ಗುಂಡ್ಲುಪೇಟೆ ಹೋಟೆಲ್‌ಗಳಲ್ಲೂ ಶನಿವಾರ ರಾತ್ರಿ ಪ್ರವಾಸಿಗರು ಬೀಡು ಬಿಟ್ಟಿದ್ದರು. ಭಾನುವಾರ ದಸರಾ ಹಿನ್ನಲೆ ಪ್ರವಾಸಿಗರು ಬಂಡೀಪುರ ಸುತ್ತ ಮುತ್ತಲಿನ ಖಾಸಗಿ ರೆಸಾರ್ಟ್,ಹೋಟೆಲ್,ಹೋಂ ಸ್ಟೇಗಳಲ್ಲಿ ವಾಸ್ತವ್ಯ ಹೂಡಿದ್ದ ಕಾರಣ ಎಲ್ಲೆಡೆ ಜನರಿಂದ ಪ್ರವಾಸಿ ತಾಣಗಳು ತುಂಬಿತುಳಿಕಿದ್ದವು.ದಸರಾ ದಿನ ಗ್ರಾಹಕರು ಹೋಟೆಲ್ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಎಂದು ಉದ್ಯಮ್ ಹೋಟೆಲ್ ಮಾಲೀಕ ಪ್ರದೀಪ್ ಹೇಳಿದರು.