ಚಿತ್ರದುರ್ಗ(ಏ.15): ಮೀನು ಹಿಡಿಯಲು ಬಲೆ ಬೀಸಿದ್ದಾರೆ ಎಂದಾಕ್ಷಣ ಜನ ಬಾಯಲ್ಲಿ ನೀರೂರಿಸಿಕೊಳ್ಳುತ್ತಲೇ ಎದ್ದು ಬಿದ್ದು ಓಡಿ ಬಂದ್ರು. ಕಣ್ಣೆದುರಿಗೆ ಮೀನು ಕಂಡಾಕ್ಷಣವಂತೂ ಕೊಳ್ಳಲು ಮುಗಿ ಬಿದ್ರು. ಮಸಾಲೆ ಹಾಕಿ ಫ್ರೈ ಮಾಡುವ ಧಾವಂತದಲ್ಲಿ ಲಾಕ್‌ ಡೌನ್‌ ಸಾಮಾಜಿಕ ಅಂತರ ಕಾಪಾಡುವುದೇ ಮರೆತೇ ಬಿಟ್ಟರು.

ಇಂತಹದ್ದೊಂದು ದೃಶ್ಯ ಹೊಳಲ್ಕೆರೆ ತಾಲೂಕಿನ ತಾಳ್ಯಗ್ರಾಮದಲ್ಲಿ ಕಂಡು ಬಂತು. ಗುತ್ತಿಗೆದಾರರೋರ್ವರು ಕೆರೆಯಲ್ಲಿನ ಮೀನುಗಾರಿಕೆ ಗುತ್ತಿಗೆ ಪಡೆದಿದ್ದು ಸಹಜವಾಗಿಯೇ ಬಲೆ ಬೀಸಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಓಡೋಡಿ ಬಂದ ಗ್ರಾಮಸ್ಥರು ಮುಗಿ ಬಿದ್ದು ಮೀನು ಖರೀದಿಸಿ ಮನೆಗೊಯ್ದರು.

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

ಲಾಕ್‌ ಡೌನ್‌ ಜಾರಿಯಲ್ಲಿರುವುದರಿಂದ ದೂರದ ಜಲಾಶಯಗಳಿಂದ ಮೀನು ಪೂರೈಕೆಯಾಗುತ್ತಿಲ್ಲ. ಹಾಗಾಗಿ ಕೆರೆ ಮೀನುಗಳಿಗೆ ಡಿಮ್ಯಾಂಡ್‌ ಬಂದಿದೆ. ಚಿತ್ರದುರ್ಗ ಸೇರಿದಂತೆ ಹಲವು ನಗರಗಳಲ್ಲಿ ಲಾಕ್‌ ಡೌನ್‌ ವೇಳೆ ಮಾಂಸ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಂಸ ಖರೀದಿ ಮಾಡುತ್ತಿದ್ದಾರೆ. ಆದರೆ ತಾಳ್ಯಗ್ರಾಮದ ಮೀನು ಖರೀದಿಗೆ ಸಾಮಾಜಿಕ ಅಂತರ ದೂರವೇ ಉಳಿದಿತ್ತು.

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ನಗರ ಪ್ರದೇಶದಲ್ಲಿ ಆದರೆ ಪೊಲೀಸರು ನಿಂತಿದ್ದು ಸಾಮಾಜಿಕ ಅಂತರ ಸೃಷ್ಟಿಸುತ್ತಿದ್ದಾರೆ. ಗ್ರಾಮೀಣ ವಲಯದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಲ್ಲದೇ ಇರುವುದರಿಂದ ಗ್ರಾಮೀಣರು ಕೂಡಾ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕುಡಿಯಲು ನೀರು ತರಲು, ಜಮೀನುಗಳಲ್ಲಿ ಕೆಲಸ ಮಾಡಲು ಗುಂಪಾಗಿಯೇ ಹೋಗುತ್ತಿದ್ದಾರೆ. ಮೀನು ಖರೀದಿಯಲ್ಲಿಯೂ ಕೂಡ ಇಂತಹ ದೃಶ್ಯ ಕಂಡು ಬರಲು ಸಾಧ್ಯವಾಗಿದೆ.