ಕಾಂಗ್ರೆಸ್‌ ಸಮಾವೇಶ: ಮದ್ಯದ ಅಂಗಡಿಗಳ ಮುಂದೆ ಜನಜಂಗುಳಿ, 4 ಪಟ್ಟು ದರ ಹೆಚ್ಚಾದರೂ ಮುಗಿಬಿದ್ದ ಜನ!

ತಮ್ಮ ಮದ್ಯದ ಅಂಗಡಿಗಳಿಗೆ ಹತ್ತಿರದಲ್ಲೇ ಸಮಾವೇಶ ನಡೆಯುವುದನ್ನು ಅರಿತಿದ್ದ ಅಂಗಡಿ ಮಾಲೀಕರು ಕೂಡ ಮಾಮೂಲಿಗಿಂತ ನಾಲ್ಕು ಪಟ್ಟು ಹೆಚ್ಚಿನ ಮದ್ಯವನ್ನು ತಂದು ಸಂಗ್ರಹಿಸಿಟ್ಟಿದ್ದರು. ಅದೆಲ್ಲವೂ ಭರ್ಜರಿ ವ್ಯಾಪಾರವಾಗಿದೆ.

People Rush to Buy alcohol during Congress Convention in Hassan grg

ಹಾಸನ(ಡಿ.06):  ಸಮಾವೇಶಕ್ಕೆ ನೆರೆಯ ಜಿಲ್ಲೆಗಳಿಂದ ಬಂದಿದ್ದ ಸಾಕಷ್ಟು ಕಾರ್ಯಕರ್ತರು ಬಸ್‌ ಇಳಿಯುತ್ತಲೇ ವೈನ್‌ಶಾಪ್ ಗಳನ್ನು ಹುಡುಕಿ ಹೊಡಿ 90 ಎನ್ನುವಂತೆ ಮದ್ಯದ ಅಂಗಡಿಗಳ ಮುಂದೆ ಜಮಾಯಿಸಿದ್ದರು. ಕಾಂಗ್ರೆಸ್‌ನ ಜನಕಲ್ಯಾಣ ಸಮಾವೇಶ ನಗರದ ಅರಸೀಕೆರೆ ರಸ್ತೆಯಲ್ಲಿರುವ ಕೃಷ್ಣ ನಗರದಲ್ಲಿ ಆಯೋಜನೆಯಾಗಿತ್ತು. 

ನಗರದಿಂದ ಹೊರವಲಯದಲ್ಲಿ ಈ ಬಡಾವಣೆ ಇರುವುದರಿಂದ ಈ ಭಾಗದಲ್ಲಿ ಎರಡೋ ಮೂರೋ ಮದ್ಯದ ಅಂಗಡಿಗಳು ಮಾತ್ರ ಇವೆ. ಆದರೆ ಗುರುವಾರ ಈ ಎಲ್ಲಾ ಮದ್ಯದ ಅಂಗಡಿಗಳಿಗೆ ಹಿಂದೆಂದೂ ಆಗಿಲ್ಲ... ಮುಂದೆಂದೂ ಆಗಲ್ಲ... ಎನ್ನುವಷ್ಟು ವ್ಯಾಪಾರವಾಗಿದೆ. ತಮ್ಮ ಮದ್ಯದ ಅಂಗಡಿಗಳಿಗೆ ಹತ್ತಿರದಲ್ಲೇ ಸಮಾವೇಶ ನಡೆಯುವುದನ್ನು ಅರಿತಿದ್ದ ಅಂಗಡಿ ಮಾಲೀಕರು ಕೂಡ ಮಾಮೂಲಿಗಿಂತ ನಾಲ್ಕು ಪಟ್ಟು ಹೆಚ್ಚಿನ ಮದ್ಯವನ್ನು ತಂದು ಸಂಗ್ರಹಿಸಿಟ್ಟಿದ್ದರು. ಅದೆಲ್ಲವೂ ಭರ್ಜರಿ ವ್ಯಾಪಾರವಾಗಿದೆ. 

ಬಿಜೆಪಿ ಹೋರಾಟ ರಾಜಕೀಯ ದುರುದ್ದೇಶದ್ದು: ಸಿದ್ದರಾಮಯ್ಯ ಆಕ್ರೋಶ

ಮದ್ಯದ ವ್ಯಾಪಾರ ಜೋರಾದ ಮೇಲೆ ನಾಲಿಗೆಯೂ ರುಚಿ ರುಚಿಯಾಗಿ ಏನನ್ನಾದರೂ ಕೇಳುತ್ತದೆ. ಹಾಗಾಗಿ ಮದ್ಯ ಕುಡಿಯಲು ಬಂದವರು ಮಾಂಸ, ಆಮೇಟ್, ತಿಂಡಿ ತಿನಿಸು ಗಳಿಗೆ ಬಂದೇ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಬುಧವಾರ ಸಂಜೆಯಿಂದಲೇ ಒಂದಷ್ಟು ಮೊಬೈಲ್ ಕ್ಯಾಂಟೀನ್‌ಗಳು ಕೂಡ ಆರಂಭವಾಗಿದ್ದವು. ನಿರೀಕ್ಷೆ ಹುಸಿಯಾಗದೆ ಅವರಿಗೂ ಕೂಡ ಒಳ್ಳೆಯ ವ್ಯಾಪಾರವೇ ಆಗಿದೆ. ಮದ್ಯದ ಅಮಲೋಏನೋ....ಸಮಾವೇಶಮುಗಿಸಿಕೊಂಡು ಹೊರಟ ವೇಳೆ ಹಲವರು ತಾವು ಬಂದಿದ್ದ ಬಸ್ ಹುಡುಕುವಲ್ಲಿ ವಿಫಲರಾಗಿ ಬೇರಾವುದೋ ಜಿಲ್ಲೆಯ ಬಸ್ ಹತ್ತಿದ್ದರು. 

ಇನ್ನು ಕೆಲವರು ತಮ್ಮ ಬಸ್ ಸಿಗದೇ ಹುಡುಕುತ್ತಲೇ ಇದ್ದರು. ಅಕ್ಕಪಕ್ಕದ ಜಿಲ್ಲೆಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಾರ್ಯಕರ್ತರನ್ನು ಕರೆತಂದಿದ್ದರು. ಬಹುಶಃ ಕೆಎಸ್‌ಆರ್‌ಟಿಸಿಯ ಎಲ್ಲಾ ಬಸ್ಸುಗಳು ಒಂದೇ ರೀತಿ ಇರುವುದರಿಂದಲೂ ತಮ್ಮ ಬಸ್ ಯಾವುದು ಎನ್ನುವುದನ್ನು ಹುಡುಕುವಲ್ಲಿ ಹಲವರು ಹೈರಾಣಾದರು.

ಹಾಸನದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ:

ಹಾಸನ: ಹಲವು ಹಗ್ಗ-ಜಗ್ಗಾಟಗಳ ನಡುವೆಯೇ ನಗರದ ಹೊರವಲಯದ ಕೃಷ್ಣ ನಗರದಲ್ಲಿ ಗುರುವಾರ ಕಾಂಗ್ರೆಸ್‌ನ ಬೃಹತ್ 'ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ' ನಡೆಯಲಿದ್ದು, ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಸಚಿವರು, ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. 

ಜೆಡಿಎಸ್‌ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ನಾಯಕರು ಸಜ್ಜಾಗಿದ್ದು, ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಹಾಸನದಲ್ಲೇ ವಾಸ್ತವ್ಯ ಹೂಡಿ, ಖುದ್ದಾಗಿ ನಿಂತು ಸಮಾವೇಶದ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಅರಸೀಕೆರೆ ರಸ್ತೆಯ ಎಸ್.ಎಂ.ಕೃಷ್ಣ ಬಡಾವಣೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಿದ್ದಗೊಂಡಿತ್ತು. 

ರಾಹುಲ್, ಖರ್ಗೆ, ಸಿದ್ದು, ಡಿಕೆಶಿ ಇರುವವರೆಗೂ ಗ್ಯಾರಂಟಿ ಕಸಿಯುವ ಮಗ ಹುಟ್ಟಲ್ಲ: ಸುರ್ಜೇವಾಲಾ

ಸಮಾವೇಶದ ಹಿನ್ನೆಲೆಯಲ್ಲಿ ಇಡೀ ಹಾಸನ ನಗರ ಕಾಂಗ್ರೆಸ್‌ ಮಯವಾಗಿದೆ. ನಗರದೆಲ್ಲೆಡೆ 'ಕೈ' ನಾಯಕರು, ಪಕ್ಷದ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಜನಕಲ್ಯಾಣ ಸ್ವಾಭಿಮಾನಿಸಮಾವೇಶ ಎಂಬ ಹೆಸರಿನಲ್ಲೇ ಬಹುತೇಕ ಪ್ಲೆಕ್ ಬ್ಯಾನರ್‌ಗಳನ್ನು ಪ್ರಿಂಟ್ ಮಾಡಲಾಗಿದೆ. ಪ್ಲೆಕ್ ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳು ಎದ್ದು ಕಂಡಿವೆ. 

ಸಮಾವೇಶಕ್ಕೆ ಶುಭ ಕೋರಿ 'ಕೈ' ನಾಯಕರಿಂದ ನಾನಾ ರೀತಿಯ ಪ್ಲೆಕ್ಸ್‌ ಗಳನ್ನು ಹಾಕಲಾಗಿದೆ. ಬಿ.ಎಂ. ರಸ್ತೆಯುದಕ್ಕೂ ಫ್ರೆಕ್, ಬ್ಯಾನರ್, ಪಕ್ಷದ ಬಾವುಟಗಳು ರಾರಾಜಿಸುತ್ತಿವೆ. ಸಮಾವೇಶದ ಹೆಸರಿನ ಗೊಂದಲದ ಹಿನ್ನೆಲೆಯಲ್ಲಿ ನಾನಾ ಹೆಸರಿನ ಪ್ಲೆಕ್ಸ್‌ ಗಳನ್ನು ಅಳವಡಿಕೆ ಮಾಡಲಾಗಿದೆ. ಸಮಾವೇಶಕ್ಕೆ 2 ಲಕ್ಷ ಜನರ ನಿರೀಕ್ಷೆ ಇಟ್ಟುಕೊಂಡು ತಯಾರಿ ನಡೆಸಲಾಗಿದೆ. ಸಮಾವೇಶಕ್ಕೆ ನಾನಾ ಕಡೆಯಿಂದ ಜನರನ್ನು ಕರೆ ತರಲು ಸುಮಾರು 1,500 ಬಸ್‌ಗಳ ವ್ಯವಸ್ಥೆ ಕಲಿಸಲಾಗಿದೆ. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. 

Latest Videos
Follow Us:
Download App:
  • android
  • ios