ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಹೆಚ್ಚಿದ ಜನರ ನಿರೀಕ್ಷೆ..!
* ಅಭಿವೃದ್ಧಿಗೆ ಚುರುಕು ಸಿಗುವ ವಿಶ್ವಾಸ, ಸಿಎಂ ತವರು ಜಿಲ್ಲೆಗೆ ಒದಗಿಬಂದ ಶುಕ್ರದೆಸೆ
* ನೆರೆ ಸಂತ್ರಸ್ತರಿಗೆ ಬೇಕಿದೆ ನೆರವು
* ಉತ್ತರ ಕರ್ನಾಟಕ ಭಾಗಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿರುವುದು ಎಲ್ಲರ ಸಂತಸಕ್ಕೆ ಕಾರಣ
ನಾರಾಯಣ ಹೆಗಡೆ
ಹಾವೇರಿ(ಜು.29): ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವುದು ಜಿಲ್ಲೆಯ ಪಾಲಿಗೆ ಶುಕ್ರದೆಸೆ ಬಂದಂತಾಗಿದೆ. ನನೆಗುದಿಗೆ ಬಿದ್ದಿರುವ ಹಲವು ಯೋಜನೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಸಿಗುವ ವಿಶ್ವಾಸ ಬಂದಿದೆ. ಜತೆಗೆ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಂತಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿ, ಜಿಲ್ಲಾ ಉಸ್ತುವಾರಿಗಳಾಗಿಯೂ ಜವಾಬ್ದಾರಿ ನಿರ್ವಹಿಸಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪಟ್ಟಕ್ಕೇರಿರುವುದು ಜಿಲ್ಲೆಯಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಆದ್ದರಿಂದ ಅವರ ಮೇಲೆ ಈ ಭಾಗದ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಪ್ರಾದೇಶಿಕ ಅಸಮಾನತೆ ನಿವಾರಿಸುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ಅವರಿಂದ ಸಿಗಲಿದೆ ಎಂಬ ಆಶಾಭಾವನೆ ಗರಿಗೆದರಿದೆ.
ತವರು ಜಿಲ್ಲೆಗೆ ಶುಕ್ರದೆಸೆ:
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವುದು ಜಿಲ್ಲೆಗೆ ಒದಗಿಬಂದಿರುವ ಶುಕ್ರದೆಸೆ ಎಂದೇ ಹೇಳಬಹುದಾಗಿದೆ. ಈ ಹಿಂದಿನಿಂದಲೂ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಪಾಲು ಸಿಗುತ್ತಲೇ ಬಂದಿದೆ. ಅದರಲ್ಲೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಇನ್ನಷ್ಟು ಹೆಚ್ಚೇ ಎನ್ನಬಹುದು. ಮೊದಲ ಬಾರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಿ.ಎಂ. ಉದಾಸಿ ಹಾಗೂ ಬಸವರಾಜ ಬೊಮ್ಮಾಯಿ ಮಂತ್ರಿಗಳಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಬೊಮ್ಮಾಯಿ ಮತ್ತು ಹಿರೇಕೆರೂರಿನ ಬಿ.ಸಿ. ಪಾಟೀಲ, ರಾಣಿಬೆನ್ನೂರಿನ ಆರ್. ಶಂಕರ್ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈಗ ನಾಡಿನ ಮುಖ್ಯಮಂತ್ರಿಯೇ ಜಿಲ್ಲೆಯವರಾಗಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಂದರ್ಭವಾಗಿದೆ. ಅದರಲ್ಲೂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಮುನ್ನೋಟವನ್ನು ಬಲ್ಲವರಾಗಿದ್ದು, ದೂರದೃಷ್ಟಿಯ ಯೋಜನೆಗಳನ್ನು ತರುವ ನಿರೀಕ್ಷೆಯಿದೆ.
ಕರ್ನಾಟಕಕ್ಕೆ 'ಬಸವರಾಜ' ಮೊದಲ ದಿನವೇ ಕಿಕ್ ಸ್ಟಾರ್ಟ್!
ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳು ಹಿಂದುಳಿದಿವೆ. ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗದ್ದರಿಂದ ನಿರುದ್ಯೋಗ ಸಮಸ್ಯೆಯೂ ಸಾಕಷ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆಂಬ ನಿರೀಕ್ಷೆ ಎಲ್ಲರಲ್ಲಿ ಹುಟ್ಟುಹಾಕಿದೆ. ಜಿಲ್ಲೆಯ ಶೈಕ್ಷಣಿಕ, ನೀರಾವರಿ, ರಸ್ತೆ, ಕೈಗಾರಿಕೆ ಸ್ಥಾಪನೆ ಸೇರಿದಂತೆ ಮೂಲಭೂತ ಸೌಲಭ್ಯ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ಆದ್ಯತೆ ನೀಡಬೇಕಿದೆ.
ನೆರೆ ಸಂತ್ರಸ್ತರಿಗೆ ಬೇಕಿದೆ ನೆರವು:
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನೆರೆ ಹಾಗೂ ಅತಿವೃಷ್ಟಿಯಿಂದ ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿವೆ. ಪ್ರತಿ ವರ್ಷ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದೆ. ವಾರದ ಹಿಂದಷ್ಟೇ ಜಿಲ್ಲೆಯಲ್ಲಿ ಪ್ರವಾಹದಿಂದ ಸಾವಿರಾರು ಮನೆಗಳು ಬಿದ್ದಿದ್ದು, ಬೆಳೆ ಹಾನಿಯೂ ಆಗಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಪ್ರವಾಹದಿಂದ ರೈತರು ಸಂಕಷ್ಟಅನುಭವಿಸುತ್ತಲೇ ಬಂದಿದ್ದಾರೆ. ನದಿ ತೀರದ ಗ್ರಾಮಗಳ ಸ್ಥಳಾಂತರ ಕಾರ್ಯ ಆಗಬೇಕಿದೆ. ಸಂತ್ರಸ್ತರಿಗೆ ತಕ್ಷಣ ಪರಿಹಾರ ಸಿಗಬೇಕಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೊಮ್ಮಾಯಿ ಅವರು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನವನ್ನೇ ಮಾಡಿದ್ದರು. ಈಗ ಅವರು ರಾಜ್ಯ ಮುಖ್ಯಮಂತ್ರಿಯಾಗಿರುವುದರಿಂದ ಅವರ ಮೇಲಿನ ಜವಾಬ್ದಾರಿ ಇನ್ನಷ್ಟುಹೆಚ್ಚಿದಂತಾಗಿದೆ. ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಕಾರ್ಯವನ್ನು ಅವರು ಮಾಡುತ್ತಾರೆ ಎಂಬ ಭರವಸೆ ಎಲ್ಲರಿಗಿದೆ.
ವಾತ್ಸಲ್ಯ ಯೋಜನೆ ರೂವಾರಿ:
ಮುಖಮಂತ್ರಿಯಾಗಿ ಅಧಿಕಾರವಹಿಸಿಕೊಂಡ ತಕ್ಷಣವೇ ರೈತರ ಮಕ್ಕಳಿಗಾಗಿ ಶಿಷ್ಯವೇತನ ಜಾರಿಗೆ ತಂದಿರುವ ಬಸವರಾಜ ಬೊಮ್ಮಾಯಿ ಜಿಲ್ಲೆಯ ಮಕ್ಕಳ ಆರೋಗ್ಯದ ಬಗ್ಗೆ ಕೂಡ ಮುತುವರ್ಜಿವಹಿಸಿರುವುದು ಮಕ್ಕಳ ಮೇಲೆ ಅವರಿಗಿರುವ ಕಾಳಜಿ ತೋರಿಸುತ್ತದೆ.
ಬೊಮ್ಮಾಯಿ ಜನತಾ ಪರಿವಾರದಿಂದ ಬಿಜೆಪಿಗೆ ಸೇರಿದ ಒಂದು ಇಂಟ್ರಸ್ಟಿಂಗ್ ಪ್ರಸಂಗ
ಸಂಭವನೀಯ ಕೊರೋನಾ ಮೂರನೇ ಅಲೆ ಎದುರಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ವಾತ್ಸಲ್ಯ ಯೋಜನೆ ಬೊಮ್ಮಾಯಿ ಅವರ ಕನಸಿನ ಕೂಸು ಎನ್ನಬಹುದು. ಅಲ್ಲದೆ ಅವರ ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ. ಜಿಲ್ಲೆಯ 16 ವರ್ಷದೊಳಗಿನ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗಿದ್ದು, ಆಪೌಷ್ಟಿಕತೆಯಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯವೂ ನಡೆದಿದೆ. ಕೋವಿಡ್ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರ ಕಾರ್ಯನಿರ್ವಹಣೆ ಬಗ್ಗೆ ಎಲ್ಲರಿಗೂ ತೃಪ್ತಿಯಿದೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸಲು ಕೈಗೊಂಡ ಕಾರ್ಯ ಮೆಚ್ಚಲೇಬೇಕು.
ಇದಲ್ಲದೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿ ಆದಷ್ಟು ಬೇಗ ಮುಗಿಸಿ ವೈದ್ಯಕೀಯ ಕಾಲೇಜು ಆರಂಭಿಸಬೇಕಿದೆ. ಇದಲ್ಲದೇ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಸ್ಥಾಪನೆ ವಿಷಯದಲ್ಲಿ ಬೊಮ್ಮಾಯಿ ಅವರೇ ನೇತೃತ್ವ ವಹಿಸಿ ಹೋರಾಟ ನಡೆಸಿದ್ದಾರೆ. ಈಗ ಅವೆಲ್ಲವನ್ನೂ ಅನುಷ್ಠಾನಗೊಳಿಸುವ ಕಾಲ ಕೂಡಿಬಂದಿದೆ. ತವರು ಜಿಲ್ಲೆಯ ಅಭಿವೃದ್ಧಿಗಾಗಿ ಅವರು ಇಚ್ಛಾಶಕ್ತಿ ಪ್ರದರ್ಶಿಸಿ ಹೆಚ್ಚಿನ ಅನುದಾನ ನೀಡಬೇಕಿದೆ.