Bidar: ಕಲ್ಯಾಣ ಕರ್ನಾಟಕ ಉತ್ಸವ: ಬೀದರ್‌ನಲ್ಲಿ ಆಕ್ಷೇಪ
ಉತ್ಸವ ಕಲಬುರಗಿ ಜಿಲ್ಲೆಗೆ ಸೀಮಿತ ಬೇಡ, ಮುಖ್ಯಮಂತ್ರಿ ಎಲ್ಲಾ ಜಿಲ್ಲೆಗೂ ಬರಲಿ: ಬೀದರ್ ಜನತೆಯ ಕೂಗು
ಅಪ್ಪಾರಾವ್ ಸೌದಿ
ಬೀದರ್(ಸೆ.16): ಕಲ್ಯಾಣ ಕರ್ನಾಟಕ ಉತ್ಸವ ಕೇವಲ ಕಲಬುರಗಿಗೆ ಸೀಮಿತವಾಗದೇ, ಆ ಜಿಲ್ಲೆಗಷ್ಟೇ ಮುಖ್ಯಮಂತ್ರಿ, ಮಂತ್ರಿಗಳು ಬಂದು ಹೋಗದೆ, ಹಿಂದುಳಿದ ಭಾಗವಾಗಿರುವ ಇತರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿಯೂ ಮುಖ್ಯಮಂತ್ರಿಗಳ ಭೇಟಿ ಇರಲಿ, ರಾಷ್ಟ್ರ ಧ್ವಜಾರೋಹಣ ಮಾಡಲಿ. ಪ್ರತಿ ಬಾರಿಯೂ ಸರದಿಯಂತೆ ವರ್ಷಕ್ಕೊಂದು ಜಿಲ್ಲೆಯಲ್ಲಿ ಸಿಎಂ ಧ್ವಜಾರೋಹಣ ಮಾಡಲಿ ಎಂಬ ಕೂಗು ಜಿಲ್ಲೆಯಲ್ಲಿ ಎದ್ದಿದೆ.
ನಿಜಾಮ ಆಡಳಿತ ಶಾಹಿಯಿಂದ ಮುಕ್ತಿ ಪಡೆದ ಈ ಭಾಗದ 7 ಜಿಲ್ಲೆಗಳಲ್ಲಿ ಸೆಪ್ಟೆಂಬರ್ 17ರಂದು ಆಚರಿಸಲ್ಪಡುವ ಕಲ್ಯಾಣ ಕರ್ನಾಟಕ ಉತ್ಸವದ ಹೆಸರಿನಲ್ಲಿ ಕೇವಲ ಕಲಬುರಗಿಗೆ ಸೀಮಿತವಾದ ಕಾರ್ಯಕ್ರಮಗಳಿವೆ. ಅಷ್ಟಕ್ಕೂ ಕಲ್ಯಾಣ ಕರ್ನಾಟಕ ಉತ್ಸವದ ತಯಾರಿಗೆ ಕಲಬುರಗಿ ಹೊರತುಪಡಿಸಿ ಯಾವೊಂದು ಜಿಲ್ಲೆಯ ಶಾಸಕರಾಗಲಿ, ಹಿರಿಯ ಹೋರಾಟಗಾರರಾಗಲಿ, ಕಲಾವಿದರ ಪ್ರಮುಖರನ್ನಾಗಲಿ ಆಹ್ವಾನಿಸಿ ಕಾರ್ಯಕ್ರಮದ ರೂಪುರೇಷ ಹೇಗಿರಬೇಕು, ಏನೇನು ನಡೆಯಬೇಕು ಎಂಬ ಬಗ್ಗೆ ಚರ್ಚಿಸಿಲ್ಲ ಎಂಬ ಕೊರಗಿನ, ಆಕ್ರೋಶದ ವಾತಾವರಣ ಇತರೆ ಜಿಲ್ಲೆಗಳಲ್ಲಿ ಭುಗಿಲೆದ್ದಿದೆ.
Yadgir: ಸೆ.17ಕ್ಕೆ ವಿಜೃಂಭಣೆಯ ಕಲ್ಯಾಣ ಕರ್ನಾಟಕ ಉತ್ಸವ
ಕಲಬುರಗಿಗೆ ಕಲ್ಯಾಣ ಕರ್ನಾಟಕ ಉತ್ಸವ ಸೀಮಿತವಾಗದೆ ಪ್ರತಿ ಜಿಲ್ಲೆಗೂ ಸರದಿಯಂತೆ ಸಿಎಂ ಆಗಮಿಸಿ ಧ್ವಜಾರೋಹಣ ನೆರವೇರಿಸಲಿ. ಅಲ್ಲಿನ ಪ್ರಗತಿ ಪರಿಶೀಲನೆ ನಡೆಸಲಿ, ಜನರ ದೂರು ದುಮ್ಮಾನಗಳನ್ನು ಆಲಿಸಲಿ. ಪ್ರಗತಿಗೆ ವೇಗ ನೀಡಿ ಹೋಗಲಿ. ಆಗ ಮಾತ್ರ ಇಡೀ ಕಲ್ಯಾಣ ಕರ್ನಾಟಕ ಉತ್ಸವ ಸಾರ್ಥಕವಾದೀತು ಎಂಬ ಅಭಿಪ್ರಾಯ ಇಲ್ಲಿನವರದ್ದು.
ಇನ್ನು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪೈಕಿ ಬೀದರ್ ಪ್ರತಿ ಜಿಲ್ಲೆಯಲ್ಲಿಯೂ ಉಸ್ತುವಾರಿ ಸಚಿವರಿಂದ ರಾಷ್ಟ್ರಧ್ವಜಾರೋಹಣ ನೆರವೇರಿದರೆ, ರಾಜ್ಯ ರಾಜಧಾನಿಯಿಂದ ಅತೀ ದೂರದಲ್ಲಿರುವ ಬೀದರ್ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣದ ಹೊಣೆ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇಲ್ಲಿನ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ರಾಯಚೂರು ಜಿಲ್ಲೆಯ ಹೊಣೆಯಿದೆ.
ಸರ್ಕಾರದ ನಿರ್ಲಕ್ಷ್ಯ ಬೀದರ್ ಜಿಲ್ಲೆಯನ್ನು ತುಳಿಯತ್ತಲೇಯಿದೆ. ಇದು ಬದಲಾಗಬೇಕು. ಎಲ್ಲ ಜಿಲ್ಲೆಗಳ ಕಲ್ಯಾಣವಾಗಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬೀದರ್ ಜಿಲ್ಲೆಯನ್ನು ಯಾವೊತ್ತೂ ಕಡೆಗಣಿಸಲಾಗುತ್ತಿದೆ. ಕಲಬುರಗಿಗೆ ಕಲ್ಯಾಣ ಕರ್ನಾಟಕ ಉತ್ಸವ ಸೀಮಿತವಾಗದೆ ಪ್ರತಿ ಜಿಲ್ಲೆಗೂ ಸರದಿಯಂತೆ ಸಿಎಂ ಆಗಮಿಸಿ ಧ್ವಜಾರೋಹಣ ನೆರವೇರಿಸಲಿ. ಆಯಾ ಜಿಲ್ಲೆಯ ಸಮಸ್ಯೆ ಅರಿಯಲಿ, ಅಭಿವೃದ್ಧಿಗೆ ವೇಗ ನೀಡಲಿ ಅಂತ ಬೀದರ್‌ನ ಗುಂಡಪ್ಪ ಬೆಲ್ಲೆ ಮದನೂರು ತಿಳಿಸಿದ್ದಾರೆ.