Asianet Suvarna News Asianet Suvarna News

Yadgir: ಸೆ.17ಕ್ಕೆ ವಿಜೃಂಭಣೆಯ ಕಲ್ಯಾಣ ಕರ್ನಾಟಕ ಉತ್ಸವ

ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿವಿಧ ಸರ್ಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ಸೂಚನೆ 

Kalyana Karnataka Utsava Will Be Held on September 17th Yadgir grg
Author
First Published Sep 4, 2022, 10:47 AM IST

ಯಾದಗಿರಿ(ಸೆ.04):  ಸೆ.17ರಂದು ನಡೆಯುವ ಕಲ್ಯಾಣ ಕರ್ನಾಟಕ (ಹೈದ್ರಾಬಾದ್‌ ಕರ್ನಾಟಕ) ಉತ್ಸವ ದಿನಾಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರ ಅಧ್ಯಕ್ಷತೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಅಂದು ಬೆಳಗ್ಗೆ 6.45 ಗಂಟೆಗೆ ಜಿಲ್ಲಾಡಳಿತ ಭವನ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ, ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಬಳಿಕ ಯೋಗಥಾನ ನಡೆಯಲಿದ್ದು, ಸುಮಾರು 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ನೋಂದಣಿ ಸೇರಿದಂತೆ ಸೂಕ್ತ ಕ್ರಮ ಜಿಲ್ಲಾ ಕ್ರೀಡಾಧಿಕಾರಿಗಳು ಕೈಗೊಳ್ಳಬೇಕು. ಅದರಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಬೇಕು. ಮೈದಾನದ ಸ್ವಚ್ಛತೆ, ಕುಡಿಯುವ ನೀರು, ಉಪಹಾರ, ವೇದಿಕೆ ಸಿದ್ಧತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದರು.

ರೈತರಿಗೇ ತಿಳಿಯದಂತೆ ಅವರ ಭೂಮಿ ಸ್ವಾಧೀನ: ಪಹಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೆಸರು ಪ್ರತ್ಯಕ್ಷ

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ತಪ್ಪದೇ ಭಾಗವಹಿಸಬೇಕು. ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ, ಅಗ್ನಿ ಶಾಮಕದಳ ಸೇರಿದಂತೆ ಕವಾಯತು ತಂಡಗಳನ್ನು ರಚಿಸಿ ಕ್ರಮ ವಹಿಸಬೇಕು. ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಧ್ವಜಾರೋಹಣ ನಡೆಯುವ ಮೈದಾನದ ಸುತ್ತಲೂ ಅವಶ್ಯಕತೆ ಇದ್ದಲ್ಲಿ ಬ್ಯಾರಿಕೇಡಿಂಗ್‌ ನಿರ್ಮಾಣ, ಶಿಷ್ಟಾಚಾರ ಪಾಲನೆ, ಸೂಕ್ತ ಪೊಲೀಸ್‌ ಬಂದೋಬಸ್ತ್‌, ಅಗ್ನಿಶಾಮಕ ವಾಹನ, ಆರೋಗ್ಯ ಇಲಾಖೆಯಿಂದ ನುರಿತ ವೈದ್ಯರೊಂದಿಗೆ ಚಿಕಿತ್ಸಾ ವಾಹನ ಇರುವಂತೆ ನೋಡಿಕೊಳ್ಳಲು ಅವರು ಸಂಬಂಧಪಟ್ಟಅಧಿಕಾರಿಗಳಿಗೆ ತಿಳಿಸಿದರು.

ಧ್ವಜಾರೋಹಣ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ, ನಾಡಗೀತೆ, ಧ್ವಜಾರೋಹಣ ಎಲ್ಲಾ ಸರ್ಕಾರಿ ಕಚೇರಿ ದೀಪಾಲಂಕಾರ ವ್ಯವಸ್ಥೆ, ಮತ್ತು ಇನ್ನಿತರ ಕುರಿತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಈ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದವರಿಗೆ ಮನೆಗೆ ತೆರಳಿ ಸನ್ಮಾನಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿವಿಧ ಸರ್ಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ಸೂಚಿಸಿದರು.

Yadgir: ಸದಸ್ಯರಿಂದಲೇ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ..!

ಜಿಪಂ ಸಿಇಓ ಅಮರೇಶ ಆರ್‌. ನಾಯ್‌ಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್‌, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ಡಿಡಿಪಿಐ ಶಾಂತಗೌಡ ಪಾಟೀಲ್‌, ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಶ್ರೀನಿವಾಸರಾವ್‌ ದೊಡ್ಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್‌ ಕವಿತಾಳ, ಜಂಟಿ ಕೃಷಿ ನಿರ್ದೇಶಕ ಅಭಿದ್‌ ಎಸ್‌., ಸಮಾಜ ಕಲ್ಯಾಣ ಇಲಾಖಾಧಿಕಾರಿ ಚನ್ನಬಸವ, ಪಶುಪಾಲನೆ ಇಲಾಖೆ ಉಪನಿರ್ದೇಶಕ ರಾಜು ದೇಶಮುಖ್‌, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅಜಿತ್‌ ನಾಯಕ, ಪದವಿ ಕಾಲೇಜು ಉಪನ್ಯಾಸಕ ದೇವಿಂದ್ರಪ್ಪ ಹಳಿಮನಿ ಇತರರಿದ್ದರು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ

2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶವು (ಹೈದ್ರಾಬಾದ್‌ ಕರ್ನಾಟಕ) ಸ್ವಾತಂತ್ರ್ಯಗಳಿಸಿ 74 ವರ್ಷಗಳನ್ನು ಪೂರೈಸಿದ್ದು, 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಮೋಚನಾ ದಿನವಾಗಿ ಸೆ.17ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ಆಯೋಜಿಸಲಾಗಿದೆ. ಇದರ ಭಾಗವಾಗಿ ಯಾದಗಿರಿ ಜಿಲ್ಲೆಯಾದ್ಯಂತ 16 ಸ್ಥಳಗಳಲ್ಲಿ ಆರೋಗ್ಯ ಮೇಳ, ಉದ್ಯೋಗ ಮೇಳ, ಕೃಷಿ ಕಾರ್ಯಾಗಾರ, ಕಲ್ಯಾಣ ಕರ್ನಾಟಕ ಕರಕುಶಲ ಕಾರ್ಯಾಗಾರ, ಮಹಿಳಾ ಸಬಲೀಕರಣ ಕಾರ್ಯಾಗಾರ, ಕಲಾವಿದರ ತಂಡದೊಂದಿಗೆ ಜಾಥಾ, ಸೈಕಲ್‌ ಜಾಥಾ, ವಾಕಥಾನ ಮತ್ತು ವಾಹನ ಜಾಥಾ ಕಾರ್ಯಕ್ರಮಗಳನ್ನು ವಿವಿಧ ದಿನಗಳಲ್ಲಿ ಏರ್ಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
 

Follow Us:
Download App:
  • android
  • ios