ಮಂಗಳೂರು(ಮೇ 28): ಹಾನಿಗೊಳಗಾದ ವಿದ್ಯುತ್‌ ಲೈನ್‌ ಸರಿಪಡಿಸಲು ಲೈನ್‌ಮೇನ್‌ಗಳು ಗಡಿ ದಾಟುವಂತಿಲ್ಲ. ಡೇರಿ ಹಾಲು ಸಾಗಿಸಬೇಕಾದರೆ ಕ್ಯಾನನ್ನು ಎತ್ತಿಟ್ಟು ಗಡಿ ದಾಟಿಸಬೇಕು. ಗ್ಯಾಸ್‌, ಪಡಿತರ ಸೌಲಭ್ಯ ಇದ್ದರೂ ಪಡೆಯಲು ಗಡಿ ಅಡ್ಡಿ..

ಲಾಕ್‌ಡೌನ್‌ ವೇಳೆಯಲ್ಲಿ ಗಡಿಬಂದ್‌ ಮಾಡಿರುವ ಹಿನ್ನೆಲೆಯಲ್ಲಿ ಅಡ್ಯನಡ್ಕ ಸಮೀಪದ ಗಡಿನಾಡಿನ ಸುಮಾರು 700 ಕುಟುಂಬದ ಕನ್ನಡಿಗರ ಬದುಕಿನ ವ್ಯಥೆ ಇದು. ದ.ಕ. ಜಿಲ್ಲೆಯ ಗಡಿಭಾಗ ಅಡ್ಯನಡ್ಕದ ಸಾರಡ್ಕ ಚೆಕ್‌ ಪೋಸ್ಟ್‌ ಈ ಗಡಿನಾಡ ಕನ್ನಡಿಗರ ಎಲ್ಲ ಸೌಲಭ್ಯಕ್ಕೆ ತಡೆ ಹಾಕಿದೆ. ಲಾಕ್‌ಡೌನ್‌ ಆರಂಭದಿಂದ ಇಲ್ಲಿನ ಚೆಕ್‌ಪೋಸ್ಟ್‌ ಬಂದ್‌ ಆಗಿದ್ದು, ಅಷ್ಟುಸುಲಭದಲ್ಲಿ ತೆರೆದುಕೊಳ್ಳುವ ಸಾಧ್ಯತೆ ಇಲ್ಲ. ಹಾಗಾಗಿ ಈ ಗಡಿನಾಡಿನಲ್ಲಿ ವಾಸಿಸುವ ಕನ್ನಡಿಗರಿಗೆ ಸದ್ಯದ ಮಟ್ಟಿಗೆ ತ್ರಿಶಂಕು ಪರಿಸ್ಥಿತಿ.

ಗ್ರಾಮ ಕೇರಳದಲ್ಲಿ, ರಸ್ತೆ ಕರ್ನಾಟಕದಲ್ಲಿ..:

ಅಡ್ಯನಡ್ಕ ಪೇಟೆಯಿಂದ ಸುಮಾರು ಒಂದೂವರೆ ಕಿ.ಮೀ. ಉತ್ತರಕ್ಕೆ ಕೇರಳದ ಎಣ್ಮಕಜೆ ಗ್ರಾಮಕ್ಕೆ ಸೇರಿದ ಎರಡು ವಾರ್ಡ್‌ಗಳಿವೆ. 1ನೇ ವಾರ್ಡ್‌ಗೆ ಮುಳಿಯಾಲ, ಸಾಯ, ಕೂಟೇಲು ಪ್ರದೇಶಗಳು ಸೇರುತ್ತವೆ. 2ನೇ ವಾರ್ಡ್‌ಗೆ ಬಾಕಿಲಪದವು, ಚೆರಾ, ಚವರ್ಕಾಡು ಸೇರಿವೆ. ಈ ಎರಡು ವಾರ್ಡ್‌ಗಳಿಗೆ ರಸ್ತೆ ಸಂಪರ್ಕ ಇರುವುದು ಕರ್ನಾಟಕದಿಂದ ಅಂದರೆ, ಅಡ್ಯನಡ್ಕದಿಂದ. ಅಲ್ಲಿಂದ ಮುಖ್ಯರಸ್ತೆ (ಕಲ್ಲಡ್ಕ-ಕಾಞಂಗಾಡ್‌ ಹೆದ್ದಾರಿ) ಮೂಲಕ ಉಕ್ಕುಡ, ವಿಟ್ಲ ಅಥವಾ ಅತ್ತ ಪೆರ್ಲ, ಬದಿಯಡ್ಕಕ್ಕೆ ಸಂಚರಿಸಬಹುದು.

ಈ ಎರಡು ವಾರ್ಡ್‌ಗಳ ನಾಗರಿಕರಿಗೆ ಎಲ್ಲ ರೀತಿಯ ಸವಲತ್ತು ಇರುವುದು ಕೇರಳದಲ್ಲಿ. ಗ್ಯಾಸ್‌ ಹಾಗೂ ಪಡಿತರಕ್ಕೆ ಮುಖ್ಯರಸ್ತೆಗೆ ಬಂದು 4 ಕಿ.ಮೀ. ಸಾಗಿ ಪೆರ್ಲಕ್ಕೆ ತೆರಳಬೇಕು. ಎಣ್ಮಕಜೆ ಗ್ರಾಮ ಪಂಚಾಯ್ತಿ ಕಚೇರಿ ಇರುವುದು ಪೆರ್ಲದಲ್ಲಿ. ಇತರೆ ಕಚೇರಿ ಕೆಲಸಕ್ಕೆ 40 ಕಿ.ಮೀ. ದೂರದಲ್ಲಿ ಮಂಜೇಶ್ವರ ತಾಲೂಕು, ಜಿಲ್ಲಾ ಕೇಂದ್ರವಾದರೆ, 50 ಕಿ.ಮೀ. ದೂರದ ಕಾಸರಗೋಡಿಗೆ ಹೋಗಬೇಕು. ಆದರೆ ಲಾಕ್‌ಡೌನ್‌ ಕಾರಣಕ್ಕೆ ಅಂತರ್‌ ರಾಜ್ಯ ಸಂಚಾರಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಸಾರಡ್ಕದಲ್ಲಿ ಗೇಟು ಅಳವಡಿಸಿ ಸಂಚಾರ ಬಂದ್‌ ಮಾಡಲಾಗಿದೆ.

ಜನತೆ ಅತಂತ್ರ ಸ್ಥಿತಿ:

ವಿದ್ಯುತ್‌ ಲೈನ್‌ ದುರಸ್ತಿಗೆ ಈಗ ಲೈನ್‌ಮೇನ್‌ ಬರುವಂತಿಲ್ಲ. ಕರ್ನಾಟಕದಲ್ಲಿ ಹಾಲು ಸಂಗ್ರಹಿಸಿ, ಕೇರಳಕ್ಕೆ ಸಾಗಿಸಬೇಕಾದರೆ, ಸಾರಡ್ಕ ಚೆಕ್‌ಪೋಸ್ಟ್‌ನಲ್ಲಿ ಕ್ಯಾನ್‌ ಇಳಿಸಿ ಕೈಯಿಂದ ಗಡಿ ದಾಟಿಸಿ, ಬಳಿಕ ಅಲ್ಲಿಂದ ಕೇರಳದ ವಾಹನದಲ್ಲಿ ತೆಗೆದುಕೊಂಡು ಸಾಗಿಸಬೇಕು.

ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಖಾಲಿಯಾದರೂ ವಾಹನ ಗಡಿ ದಾಟಿ ಬರುವಂತಿಲ್ಲ. ಉಚಿತ ರೇಷನ್‌ ಸೌಲಭ್ಯವನ್ನು ಸರ್ಕಾರ ಘೋಷಿಸಿದರೂ ಪಡೆಯಲು ಅಡ್ಕಸ್ಥಳಕ್ಕೆ ತೆರಳಲು ಗಡಿ ಅಡ್ಡಿ. ಈ ಎರಡು ವಾರ್ಡ್‌ಗಳ ಹಿಂಭಾಗದಲ್ಲಿ ಶಿರಿಯಾ ಹೊಳೆ ಹರಿಯುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿದರೆ, ಬೇಸಿಗೆಯಲ್ಲಿ ಅಣೆಕಟ್ಟೆಯಿಂದ ಹೊಳೆ ದಾಟಲು ಸಾಧ್ಯವಾಗುತ್ತಿಲ್ಲ.

ಸೈನ್ಯಕ್ಕೆ ಸೇರಬೇಕೆಂಬ ಆಸೆ : ಮೋದಿಗೆ ಪತ್ರ ಬರೆದ ಬಾಲಕಿ

ಈ ವಾರ್ಡ್‌ಗಳಿಗೆ ಸಮೀಪದ ಪಟ್ಟಣ ಅಡ್ಯನಡ್ಕ ಆಗಿರುವುದರಿಂದ ಸದ್ಯ ಆಹಾರಕ್ಕೆ ಸಮಸ್ಯೆಯಾಗಿಲ್ಲ. ಕೇರಳಕ್ಕಿಂತ ವಿಟ್ಲ, ಬಂಟ್ವಾಳ ಇವರಿಗೆ ಅತ್ಯಂತ ಸಮೀಪದ ಪ್ರದೇಶವಾದರೂ ಕಚೇರಿ ವ್ಯವಹಾರಗಳಿಗೆ ಕೇರಳವನ್ನೇ ಆಶ್ರಯಿಸಬೇಕಾಗುತ್ತದೆ.

ಅನಾರೋಗ್ಯವಾದರೆ ಚಿಕಿತ್ಸೆ ಇಲ್ಲ:

ಈ ವಾರ್ಡ್‌ಗಳ ಜನತೆಗೆ ತೀವ್ರತರ ಅನಾರೋಗ್ಯ ತಲೆದೋರಿದರೆ, ದೇವರೇ ಕಾಪಾಡಬೇಕು ಎನ್ನುವ ಪರಿಸ್ಥಿತಿ ಇದೆ. ಅಡ್ಯನಡ್ಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ, ಇವರಲ್ಲಿರುವ ದಾಖಲೆಗಳು ಕೇರಳದ್ದು. ಹಾಗಾಗಿ ಬೇರೆ ರಾಜ್ಯದವರಿಗೆ ಇಲ್ಲಿ ಚಿಕಿತ್ಸೆ ನೀಡುವುದಿಲ್ಲ. ಇನ್ನು ಕೇರಳಕ್ಕೆ ತೆರಳಲು ಸಾರಡ್ಕ ಚೆಕ್‌ಪೋಸ್ಟ್‌ ಬಂದ್‌ನಿಂದ ತೊಂದರೆಯಾಗಿದೆ.

ರಾಜಕಾಣಿಗಳು ಬರೋದೇ ಇಲ್ಲ!

ಎಣ್ಮಕಜೆ ಗ್ರಾಮದ 1 ಮತ್ತು 2ನೇ ವಾರ್ಡ್‌ಗೆ ಈವರೆಗೆ ರಾಜಕಾರಣಿಗಳು ಕಾಲಿಟ್ಟಿಲ್ಲ. ಕರ್ನಾಟಕದ ದ.ಕ. ಜಿಲ್ಲೆಯ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿಗೆ ಭೇಟಿ ನೀಡಿ ಪ್ರಯೋಜನವಿಲ್ಲ. ಆದರೆ ಕಾಸರಗೋಡು, ಮಂಜೇಶ್ವರದ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ತಿರುಗಿಯೂ ಇತ್ತ ನೋಡುವುದಿಲ್ಲ. ಅಚ್ಚರಿಯ ಸಂಗತಿ ಎಂದರೆ, ಕಾಂಗ್ರೆಸ್‌, ಕಮ್ಯುನಿಸ್ಟ್‌ ಅಥವಾ ಬಿಜೆಪಿಯಾಗಲಿ, ಯಾರೂ ಕೂಡ ಚುನಾವಣೆ ವೇಳೆಯೂ ಈ ವಾರ್ಡ್‌ಗಳತ್ತ ಸುಳಿಯುವುದಿಲ್ಲವಂತೆ. ಹಾಗಾಗಿ ಈ ವಾರ್ಡ್‌ಗಳು ಅಭಿವೃದ್ಧಿಯ ಭರವಸೆಗಳಿಂದ ದೂರ ಉಳಿದುಕೊಂಡಿವೆ. ಕನಿಷ್ಠ ಶಿರಿಯಾ ಹೊಳೆಗೆ ಬಾಕಿಲಪದವಿನಲ್ಲಿ ಸೇತುವೆ ನಿರ್ಮಿಸಿದರೆ, ಚೆಕ್‌ ಪೋಸ್ಟ್‌ ಬಂದ್‌ ಮಾಡಿದರೂ ಪೆರ್ಲ ಸಂಪರ್ಕಕ್ಕೆ ಸುಲಭವಾಗುತ್ತದೆ ಎನ್ನುವುದು ಸ್ಥಳೀಯರ ಬೇಡಿಕೆ.

ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಲೋಕಾಯುಕ್ತಕ್ಕೆ ಕಾಂಗ್ರೆಸ್‌ ದೂರು

ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರ ಜೊತೆ ಊರಿನವರು ಮಾತನಾಡಿದ್ದು, ಶಿರಿಯಾ ಹೊಳೆಗೆ ಸೇತುವೆ ನಿರ್ಮಿಸುವುದೇ ಇದಕ್ಕೆ ಇರುವ ಪರಿಹಾರ. ಆದರೆ ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವುದೇ ನೋವಿನ ವಿಚಾರ ಎಂದು ಸಾಮಾಜಿಕ ಹೋರಾಟಗಾರ ಕೇಶವ ಪ್ರಸಾದ್‌ ಕೂಟೇಲು ತಿಳಿಸಿದ್ದಾರೆ

-ಆತ್ಮಭೂಣ್‌