ಉಡುಪಿ(ಮೇ 28): ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟೆಯಲ್ಲಿ ಹೂಳೆತ್ತುವ ನೆಪದಲ್ಲಿ ಮಂಗಳೂರಿನ ಗುತ್ತಿಗೆ ಸಂಸ್ಥೆ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

"

ಈ ಹೂಳೆತ್ತುವ ಕಾಮಗಾರಿ ನಿರ್ವಹಿಸಲು ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಟೆಂಡರ್‌ನಲ್ಲಿ ಕಾಮಗಾರಿ ಬಗ್ಗೆ ನಿಗಾವಹಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುದಾನದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಚೆಕ್‌ಪೋಸ್ಟ್‌ ನಿರ್ಮಿಸಿ, ಸಿಸಿ ಟಿ.ವಿ. ಮತ್ತು ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂಬ ಷರತ್ತುಗಳಿದ್ದವು. ಆದರೆ ಸಮಿತಿ ಅಧ್ಯಕ್ಷರು, ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಭಾವಿಗಳು ಶಾಮಿಲಾಗಿ ಟೆಂಡರ್‌ ಷರತ್ತು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಕುರುಗೋಡು: ಟಿಪ್ಪರ್‌-ಟಾಟಾ ಏಸ್‌ ಡಿಕ್ಕಿ, 15 ಜನ​ರಿಗೆ ಗಾಯ

ಬಜೆ ಅಣೆಕಟ್ಟಿನಿಂದ ಶಿರೂರುವರೆಗೆ ಹೂಳೆತ್ತುವ ನೆಪದಲ್ಲಿ ಮರಳನ್ನು ತೆಗೆದು ಕಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಸಂಗ್ರಹಿಸಿದ್ದಾರೆ. ಈಗಾಗಲೇ ಕೋಟ್ಯಂತರ ರು. ಮೌಲ್ಯದ ಸಾವಿರಾರು ಲೋಡ್‌ ಮರಳನ್ನು ಅಕ್ರಮ ಸಾಗಾಟ ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ರಾಜಧನ ವಂಚನೆ ಮಾಡಿದ್ದಾರೆ ಎಂದು ದೂರಿದರು.

ಈ ಹಗರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಶೇಖರಿಸಿಟ್ಟಬೃಹತ್‌ ಪ್ರಮಾಣದ ಮರಳನ್ನು ಮುಟ್ಟುಗೋಲು ಹಾಕಬೇಕು. ಕೋಟ್ಯಂತರ ರು. ಮೌಲ್ಯದ ಈ ಹಗರಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ನಗರಸಭಾ ಸದಸ್ಯ ರಮೇಶ್‌ ಕಾಂಚನ್‌, ವಿಜಯ್‌ ಪೂಜಾರಿ, ಮಾಜಿ ಸದಸ್ಯ ಜನಾರ್ದನ ಭಂಡಾರ್ಕರ್‌ ಉಪಸ್ಥಿತರಿದ್ದರು.