ಮಂಗಳೂರು(ಆ.24): ಮಳೆಗಾಲದಲ್ಲಿ ಚಾರ್ಮಾಡಿ ರಸ್ತೆಯಲ್ಲಿ ಒಡಾಡುವುದು ಕಣ್ಣಿಗೆ, ಮನಸಿಗೆ ಮುದ ನೀಡಿದರೆ ಇದೀಗ ಜನರಿಗೆ ಕುಸಿತದ ಭೀತಿ ಕಾಡಿದೆ. ಘಾಟ್ ಪ್ರದೇಶದಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದ್ದು, ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ.

ಭಾರಿ ಮಳೆಯಿಂದಾಗಿ ಒಂದು ತಿಂಗಳಿನಿಂದ ಚಾರ್ಮಾಡಿಘಾಟ್‌ ರಸ್ತೆಯಲ್ಲಿ ಭಾರಿ ಭೂಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆಯೇ ಹತ್ತಕ್ಕೂ ಹೆಚ್ಚು ಮಣ್ಣು ತೆಗೆಯುವ ಯಂತ್ರಗಳು ಹಾಗೂ ಹತ್ತಾರು ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿದ್ದು ಮಣ್ಣು ತೆಗೆಯುವ ಕಾರ‍್ಯ ಬಹುತೇಕ ಪೂರ್ಣಗೊಂಡಿದೆ. ಕೆಲವೆಡೆ ಬಂಡೆಕಲ್ಲುಗಳು ಉರುಳಿ ಬಿದ್ದಿದ್ದು ಅವುಗಳನ್ನು ಒಡೆಯುವ ಕಾರ್ಯ ಮಾಡಲಾಗುತ್ತಿದೆ.

ಎಲ್ಲಿ ನೋಡಿದರಲ್ಲಿ ಭೂ ಕುಸಿತ:

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ಒಂದನೇ ತಿರುವಿನಿಂದ ಆರಂಭಿಸಿ ಕೊಟ್ಟಿಗೆಹಾರದಲ್ಲಿನ ಮಲಯಮಾರುತದ ವರೆಗೂ ಅಲ್ಲಲ್ಲಿ ಗುಡ್ಡಜರೆದು ಬಿದ್ದಿದೆ. ಸಾಮಾನ್ಯವಾಗಿ ಘಾಟಿಯಲ್ಲಿ ಹತ್ತನೇ ತಿರುವಿನಿಂದ ಕೆಳಗೆ ಭೂಕುಸಿತಗಳಾಗುತ್ತಿದ್ದವು. ಆದರೆ ಈ ಬಾರಿ ಕೆಳಗಡೆ ಆಗಿರುವುದಕ್ಕಿಂತಲೂ ಹೆಚ್ಚಾಗಿ ಮೇಲ್ಭಾಗದಲ್ಲಿ ಭೂ ಕುಸಿತಗಳಾಗಿವೆ. ಕೆಲ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿದ್ದು ರಸ್ತೆಯ ಬಹುಭಾಗವನ್ನೇ ಕಸಿದುಕೊಂಡಿದೆ.

ರಸ್ತೆಯ ಮೇಲೆ ಮಣ್ಣು:

ಬೆಟ್ಟದ ಮೇಲಿನ ಜಲಪಾತಗಳು ಕೆಲವು ಕಣ್ಮರೆಯಾಗಿವೆ. ಅಣ್ಣಪ್ಪ ಬೆಟ್ಟದಿಂದ ಮಲೆಯ ಮಾರುತದ ವರೆಗಿನ ಪ್ರದೇಶಗಳಲ್ಲಿ ಶೇ. 90 ಭಾಗದಲ್ಲಿಯೂ ರಸ್ತೆಯ ಮೇಲೆ ಮಣ್ಣು ಕುಸಿದು ಬಿದ್ದಿದೆ. ಕಿರು ಸೇತುವೆಗಳು ಬಿರುಕು ಬಿಟ್ಟಿದೆ, ಮೋರಿಗಳು ನೀರುಪಾಲಾಗಿವೆ.

ಮಂತ್ರಿ ಸ್ಥಾನ ಸಿಗದ ಶಾಸಕರ ಜೊತೆ ಮಾತನಾಡುತ್ತೇವೆ: ಸಚಿವ ಕೋಟ

ಹೆಚ್ಚಿನ ಪ್ರದೇಶಗಳಲ್ಲಿ ತಡೆಗೋಡೆಗಳಿಗೆ ಹಾನಿಯಾಗಿರುವುದು ಕಂಡು ಬರುತ್ತಿದೆ. ಸುಮಾರು 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಸಣ್ಣ ನೀರಿನ ಹರಿವಿದ್ದ ಜಾಗದಲ್ಲಿ ದೊಡ್ಡ ಹಳ್ಳಗಳೇ ಸೃಷ್ಟಿಯಾಗಿದೆ. ಲೆಕ್ಕ ಮಾಡಲು ಸಾಧ್ಯವಿಲ್ಲದಷು ಸಣ್ಣ ಮಟ್ಟದ ಭೂಕುಸಿತಗಳಾಗಿರುವುದು ಘಾಟಿಯಲ್ಲಿ ಸಂಚರಿಸಿದರೆ ಕಂಡು ಬರುತ್ತದೆ.

ಸಮರೋಪಾದಿಯಲ್ಲಿ ದುರಸ್ತಿ:

ಎರಡು ಜಿಲ್ಲೆಗಳನ್ನು ಜೋಡಿಸುವ ಹೆದ್ದಾರಿ ಇದಾಗಿರುವುದರಿಂದ ಇದೀಗ ಸಮರೋಪಾದಿಯಲ್ಲಿ ರಸ್ತೆಯನ್ನು ಸರಿಪಡಿಸುವ ಕಾರ‍್ಯ ನಡೆಯುತ್ತಿದೆ. ತಡೆಗೋಡೆಗಳು ಕುಸಿದು ಹೋಗಿರುವ ಪ್ರದೇಶಗಳಲ್ಲಿ ಮೇಲಿನಿಂದ ಕುಸಿದು ಬಿದ್ದಿರುವ ಮಣ್ಣನ್ನೇ ತಡೆಗೋಡೆಯಂತೆ ಇಡಲಾಗಿದೆ. ಸುಮಾರು ಐದಕ್ಕೂ ಹೆಚ್ಚು ಕಡೆ ರಸ್ತೆ ಕೊಚ್ಚಿ ಹೋಗಿದ್ದು ಅಪಾಯಕಾರಿ ಸ್ಥಿತಿಯಿದೆ. ಇಲ್ಲಿ ಉಳಿದಿರುವ ರಸ್ತೆಯ ಮೇಲೆ ಸಿಮೆಂಟ್‌ ಇಟ್ಟಿಗೆಯಿಂದ ತಡೆಗೋಡೆಯನ್ನು ಕಟ್ಟಲಾಗಿದೆ.

ರಸ್ತೆಯನ್ನು ಭದ್ರಪಡಿಸುವ ಯಾವುದೇ ಕಾರ‍್ಯಗಳನ್ನು ಈ ವರೆಗೆ ಮಾಡಲಾಗಿಲ್ಲ. ಕೆಲವೆಡೆ ಕೇವಲ ಒಂದು ವಾಹನ ಕಷ್ಟಪಟ್ಟು ಹೋಗಲು ಮಾತ್ರ ಅವಕಾಶವಿದ್ದು ದೊಡ್ಡ ವಾಹನಗಳ ಸಂಚಾರ ಅಸಾಧ್ಯವಾಗಿದೆ.

ಘಾಟಿಯ ಮೇಲ್ಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಪ್ರದೇಶದಲ್ಲಿ ವಾಹನ ಸಂಚಾರ ಈಗಲೂ ಅತ್ಯಂತ ಅಪಾಯಕಾರಿಯಾಗಿಯೇ ಇದೆ. ಹಲವೆಡೆ ಭೂ ಕುಸಿತವಾದೆಡೆಯಲ್ಲಿ ನೀರು ಹರಿಯುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿ ಮರಗಳು ಬಂಡೆಗಳು ಇವೆ. ಅವುಗಳನ್ನು ತೆರವುಗೊಳಿಸಿದರೆ ಮತ್ತಷ್ಟುಕುಸಿತದ ಭಯವಿದ್ದು ಅದನ್ನು ಹಾಗೆಯೇ ಬಿಡಲಾಗಿದೆ.

ಅವೈಜ್ಞಾನಿಕ ಕಾಮಗಾರಿ:

ಭೂ ಕುಸಿತದಿಂದಾಗಿ ಭಾರಿ ಪ್ರಮಾಣದಲ್ಲಿ ಮಣ್ಣು ಮರಗಳು ಹಾಗೂ ಕಲ್ಲುಗಳು ಘಾಟಿ ರಸ್ತೆಯಲ್ಲಿ ಶೇಖರಣೆಯಾಗಿತ್ತು. ಇದೀಗ ರಸ್ತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅದೆಲ್ಲವನ್ನೂ ನೇರವಾಗಿ ಘಾಟಿಯ ಕೆಳಭಾಗಕ್ಕೆ ಸುರಿಯಲಾಗಿದೆ. ಈಗಾಗಲೆ ಘಾಟಿಯ ಕೆÙಭಾಗದಲ್ಲಿ ಕುಸಿತಗಳಾಗಿದ್ದು ಇದೀಗ ಘಾಟಿಯಿಂದ ಕೆಳಕ್ಕೆ ತಳ್ಳಿರುವ ಮರಗಳು ಕಲ್ಲು ಮಣ್ಣುಬೆಟ್ಟಪ್ರದೇಶಗಳಲ್ಲಿ ಅಲ್ಲಲ್ಲಿ ತಡೆದು ನಿಂತಿದ್ದು ಮಳೆ ಜೋರಾದರೆ ಮತ್ತೆ ನದಿಗಳ ಮೂಲಕ ಕೆಳ ಪ್ರದೇಶಗಳಿಗೆ ಹರಿಯಲಿದೆ. ಇದು ಇನ್ನಷ್ಟುಅಪಾಯಕಾರಿಯಾಗಿದೆ.

ಮಂಗಳೂರು-ಬೆಂಗಳೂರು ರೈಲು ಆ. 25ರ ವರೆಗೂ ಇಲ್ಲ

ಅಂತಿಮ ನಿರ್ಧಾರವಷ್ಟೇ ಬಾಕಿ: ಇದೀಗ ಬಹುತೇಕ ಪ್ರದೇಶಗಳಲ್ಲಿ ಮಣ್ಣನ್ನು ತೆರವುಗೊಳಿಸುವ ಕಾರ‍್ಯ ಪೂರ್ಣಗೊಂಡಿದೆ. ಮುಂದಿನ ತಿಂಗಳಿನಿಂದ ಸಣ್ಣವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡುವ ಗುರಿಯೊಂದಿಗೆ ಈ ಕಾರ‍್ಯವನ್ನು ಮಾಡಲಾಗಿದೆ. ಆದರೆ ಹಿರಿಯ ಅಧಿಕಾರಿಗಳು ಘಾಟಿ ರಸ್ತೆಯ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಬೇಕಾಗಿದೆ ಶಾಶ್ವತ ಪರಿಹಾರ: ರಸ್ತೆಯನ್ನು ಉಳಿಸಿಕೊಳ್ಳಬೇಕಾದರೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಬಹುಕೋಟಿ ನೀರಿನಲ್ಲಿ ಕೊಚ್ಚಿ ಹೋಗಲಿದೆ ಎನ್ನುತ್ತಾರೆ ಸ್ಥಳೀಯ ಜನರು.

ಇನ್ನಷ್ಟುದುರ್ಬಲ ಗೊಳ್ಳಲಿದೆ ಘಾಟಿ:

ರಸ್ತೆಯನ್ನು ಸರಿಪಡಿಸಲು ಇನ್ನಷ್ಟುಅಗೆಯುವ, ಬಗೆಯುವ ಕಾರ್ಯ ನಡೆಯುತ್ತದೆ. ಇದರಿಂದ ಘಾಟಿ ಇನ್ನಷ್ಟುದುರ್ಬಲಗೊಳ್ಳುತ್ತದೆ ಎನ್ನುತ್ತಾರೆ ಪರಿಸರ ತಜ್ಞರು. ಹತ್ತು ವರ್ಷಗಳ ಹಿಂದೆಯೇ ಚಾರ್ಮಾಡಿ ಘಾಟಿ ರಸ್ತೆಯ ಕೆಲವು ಕಡೆ ಅಲ್ಲಲ್ಲಿ ಗುಡ್ಡ ಕುಸಿತ ಆಗುತ್ತಿತ್ತು. ಆ ಸಂದರ್ಭ ಹೈದರಾಬಾದಿನ ಕಂಪೆನಿಯೊಂದು ಜರ್ಮನ್‌ತಂತ್ರಜ್ಞಾನ ಬಳಸಿ, ವಿಶೇಷ ಪರಿಣತರಿಂದ, ವಿಶಿಷ್ಟವಾದ ತಡೆಗೋಡೆಗಳನ್ನು ನಿರ್ಮಾಣ ಮಾಡಿತ್ತು. ಅವರು ನಿರ್ವಹಿಸಿದ ಕಾಮಗಾರಿಗಳು ಯಾವುದೇ ಕುಸಿತವಾಗದೆ ಭದ್ರವಾಗಿವೆ.

-ದೀಪಕ್‌ ಅಳದಂಗಡಿ