ಮಂಗಳೂರು(ಆ.23): ಹಾಸನ - ಮಂಗಳೂರು ರೈಲ್ವೆ ಮಾರ್ಗದಲ್ಲಿ ಸುಬ್ರಹ್ಮಣ್ಯ ರೋಡ್‌ ಹಾಗೂ ಸಕಲೇಶಪುರ ಮಧ್ಯೆ ಉಂಟಾಗಿರುವ ಭೂಕುಸಿತಗಳಿಂದಾಗಿ ಸಿರಿಬಾಗಿಲು ಬಳಿ ಹಳಿ ದುರಸ್ತಿ ಕಾರ್ಯ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸೇವೆಗಳನ್ನು ಆ.25ರ ವರೆಗೂ ನಿರ್ಬಂಧಿಸಲಾಗಿದೆ.

ಈ ಮಾರ್ಗದಲ್ಲಿ ಭೂಕುಸಿತದ ಬಳಿಕ 23ರ ವರೆಗೆ ರೈಲು ಸಂಚಾರ ನಿಷೇಧಿಸಲಾಗಿತ್ತು. ಕಳೆದ 10ಕ್ಕೂ ಹೆಚ್ಚು ದಿನಗಳಿಂದ ಈ ಮಾರ್ಗದಲ್ಲಿ ರೈಲು ಸಂಚರಿಸುತ್ತಿಲ್ಲ. ಗುಡ್ಡದಿಂದ ಜಾರಿ ಹಳಿ ಮೇಲೆ ಬಿದ್ದ ಮಣ್ಣಿನ ರಾಶಿಯ ತೆರವು ಕಾರ್ಯದಲ್ಲಿ ರೈಲ್ವೆ ಸಿಬ್ಬಂದಿ ತೊಡಗಿದ್ದಾರೆ. ಹಾಗಿದ್ದರೂ ಇನ್ನೂ ಮೂರು ಕಡೆಗಳಲ್ಲಿ ಹಳಿ ಕೊಚ್ಚಿ ಹೋಗಿದ್ದನ್ನು ಸರಿಪಡಿಸುವ ಕೆಲಸ ಬಾಕಿ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಲಯ ಮತ್ತು ವಿಭಾಗೀಯ ಕಚೇರಿಗಳ ಹಿರಿಯ ಅಧಿಕಾರಿಗಳ ನಿಗಾದಲ್ಲಿ ಕೆಲಸ ನಡೆದಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಯಾವುದೇ ರೀತಿಯ ಹವಾಮಾನ ವೈಪರೀತ್ಯ ಉಂಟಾಗದಿದ್ದಲ್ಲಿ ಈಗಿನ ಲೆಕ್ಕಾಚಾರಗಳ ಪ್ರಕಾರ ಆ.25ರಂದು ರೈಲು ಸೇವೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ.

ರದ್ದಾಗಿರುವ ರೈಲುಗಳು:

ಆ.24ರಂದು ನಂ.16516 ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು, ಆ.23, 24ರಂದು ಕಣ್ಣೂರು/ಕಾರವಾರ-ಕೆಎಸ್‌ಆರ್‌ ಬೆಂಗಳೂರು ಮಧ್ಯೆ ಸಂಚರಿಸಬೇಕಾಗಿದ್ದ ನಂ.16518/16524 ರೈಲು, ನಂ 16511/16513 ಕಣ್ಣೂರು/ಕಾರವಾರ-ಬೆಂಗಳೂರು ಕೆಎಸ್‌ಆರ್‌ ಮಧ್ಯೆ ಸಂಚರಿಸಬೇಕಾಗಿದ್ದ ರೈಲು ರದ್ದಾಗಿವೆ. 25ರಂದು ಯಶವಂತಪುರದಿಂದ ಹೊರಡಲಿದ್ದ ನಂ.16575 ಯಶವಂತಪುರ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು, 16585 ಯಶವಂತಪುರ ಮಂಗಳೂರು ಎಕ್ಸ್‌ಪ್ರೆಸ್‌ ರೈಲುಗಳು ಪೂರ್ತಿಯಾಗಿ ರದ್ದು. ಆ.25ರ ನಂ.16514 ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಕಾರವಾರ-ಮಂಗಳೂರು ಮಧ್ಯೆ ರದ್ದಾಗಿದೆ ಎಂದು ಮೈಸೂರು ರೈಲ್ವೆ ವಿಭಾಗ ಪ್ರಕಟಣೆ ತಿಳಿಸಿದೆ.

ಚಿಕ್ಕಮಗಳೂರು: ಅತಿವೃಷ್ಟಿ, ಕಾಫಿಗೆ ಕವಡೆ ಕಾಸಿನ ಪರಿಹಾರ