ಮಂಗಳೂರು(ಆ.23): ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವವರನ್ನು ಕರೆದು ಮಾತನಾಡಿಸುತ್ತೇವೆ. ಅವರ ಅಸಮಾಧಾನವನ್ನು ಬಗೆಹರಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲೂ ಅನುಭವಿ ಹಾಗೂ ಸಾಮರ್ಥ್ಯ ಹೊಂದಿರುವ ಶಾಸಕರಿದ್ದಾರೆ. ಅಂಗಾರ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗೆ ನಾನು ಮನವಿ ಮಾಡುತ್ತೇನೆ. ಈಗಿನ ಸನ್ನಿವೇಶದಲ್ಲಿ ಸಚಿವ ಸಂಪುಟವನ್ನು ಭರ್ತಿಗೊಳಿಸಿಲ್ಲ. ಕೇವಲ 17 ಮಂದಿಗಷ್ಟೆ ಸಚಿವ ಸ್ಥಾನ ನೀಡಲಾಗಿದೆ. ಅತೃಪ್ತರಿಗೆ ಇನ್ನೂ ಅವಕಾಶ ಇದೆ. ಅವರ ನೋವು, ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು.

ನಳಿನ್‌ ಏನೆಂದು ತೋರಿಸುತ್ತಾರೆ:

ನಳಿನ್‌ ಕುಮಾರ್‌ ಕಟೀಲ್‌ ಅವರು ದ.ಕ. ಜಿಲ್ಲೆ ಬಿಟ್ಟು ಹೊರಗೆ ಹೋಗಿಲ್ಲ ಎಂಬ ಶಾಸಕ ಯತ್ನಾಳ್‌ ಟೀಕೆಗೆ ಪ್ರತಿಕ್ರಿಯೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ, ನಳಿನ್‌ ಕುಮಾರ್‌ ರಾಜ್ಯಾಧ್ಯಕ್ಷರಾಗಿ ಅವರ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಡಲಿದ್ದಾರೆ. ರಾಜ್ಯದ 178 ತಾಲೂಕು ಹಾಗೂ 224 ಅಸೆಂಬ್ಲಿ ಕ್ಷೇತ್ರಗಳಲ್ಲಿ ಓಡಾಟ ನಡೆಸಿ ಪಕ್ಷವನ್ನು ಬಲವಾಗಿ ಸಂಘಟಿಸಿ ಜನರಿಗೆ ಪಕ್ಷವನ್ನು ಅರ್ಥಮಾಡಿಸಿಕೊಡುವ ಶಕ್ತಿ ನಳಿನ್‌ಗೆ ಇದೆ ಎಂದರು.

ಮಂಗಳೂರು-ಬೆಂಗಳೂರು ರೈಲು ಆ. 25ರ ವರೆಗೂ ಇಲ್ಲ

ಸಂಘ ಪರಿವಾರದ ಪ್ರಚಾರಕರಾಗಿ ತಳಮಟ್ಟದಿಂದ ಮಾದರಿ ಕೆಲಸ ಮಾಡಿದ ನಳಿನ್‌ ಕುಮಾರ್‌ ಅವರು ಅಂತಹ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಟೀಕಿಸುವವರಿಗೆ ತೆಪ್ಪಗಿರುವಂತೆ ನಳಿನ್‌ ಕುಮಾರ್‌ ಪಕ್ಷ ಸಂಘಟನೆಯಲ್ಲಿ ಸಾಧನೆ ಮಾಡಿ ತೋರಿಸಲಿದ್ದಾರೆ. ನಳಿನ್‌ ಕುಮಾರ್‌ಗೆ ಬೆಂಬಲವಾಗಿ ನಾವು ಇರಲಿದ್ದೇವೆ ಎಂದರು.