ರಾಯಚೂರಲ್ಲಿ ದಿನೇ ದಿನೆ ಮಿತಿ ಮೀರುತ್ತಿದೆ ಬೀದಿನಾಯಿ ಕಾಟ: ಜಿಲ್ಲಾಡಳಿತ, ನಗರಸಭೆ ನಿರ್ಲಕ್ಷ್ಯಕ್ಕೆ ಹಿಡಿಶಾಪ!
ಹಗಲು-ರಾತ್ರಿ ಎನ್ನದೇ ಕಂಡ ಕಂಡಲ್ಲಿ ಕಾಣುವ ಬೀದಿ ನಾಯಿಗಳ ಹಿಂಡು ಎಲ್ಲೆಡೆ ಸಂಚರಿಸುತ್ತಿದ್ದು, ಅವುಗಳು ಯಾವಾಗ ಯಾವ ರೀತಿಯಾಗಿ ವರ್ತಿಸುತ್ತವೆ ಎನ್ನುವ ಆತಂಕದಲ್ಲಿ ಮಂದಿ ಜೀವಿಸುವಂತಾಗಿದೆ. ರಾತ್ರಿ ಸಮಯದಲ್ಲಿ ದೂರದ ಊರುಗಳಿಂದ ರೈಲು, ಬಸ್ ಮುಖಾಂತರ ಬಂದವರು ಮನೆಗಳಿಗೆ ತೆರಳಲು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.
ರಾಮಕೃಷ್ಣ ದಾಸರಿ
ರಾಯಚೂರು(ಜ.01): ಜನ ವಾಸ ಮಾಡುವ ಪ್ರದೇಶದಲ್ಲಿ ರಸ್ತೆ, ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ, ಸಾರ್ವಜನಿಕ ಶೌಚಾಲಯಗಳು, ಅಕ್ರಮ ಕಟ್ಟಡಗಳು, ಸರ್ಕಾರಿ ಜಾಗದ ಒತ್ತುವರಿ ಹೀಗೆ ಹಲವಾರು ಸಮಸ್ಯೆಗಳು ಇರುವುದು ಸಹಜ ಆದರೆ ರಾಯಚೂರು ನಗರದಲ್ಲಿ ಮಾತ್ರ ಇವುಗಳ ಜೊತೆಗೆ ಬೀದಿ ನಾಯಿಗಳ ಹಾವಳಿಯೂ ಮೂಲಭೂತ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನಗರದ ಪ್ರತಿ ವಾರ್ಡ್, ಬಡಾವಣೆ, ಗಲ್ಲಿ-ಮೊಹಲ್ಲಾಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬೀದಿ ನಾಯಿಗಳು ತಿರುಗಾಡುತ್ತಿದ್ದು, ಇವುಗಳ ಕಾಟದಿಂದ ಜನಸಾಮಾನ್ಯರು ನೆಮ್ಮದಿಯನ್ನು ಕಳೆದುಕೊಳ್ಳುವ ದುಸ್ಥಿತಿ ನಗರದಲ್ಲಿ ನಿರ್ಮಾಣಗೊಂಡಿದೆ.
ಆತಂಕದಲ್ಲಿ ಮಂದಿ:
ಹಗಲು-ರಾತ್ರಿ ಎನ್ನದೇ ಕಂಡ ಕಂಡಲ್ಲಿ ಕಾಣುವ ಬೀದಿ ನಾಯಿಗಳ ಹಿಂಡು ಎಲ್ಲೆಡೆ ಸಂಚರಿಸುತ್ತಿದ್ದು, ಅವುಗಳು ಯಾವಾಗ ಯಾವ ರೀತಿಯಾಗಿ ವರ್ತಿಸುತ್ತವೆ ಎನ್ನುವ ಆತಂಕದಲ್ಲಿ ಮಂದಿ ಜೀವಿಸುವಂತಾಗಿದೆ. ರಾತ್ರಿ ಸಮಯದಲ್ಲಿ ದೂರದ ಊರುಗಳಿಂದ ರೈಲು, ಬಸ್ ಮುಖಾಂತರ ಬಂದವರು ಮನೆಗಳಿಗೆ ತೆರಳಲು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಮುಖ್ಯ ರಸ್ತೆ ಮೇಲೆ ನೂರಾರು ನಾಯಿಗಳು ಬಂದು ವಾಹನ ಸವಾರರ ಹಿಂದೆ ಬಿದ್ದು ಇದರಿಂದಾಗಿ ವೇಗವಾಗಿ ಹೋಗಿ ಗಾಯಗೊಂಡಿರುವ ಘಟನೆಗಳು ನಿರಂತರ ವಾಗಿ ನಡೆಯುತ್ತಿವೆ. ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳನ್ನು ಕಂಡು ಬೀದಿ ನಾಯಿಗಳು ಅರಚುವುದು, ಹಿಂದೆ ಬೀಳುವ ಸಂಘಟನೆಗಳು ಸಹ ಅಲ್ಲಲ್ಲಿ ಘಟಿಸುತ್ತಿದ್ದು, ಮಹಿಳೆ-ಮಕ್ಕಳು, ವೃದ್ಧರು ಹೊರಗಡೆ ತಿರುಗಾಡಲು ಬೀದಿ ನಾಯಿಗಳಿಗೆ ಬೆದರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ವರದಕ್ಷಿಣೆ ಕಿರುಕುಳ: ಊಟ ಮಾಡಲು ಕುಳಿತಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪಾಪಿ!
ಇತ್ತೀಚೆಗೆ ಶಕ್ತಿನಗರದಲ್ಲಿ ಬಾಲಕನ ಮೇಲೆ ನಾಯಿದಾಳಿ ಮಾಡಿದಾಗ ಸ್ಥಳೀಯರು ಬಿಡಿಸಿದ್ದರು. ಅಷ್ಟೇ ಅಲ್ಲದೇ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಮಹಾದೇವಿ ಎನ್ನುವ ಯುವತಿ ಕೋಮಾಸ್ಥಿತಿಗೆ ತಲುಪಿ ಮೃತಪಟ್ಟಿದ್ದು, ಇದರಿಂದ ಎಚ್ಚೆತ್ತ ನಗರಸಭೆ ನಾಮಕೇವಾಸ್ತೆ ಎನ್ನುವಂತೆ ಬೀದಿ ನಾಯಿಗಳನ್ನು ಹಿಡಿದಿದ್ದು, ಈ ಕಾರ್ಯಾಚರಣೆ ಪರಿಣಾಮಕಾರಿ ಯಾಗಿ ನಡೆಸಿಲ್ಲ ಆದ್ದರಿಂದಲೇ ನಗರದಲ್ಲಿ ದಿನೇದಿನೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಂಭೀರತೆ ಅರಿಯದ ಆಡಳಿತ:
ಬೀದಿ ನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ, ನಗರಸಭೆಯು ಪರಿಣಾ ಮಕಾರಿಯಾದ ಕ್ರಮ ವಹಿಸುತ್ತಿಲ್ಲ ಎನ್ನು ವುದು ಜನರ ಆರೋಪ, ವಾರ್ಡ್ ಬಡಾವಣೆಯ ಜನರು ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಇದೂ ಗಂಭೀರವಾಗಿದ್ದು, ಇದನ್ನರಿಯದ ಆಡಳಿತವು ಅವುಗಳ ತಡೆಗೂ ಕಠಿಣ ಕ್ರಮಜರುಗಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಂಸದ ಅಂಗಡಿಗಳಿರುವುದರಿಂಲೂ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಇದನ್ನು ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ಗುಳೆ ಹೋಗುವುದನ್ನ ತಪ್ಪಿಸಲು ರಾಯಚೂರು ಜಿ.ಪಂ. ಶತಪ್ರಯತ್ನ: ಉದ್ಯೋಗ ಖಾತ್ರಿ
ಬೀದಿ ನಾಯಿ ಹಾಗೂ ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸುವಂತೆ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಡಳಿ, ನಗರಸಭೆಗೆ ಮನವಿ ಮಾಡಿದ್ದರೂಸಹ ಯಾವುದೇ ರೀತಿಯ ನಿಯಂತ್ರಣದ ಕ್ರಮ ವಹಿಸಿಲ್ಲ, ಈ ವಿಚಾರದಲ್ಲಿ ಆರಂಭದಿಂದಲೂ ನಿರಾಸಕ್ತಿ ತೋರಿಸುತ್ತಿರುವ ಸಚಿವರು, ಶಾಸಕರು, ಜನಪ್ರತಿನಿಧಿಗಳು ಅಧಿಕಾರಿಗಳ ಕಿವಿಹಿಂಡಿ ಕೆಲಸ ಮಾಡಿಸುವಲ್ಲಿ ಸಂಪೂರ್ಣವಾಗಿ ಸೋತಿದ್ದು, ಅದರ ಪರಿಣಾಮವಾಗಿಯೇ ಬೀದಿ ನಾಯಿಗಳು ಯುದ್ಧದ ಮಾದರಿಯಲ್ಲಿ ಜನರನ್ನು ಆತಂಕಕ್ಕೆ ದೂಡುತ್ತಿವೆ.
ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ,ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಜನಪ್ರತಿನಿಧಿಗಳು ಸಹ ನಿರಾಸಕ್ತಿ ವಹಿಸಿರುವುದು ಖಂಡನೀಯ. ಈ ಕೂಡಲೇ ಬೀದಿ ನಾಯಿಗಳ ಕಾಟ ವನ್ನು ತಪ್ಪಿಸಲು ಮುಂದಾಗಬೇಕು ಇಲ್ಲವಾದಲ್ಲಿ ಹೋರಾಟದ ಮುಖಾಂತರ ಆಡಳಿತಕ್ಕೆ ಬಿಸಿಮುಟ್ಟಿಸಬೇಕಾಗುತ್ತದೆ: ಎನ್.ಮಹಾವೀರ ಅಧ್ಯಕ್ಷ, ಉಸ್ಮಾನಿಯ ಕಾಯಿಪಲ್ಲೆ ಮಾರುಕಟ್ಟೆ ಸಂಘ, ರಾಯಚೂರು