ಮೈಕ್ರೋ ಫೈನಾನ್ಸ್‌ಗೆ ಸಿಇಒಗಳು ಟಾರ್ಗೆಟ್ ಫಿಕ್ಸ್ ಮಾಡಿದ ಕಾರಣ ಸಿಬ್ಬಂದಿ ಸಿಕ್ಕಸಿಕ್ಕವರಿಗೆ ಸೀರುಂಡೆಯಂತೆ ಸಾಲ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಸಾಲ ವಿತರಣೆ ಗುರಿ ಮುಟ್ಟುವ ಆತುರದಲ್ಲಿ ಸಿಬಿಲ್ ಚೆಕ್ ಮಾಡುವ ತಾಳ್ಮೆಯನ್ನೂ ಕಳೆದುಕೊಂಡಿದ್ದು ಇಂದಿನ ಎಲ್ಲ ಅವಘಡ, ಅನಾಹುತಕ್ಕೆ ಕಾರಣ.
ಕೋಲಾರ(ಫೆ.04): ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ಗಳ ಗದ್ದಲ ಮಿತಿಮೀರಿದ್ದು, ಸೂಕ್ಷ್ಮವಾಗಿ ಅವಲೋಕಿಸಿದರೆ ಇದು ಕಿರು ಸಾಲ ಅಲ್ಲ, ಬದಲಿಗೆ ಬಹುತೇಕ ಬಡ್ಡಿ ಮಾಫಿಯಾ ಎಂಬುದು ಗೋಚರವಾಗುತ್ತದೆ.
ಕಳೆದ ಒಂದು ದಶಕದಿಂದಲೂ ಮೈಕ್ರೋ ಫೈನಾನ್ಸ್ ಬಡವರ ಅಗತ್ಯಗಳಿಗೆ ರೇಷನ್- ಆಧಾರ್ ಕಾರ್ಡ್ ಮೇಲೆ ಸಾಲ ನೀಡುತ್ತಿತ್ತು. ಸಾಲದ ಮೊತ್ತವೂ ಚಿಕ್ಕದಿದ್ದು ಆಕಸ್ಮಿಕವಾಗಿ ತೊಂದರೆಯಾದರೆ ಹತ್ತಿಪ್ಪತ್ತು ಸಾವಿರ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯೂ ಇತ್ತು. ಸಾಲ ಕೊಡುತ್ತಿದ್ದವರು ಬಹುತೇಕ ಸ್ವಯಂ ಸೇವಾ ಸಂಸ್ಥೆಗಳಾಗಿದ್ದು ಮರುಪಾವತಿ ಸ್ವಲ್ಪ ತಡವಾದರೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದರು.
ಮೈಕ್ರೋ ಫೈನಾನ್ಸ್ ಕಾಟಕ್ಕೆ ಕರ್ನಾಟಕದಲ್ಲಿ ಮತ್ತೆ 4 ಬಲಿ!
ಬಡವರು ಸಂಕಷ್ಟಕ್ಕೆ ಸಿಲುಕಿದಾಗ ಸಾಲ ಪೂರ್ಣ ಪಾವತಿ ಆಗದಿದ್ದರೂ ಮತ್ತೊಂದು ಹೊಸ ಸಾಲದಲ್ಲಿ ಹಿಂದಿನದ್ದನ್ನು ಕಳೆದುಕೊಂಡು ಉಳಿದ ಹಣ ನೀಡುವ ಮೂಲಕ ನೆರವಿಗೆ ನಿಂತ ಉದಾಹರಣೆಗಳೂ ಕಣ್ಣ ಮುಂದಿದ್ದವು. ಈ ರೀತಿ ಸರಾಗವಾಗಿ ನಡೆಯುತ್ತಿದ್ದ ಮೈಕ್ರೋ ಫೈನಾನ್ಸ್ ಯಶಸ್ಸನ್ನು ಕಂಡ ಫೈನಾನ್ಸ್ ಕಂಪನಿಗಳು ದಿಢೀರ್ ಲಾಭದ ಉದ್ದೇಶಕ್ಕಾಗಿ ತಾವೂ ಸಹ ಕಿರುಸಾಲ ನೀಡಲು ಫೀಲ್ಡ್‌ಗೆ ಇಳಿದ ಪರಿಣಾಮ ಇಂದು ವಸೂಲಿಯಲ್ಲಿ ಬದಲಾವಣೆ ಉಂಟಾಗಿ ಸಾವು, ನೋವು, ಕಷ್ಟ, ನಷ್ಟ ಎದುರಿಸುವಂತಾಗಿದೆ.
ಖಾಸಗಿ ಕಂಪನಿಗಳು ವ್ಯಕ್ತಿಯೊಬ್ಬನಿಗೆ ಲಕ್ಷಗಟ್ಟಲೇ ಸಾಲ ಕೊಡುವುದು ಕಿರುಸಾಲ ಎನಿಸುತ್ತದೆಯೇ? ಹೋಗಲಿ, ಒಬ್ಬನೇ ವ್ಯಕ್ತಿಗೆ ಮೂರ್ನಾಲ್ಕು ಫೈನಾನ್ಸ್ ಕಂಪನಿಗಳು ಒಮ್ಮೆಲೆ ಸಾಲ ಕೊಡುವುದು ಕಿರುಸಾಲ ಯೋಜನೆಯ ಉದ್ದೇಶ ಎನಿಸುತ್ತದೆಯೇ? ಹೀಗಾಗಿ ಮೈಕ್ರೋ ಫೈನಾನ್ಸ್ ಕ್ಷೇತ್ರವಿಂದು ರಣರಂಗವಾಗಿದ್ದು ,ವಸೂಲಿ ಕ್ಲಿಷ್ಟ ಎನಿಸಿ ಹಿಂಸಾತ್ಮಕ ರೂಪ ತಾಳಿದೆ. ಸ್ವಯಂ ಸೇವಾ ಸಂಸ್ಥೆಗಳು, ಏಕವ್ಯಕ್ತಿ ನಡೆಸುವ ಮೈಕ್ರೋ ಫೈನಾನ್ಸ್ ಇಂದಿಗೂ ಯಾವುದೇ ಸಮಸ್ಯೆಯಿಲ್ಲದೆ ಆರಾಮಾಗಿ ನಡೆಯುತ್ತಿದೆ. ಸಮಸ್ಯೆ ಉಂಟಾಗಿರುವುದು ಕಂಪನಿ ಫೈನಾನ್ಸ್‌ಗಳಿಂದ ಎಂಬುದು ಸರ್ವ ವೇದ್ಯ.
ಟಾರ್ಗೆಟ್ ಆಟ, ಜನರಿಗೆ ಸಂಕಟ:
ಮೈಕ್ರೋ ಫೈನಾನ್ಸ್‌ಗೆ ಸಿಇಒಗಳು ಟಾರ್ಗೆಟ್ ಫಿಕ್ಸ್ ಮಾಡಿದ ಕಾರಣ ಸಿಬ್ಬಂದಿ ಸಿಕ್ಕಸಿಕ್ಕವರಿಗೆ ಸೀರುಂಡೆಯಂತೆ ಸಾಲ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಸಾಲ ವಿತರಣೆ ಗುರಿ ಮುಟ್ಟುವ ಆತುರದಲ್ಲಿ ಸಿಬಿಲ್ ಚೆಕ್ ಮಾಡುವ ತಾಳ್ಮೆಯನ್ನೂ ಕಳೆದುಕೊಂಡಿದ್ದು ಇಂದಿನ ಎಲ್ಲ ಅವಘಡ, ಅನಾಹುತಕ್ಕೆ ಕಾರಣ. ೨೦ ಸಾವಿರ ಸಂಬಳದ ಗಾರ್ಮೆಂಟ್ಸ್ ಮಹಿಳೆ ೨೫ ಸಾವಿರ ರು. ಕಂತು ಕಟ್ಟಲು ಹೇಗೆ ಸಾಧ್ಯ? ಮಹಿಳೆ ಈಗಾಗಲೇ ೩ ಕಡೆ ಸಾಲ ಪಡೆದುಕೊಂಡಿದ್ದಾಳೆ ಎಂಬುದನ್ನು ಪರಿಶೀಲಿಸದೆ ೪ ನೇ ಸಾಲ ಕೊಟ್ಟಿದ್ದು ಯಾರ ತಪ್ಪು? ಏಜೆಂಟರ ತಂತ್ರ,
ಮಹಿಳೆಯರು ಅತಂತ್ರ:
ಕಂಪನಿಗಳು ಸಾಲ ವಿತರಣೆಗೆ ಮುಂದಾದಾಗ ಸಿಬ್ಬಂದಿಗೆ ಜನರ ಸಂಪರ್ಕ ಕೊರತೆಯನ್ನು ತುಂಬಿದ ಸ್ಥಳೀಯ ಏಜೆಂಟರು, ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡಿದ್ದಾರೆ. ಮಹಿಳೆಯರ ಆಧಾರ್, ರೇಷನ್, ಓಟ್ ಕಾರ್ಡನ್ನು ಪಡೆದುಕೊಂಡು ತಮ್ಮ ಅನುಕೂಲಕ್ಕೆ ಸಾಲ ಪಡೆದುಕೊಂಡಿದ್ದಾರೆ. ಐನೂರು-ಸಾವಿರದ ಆಸೆಗೆ ಲಕ್ಷಗಟ್ಟಲೆ ಸಾಲದ ದಾಖಲಾತಿಗೆ ಅಮಾಯಕ ಮಹಿಳೆಯರು ಸಹಿ ಹಾಕಿದ್ದಾರೆ. ಸ್ವ ಸಹಾಯ ಸಂಘದಲ್ಲಿ ಶೇ.೩ಕ್ಕೆ ಸಾಲ ಪಡೆದುಕೊಂಡು ಶೇ.೫ಕ್ಕೆ ಬಡ್ಡಿಗೆ ಬಿಟ್ಟಿದ್ದ ಏಜೆಂಟರು ಇದೀಗ ಮೈಕ್ರೋ ಫೈನಾನ್ಸ್ ಗಲಾಟೆಯಲ್ಲಿ ಜನರನ್ನು ಎತ್ತಿಕಟ್ಟುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಸ್ವಂತ ಸಾಲಕ್ಕಿಂತ ಏಜೆಂಟರ ಸಾಲವೇ ಅಧಿಕವಾಗಿದ್ದು ಬೆಂಕಿಗೆ ತುಪ್ಪ ಸುರಿಯುವ ಮೂಲಕ ತಾವು ಮಾಡಿರುವ ದಂಧೆ ಬೆಳಕಿಗೆ ಬಾರದಂತೆ ತಡೆಯುವ ಹುನ್ನಾರವೂ ತೆರೆಮರೆಯಲ್ಲಿ ನಡೆಯುತ್ತಿದೆ.
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಈಗ ಗೌರ್ನರ್ ಅಂಗಳಕ್ಕೆ: 3 ಅಲ್ಲ 10 ವರ್ಷ ಜೈಲು ಶಿಕ್ಷೆ!
ಫೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಹಾಕುವುದು, ಕೆಟ್ಟದಾಗಿ ವರ್ತಿಸುವುದು ತಪ್ಪೇ ಆದರೂ ಬೆರಳೆಣಿಕೆ ಘಟನೆಗಳನ್ನು ಮುಂದಿರಿಸಿಕೊಂಡು ಎಲ್ಲ ಮೈಕ್ರೋ ಫೈನಾನ್ಸ್‌ಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಯಾವ ನ್ಯಾಯ? ಮನೆ, ಜಮೀನು, ಬಂಗಾರವನ್ನು ಬ್ಯಾಂಕಿಗೆ ಅಡಮಾನವಿಟ್ಟು ಆರ್‌ಬಿಐ ರೂಲ್ಸ್ ಪ್ರಕಾರ ಮೈಕ್ರೋ ಫೈನಾನ್ಸ್ ನಡೆಸುತ್ತಿರುವ ಮಾಲೀಕರನ್ನೂ ಮೀಟರ್ ಬಡ್ಡಿ ದಂಧೆಕೋರರ ಪಟ್ಟಿಗೆ ಸೇರಿಸಿದರೆ ಹೇಗೆ ಎಂಬುದು ಪ್ರಾಮಾಣಿಕರ ಪ್ರಶ್ನೆಯಾಗಿದೆ. ಅಮಾನವೀಯವಾಗಿ ವರ್ತಿಸುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕಿರುವುದು ಸಮಂಜಸವಾದರೂ ಎಲ್ಲ ಮೈಕ್ರೋ ಫೈನಾನ್ಸ್‌ಗಳನ್ನೂ ಕೆಟ್ಟದೆಂದು ಬಿಂಬಿಸುವುದು ಸರಿಯಲ್ಲ.
ಫೈನಾನ್ಸ್ ಕಂಪನಿಗಳಿಗೆ ಅಮಾಯಕರ ದಾಖಲೆಗಳನ್ನು ಕೊಟ್ಟು ಲಕ್ಷಾಂತರ ರು. ಸ್ವಂತಕ್ಕೆ ಸಾಲ ಪಡೆಯುವ ಮೂಲಕ ಸರ್ಕಾರ ಮತ್ತು ಸಮಾಜಕ್ಕೆ ಮೋಸ ಮಾಡಿರುವ ಏಜೆಂಟರು, ಮುಖಂಡರ ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸಬೇಕು, ಸರ್ಕಾರದಲ್ಲಿ ನೋಂದಣಿ ಆಗದ ಪೈನಾನ್ಸ್‌ಗಳು ಸಾಲ ನೀಡದಂತೆ ಪೊಲೀಸರು ಕ್ರಮ ವಹಿಸಬೇಕುಮ ಎಂದು ಮೈಕ್ರೋ ಫೈನಾನ್ಸ್ ಕಂಪನಿ ಮಾಲೀಕ ಶ್ರೀನಿವಾಸಲು ತಿಳಿಸಿದ್ದಾರೆ.
