ಕೋಡಿಚಿಕ್ಕಿನಹಳ್ಳಿ, ಅನುಗ್ರಹ ಲೇಔಟ್, ಭದ್ರಪ್ಪ ಲೇಔಟ್‌ನ ತಗ್ಗು ಪ್ರದೇಶ ಮನೆಗಳಲ್ಲಿ ಅವಾಂತರ ಸೃಷ್ಟಿಸಿದ ನೀರು, ಮನೆಗಳಲ್ಲಿ 2 ಅಡಿ ನಿಂತ ನೀರು, ದಿನಸಿ, ಎಲೆಕ್ಟ್ರಾನಿಕ್ ವಸ್ತುಗಳು ನಾಶ, ಮನೆ ಸ್ವಚ್ಛಗೊಳಿಸಲು ದಿನವಿಡೀ ಪರದಾಟ.
ಬೆಂಗಳೂರು(ಸೆ.02): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ತಗ್ಗುಪ್ರದೇಶದ ಸುಮಾರು 50ಕ್ಕೂ ಮನೆಗಳಿಗೆ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಸುಮಾರು ಎರಡು ವಾರದ ಬಳಿಕ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಪ್ರತಿ ಬಾರಿ ನಗರದಲ್ಲಿ ಮಳೆ ಬಂದಾಗ ಜಲಾವೃತಗೊಳ್ಳುವ ಕೋಡಿಚಿಕ್ಕನಹಳ್ಳಿ, ಅನುಗ್ರಹ ಲೇಔಟ್‌ನ ಮನೆಗಳಿಗೆ ಗುರುವಾರ ರಾತ್ರಿಯೂ ನೀರು ನುಗ್ಗಿತ್ತು.
ಸುಮಾರು ಎರಡು ಅಡಿಯಷ್ಟುನೀರು ಮನೆ ಒಳಗೆ, ವಾಹನ್ ಪಾರ್ಕಿಂಗ್ ಸ್ಥಳದಲ್ಲಿ ನಿಂತುಕೊಂಡಿತ್ತು. ಮಳೆ ಪ್ರಮಾಣ ಕಡಿಮೆಯಾದ ಬಳಿಕ ನೀರು ಹರಿದು ಹೋಗಿದೆ. ಇನ್ನು ಯಲಹಂಕ ವಲಯದ ಭದ್ರಪ್ಪ ಲೇಔಟ್‌ನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ. ನಗರದ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ದಿನ ಬಳಕೆ ವಸ್ತುಗಳಾದ ಹಾಸಿಗೆ, ಬಟ್ಟೆ, ಚಪ್ಪಲಿ, ದಿನಸಿ ಪದಾರ್ಥಗಳು ನೀರಿನಲ್ಲಿ ನೆಂದು ಹೋಗಿವೆ.
ಕೊನೆಗೂ ಶುಭಸುದ್ದಿ: ಇನ್ನು 4 ದಿನ ರಾಜ್ಯದಲ್ಲಿ ಉತ್ತಮ ಮಳೆ ಸಾಧ್ಯತೆ
ಇನ್ನು ವಾಷಿಂಗ್ ಮಿಶಿನ್, ಫ್ರೀಡ್ಜ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟು ಹೋಗಿವೆ. ತಗ್ಗುಪ್ರದೇಶದಲ್ಲಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನಗಳು ನೀರಿನಲ್ಲಿ ಮುಳುಗಿವೆ. ನೀರು ನುಗ್ಗಿದ ಮನೆಯ ನಿವಾಸಿಗಳು ಶುಕ್ರವಾರ ದಿನವಿಡೀ ಮನೆಯಲ್ಲಿ ತುಂಬಿಕೊಂಡ ನೀರು ಹೊರ ಹಾಕಿ ಮನೆ ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರು. ಮನೆಯ ನೀರಿನ ತೊಟ್ಟಿಯಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದರಿಂದ ಅದನ್ನು ಸ್ವಚ್ಛಗೊಳಿಸುವುದಕ್ಕೆ ಪರದಾಡಬೇಕಾಯಿತು.
ಬಿಬಿಎಂಪಿ ಅಧಿಕಾರಿಗಳಿಗೆ ಶಾಪ
ಪ್ರತಿಬಾರಿ ಮಳೆ ಬಂದಾಗಲೂ ಅನುಗ್ರಹ ಲೇಔಟ್‌ನ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸಾಕಷ್ಟುಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಾಜಕಾಲುವೆಯಲ್ಲಿನ ಹೂಳು ತೆಗೆಯುವುದು ಸೇರಿದಂತೆ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳುವುದನ್ನು ಬಿಟ್ಟರೆ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಸಂತ್ರಸ್ತರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಂದರ್ಯ ಪಾರ್ಕ್ ಜಲಾವೃತ
ಮಳೆಯಿಂದ ನಗರದ ಡಾಲರ್ಸ್ ಕಾಲೋನಿಯ ಸೌಂದರ್ಯ ಪಾರ್ಕ್ ಜಲಾವೃತಗೊಂಡಿತ್ತು. ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ಆಗಮಿಸಿದ ಜನರು ನಿರಾಸೆಯಿಂದ ವಾಪಾಸ್ ಹೋಗಬೇಕಾಯಿತು. ಪಾರ್ಕ್ನ ವಾಕಿಂಗ್ ಪಾತ್ ಮೇಲೆ ಸುಮಾರು ಒಂದು ಅಡಿಯಷ್ಟುನೀರು ನಿಂತುಕೊಂಡಿತ್ತು.
ಮಲೆನಾಡಲ್ಲಿ ಮಳೆ ಕೊರತೆ: ತಾಪಮಾನದಿಂದ ಕಾಫಿ , ಕಾಳು ಮೆಣಸು ನಾಶ!
25ಕ್ಕೂ ಅಧಿಕ ಮರ ಧರೆಗೆ
ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ನಗರದ 25ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಸಂಜಯ್ ನಗರ, ಆರ್.ಟಿ.ನಗರ, ಹೊಸೂರು ರಸ್ತೆ, ಸದಾಶಿವನಗರ ಸೇರಿದಂತೆ ವಿವಿಧ ಕಡೆ ರಸ್ತೆಯಲ್ಲಿ ಮರ ಹಾಗೂ ಮರದ ಕೊಂಬೆ ಬಿದ್ದಿರುವ ದೃಶ್ಯಗಳು ಕಂಡು ಬಂದವು.
ಸರಾಸರಿ 5.8 ಸೆಂ.ಮೀ ಮಳೆ
ಬೆಂಗಳೂರಿನಲ್ಲಿ ಗುರುವಾರ ಸರಾಸರಿ 5.8 ಸೆಂ.ಮೀ. ಮಳೆಯಾಗಿದೆ. ಅತಿ ಹೆಚ್ಚು ಮಳೆ ರಾಜಮಹಲ್ ಗುಟ್ಟಹಳ್ಳಿಯಲ್ಲಿ 13.6 ಸೆಂ.ಮೀ. ಮಳೆ ಬಿದ್ದ ವರದಿಯಾಗಿದೆ. ಉಳಿದಂತೆ ವಿದ್ಯಾರಣ್ಯಪುರ ಹಾಗೂ ದೊಡ್ಡ ಬೊಮ್ಮಸಂದ್ರದಲ್ಲಿ ತಲಾ 11.2, ಬಸವನಗುಡಿ, ವಿದ್ಯಾಪೀಠ ಹಾಗೂ ಕುಮಾರಸ್ವಾಮಿ ಲೇಔಟ್‌ನಲ್ಲಿ ತಲಾ 9.5, ಲಾಲ್‌ಬಾಗ್ ಹಾಗೂ ಸಂಪಗಿರಾಮನಗರದಲ್ಲಿ ತಲಾ 8.9, ವಿಶ್ವನಾಥ ನಾಗೇನಹಳ್ಳಿಯಲ್ಲಿ 8.8, ಎಚ್‌ಎಎಲ್ 8.7, ರಾಧಾಕೃಷ್ಣ ದೇವಸ್ಥಾನ ವಾರ್ಡ್, ಅಟ್ಟೂರು ಹಾಗೂ ಕೊಟ್ಟಿಗೆಹಳ್ಳಿಯಲ್ಲಿ ತಲಾ 8.6, ಪುಲಕೇಶಿನಗರದಲ್ಲಿ 8.4 ಸೆಂ.ಮೀ ಮಳೆಯಾದ ವರದಿಯಾಗಿದೆ. ಹೀಗೆ ನಗರದ ಒಟ್ಟು 95 ಕಡೆ 1 ಸೆಂ.ಮೀ.ಗೂ ಅಧಿಕ ಮಳೆಯಾದ ವರದಿಯಾಗಿದೆ.
